ನವದೆಹಲಿ: ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರವನ್ನು ಬಹಿಷ್ಕರಿಸಬೇಕು ಎಂದು ಬಿಜೆಪಿಯ ಕೆಲವು ನಾಯಕರು ಒತ್ತಾಯಿಸುತ್ತಿರುವಾಗಲೇ, ಇತ್ತೀಚೆಗೆ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ”ಅನಗತ್ಯವಾಗಿ ಸಿನಿಮಾಗಳು, ನಟರ ವಿರುದ್ಧ ಟೀಕೆ ಮಾಡಲು ಹೋಗಬಾರದು. ಹೀಗೆ ಮಾಡುವುದರಿಂದ ನಮ್ಮ ಜನೋಪಕಾರಿ ಕಾರ್ಯಕ್ರಮಗಳ ಮೇಲಿನ ಗಮನವು ಬೇರೇಡೆಗೆ ಹೊರಟು ಹೋಗುತ್ತದೆ,” ಎಂದು ಹೇಳಿದ್ದಾರೆ.
ಈ ಕಾರ್ಯಕಾರಿಣಿಯಲ್ಲಿ ಹಾಜರಿದ್ದ ಬಿಜೆಪಿಯ ಪಕ್ಷದ ನಾಯಕರೊಬ್ಬರು ಹೇಳುವ ಪ್ರಕಾರ, ಸುದ್ದಿಗೆ ಗ್ರಾಸವಾಗುವ ಟೀಕೆಗಳನ್ನು ಮಾಡಲು ಹೋಗಬೇಡಿ, ಇದರಿಂದ ನಮ್ಮ ಸರ್ಕಾರದ ಒಳ್ಳೆ ಕೆಲಸಗಳು ಬದಿಗೆ ಸರಿದು, ಗಮನವೆಲ್ಲ ವಿವಾದಗಳ ಮೇಲೆ ಕೇಂದ್ರೀಕರಿಸಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.
ಪಠಾಣ್ ಚಿತ್ರದಲ್ಲಿ ಬೇಷರಮ್ ರಂಗ್ ಹಾಡಿನಲ್ಲಿ ಹಿಂದೂ ಧರ್ಮಕ್ಕೆ ಅವಮಾನ ಮಾಡಲಾಗಿದೆ ಎಂದು ಹಿಂದು ಸಂಘಟನೆಗಳು ಪಠಾಣ್ ಚಿತ್ರದ ವಿರುದ್ಧ ಬಹಿಷ್ಕಾರಕ್ಕೆ ಕರೆ ನೀಡಿದ್ದವು. ಮಧ್ಯ ಪ್ರದೇಶದ ಬಿಜೆಪಿ ಗೃಹ ಸಚಿವರೂ ಸೇರಿದಂತೆ ಕೆಲವು ನಾಯಕರು ಪಠಾಣ್ ವಿರುದ್ಧ ತೀವ್ರ ಟೀಕೆ ಮಾಡಿದ್ದರು.
ಇದನ್ನೂ ಓದಿ | Pathaan Film | ಧಾರವಾಡದಲ್ಲಿ ಪಠಾಣ್ ಸಿನಿಮಾ ಪ್ರದರ್ಶನಕ್ಕೆ ಆಕ್ಷೇಪ: ಪೋಸ್ಟರ್ ಹರಿದು ಪ್ರತಿಭಟಿಸಿದ ಹಿಂದು ಕಾರ್ಯಕರ್ತರು