ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾದ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡಲು ಹಲವು ದಿಟ್ಟ ಕ್ರಮ ತೆಗೆದುಕೊಂಡಿದ್ದಾರೆ. ಅದರಲ್ಲೂ, ಕ್ರೂರ ಅಪರಾಧಿಗಳನ್ನು ಎನ್‌ಕೌಂಟರ್ ಮಾಡಲಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಬಿಎಸ್‌ಪಿ ಮಾಜಿ ಶಾಸಕ ರಾಜು ಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಹತ್ಯೆಯ ಆರೋಪಿ ಅರ್ಬಾಜ್ ಖಾನ್‌ನನ್ನು ಪ್ರಯಾಗರಾಜ್‌ನಲ್ಲಿ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಇದರ ಬೆನ್ನಲ್ಲೇ, ರಾಜು ಪಾಲ್ ಹತ್ಯೆಯ ಆರೋಪಿ, ಗ್ಯಾಂಗ್‌ಸ್ಟರ್ ಆತಿಕ್ ಅಹ್ಮದ್ ತಮ್ಮ, ಮಾಜಿ ಶಾಸಕ ಅಶ್ರಫ್‌ಗೆ ಎನ್‌ಕೌಂಟರ್ ಭೀತಿ ಶುರುವಾಗಿದೆ. ಹಾಗಾಗಿ, ನನ್ನನ್ನು ಜೈಲಿನಿಂದ ಬಿಡುಗಡೆ ಮಾಡಬೇಡಿ ಎಂಬುದಾಗಿ ಕೋರ್ಟ್‌ಗೆ ಮನವಿ ಮಾಡಿದ್ದಾನೆ.
ಉಮೇಶ್ ಪಾಲ್ ಹತ್ಯೆಯ ಹಿಂದೆಯೂ ಆತಿಕ್ ಅಹ್ಮದ್ ಹಾಗೂ ಅಶ್ರಫ್ ಹೆಸರು ಕೇಳಿಬಂದಿದೆ. ಅದರಲ್ಲೂ, ಅಶ್ರಫ್ ಬರೇಲಿಯ ಜೈಲಿನಲ್ಲಿದ್ದು, ವಿಚಾರಣೆಗಾಗಿ ಜೈಲಿನಿಂದ ಹೊರಗೆ ಹೋಗಬೇಕಾಗುತ್ತದೆ. ಹಾಗೆಯೇ, ಬೇರೆ ಜೈಲಿಗೂ ವರ್ಗಾವಣೆ ಮಾಡುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಎನ್‌ಕೌಂಟರ್ ಭೀತಿ ಇರುವ ಕಾರಣ ಅಶ್ರಫ್, ಬರೇಲಿ ಕೋರ್ಟ್ ಮೊರೆ ಹೋಗಿದ್ದಾನೆ. ನಾನು ಹೊರಗೆ ಬಂದರೆ ನನ್ನನ್ನು ಹತ್ಯೆ ಮಾಡಲಾಗುತ್ತದೆ. ಹಾಗಾಗಿ, ನನ್ನನ್ನು ಹೊರಗೆ ಬಿಡಬೇಡಿ ಎಂಬುದಾಗಿ ಅರ್ಜಿ ಸಲ್ಲಿಸಿದ್ದಾನೆ.
ಇದನ್ನೂ ಓದಿ: Prayagraj Encounter: ಉತ್ತರ ಪ್ರದೇಶದಲ್ಲಿ ಉಮೇಶ್ ಪಾಲ್ ಹತ್ಯೆ ಆರೋಪಿ ಅರ್ಬಾಜ್ ಖಾನ್ ಎನ್‌ಕೌಂಟರ್
ಬಿಎಸ್‌ಪಿ ಶಾಸಕರಾಗಿದ್ದ ರಾಜು ಪಾಲ್ ಅವರನ್ನು 2005ರಲ್ಲಿ ಕೊಲೆ ಮಾಡಲಾಗಿತ್ತು. ಕೊಲೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರನ್ನು ಕಳೆದ ಫೆಬ್ರವರಿ 24ರಂದು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಮಾಜಿ ಸಂಸದ ಆತಿಕ್ ಅಹ್ಮದ್‌ನನ್ನು ಬಂಧಿಸಿದ್ದು, ಸದ್ಯ ಅವರು ಜೈಲಿನಲ್ಲಿದ್ದಾರೆ. ಅಶ್ರಫ್ ಕೂಡ ಇದೇ ಪ್ರಕರಣದಲ್ಲಿ ಜೈಲುಪಾಲಾಗಿದ್ದಾನೆ. ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾದ ಕಾರಣ ಅವರನ್ನು ಹತ್ಯೆ ಮಾಡಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತ್ತು. ಆದರೆ, ಇದರ ಬೆನ್ನಲ್ಲೇ ಪೊಲೀಸರು ಉಮೇಶ್ ಪಾಲ್ ಹತ್ಯೆ ಆರೋಪಿ ಅರ್ಬಾಜ್ ಖಾನ್‌ನನ್ನು ಎನ್‌ಕೌಂಟರ್ ಮಾಡಿದ್ದಾರೆ. ಆತಿಕ್ ಅಹ್ಮದ್‌ಗೆ ಅರ್ಬಾಜ್ ʼʼಖಾನ್ ಆಪ್ತ ಎಂದು ತಿಳಿದುಬಂದಿದೆ.