Site icon Vistara News

ಬಿಜೆಪಿಯಲ್ಲೇ ಇದ್ದುಕೊಂಡು ಆಪ್​​ಗಾಗಿ ಕೆಲಸ ಮಾಡಿ; ಕಾರ್ಯಕರ್ತರಿಗೆ ಕರೆ ನೀಡಿದ ಅರವಿಂದ್ ಕೇಜ್ರಿವಾಲ್​

AAP MLAs to hold door-to-door campaign against arrest of Sisodia, Jain

ರಾಜ್​ಕೋಟ್​: ಗುಜರಾತ್​​ನಲ್ಲಿ ಇದೇ ವರ್ಷ ಡಿಸೆಂಬರ್​​ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಮೇಲೆ ಆಮ್​ ಆದ್ಮಿ ಪಕ್ಷ ಕಣ್ಣಿಟ್ಟಿದೆ. ಆಪ್​​ನ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal)​, ಗುಜರಾತ್​ನಲ್ಲಿ ಈಗಾಗಲೇ ಚುನಾವಣಾ ಪ್ರಚಾರ ಪ್ರಾರಂಭಿಸಿದ್ದಾರೆ. 10 ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್​ ಮುಷ್ಟಿಯಲ್ಲಿದ್ದ ಪಂಜಾಬ್​​ನ್ನು ಗೆದ್ದ ಬಳಿಕ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿಕೊಂಡ ಆಮ್​ ಆದ್ಮಿ ಪಕ್ಷ ಇದೀಗ ಪ್ರಧಾನಿ ಮೋದಿ ತವರು ರಾಜ್ಯವಾದ ಗುಜರಾತ್​ನಲ್ಲಿ ಹೇಗಾದರೂ ಗೆಲ್ಲಬೇಕು ಎಂಬ ಹಠ ತೊಟ್ಟಿದೆ.

ಇಂದು ಮತ್ತೆ ಗುಜರಾತ್​​ನಲ್ಲಿ ಚುನಾವಣಾ ಪ್ರಚಾರ ನಡೆಸಿರುವ ಅರವಿಂದ್ ಕೇಜ್ರಿವಾಲ್​ ಅಲ್ಲಿನ ಬಿಜೆಪಿ ಕಾರ್ಯಕರ್ತರಿಗೆ ಕರೆಯೊಂದನ್ನು ಕೊಟ್ಟಿದ್ದಾರೆ. ‘ನೀವೆಲ್ಲ ಬಿಜೆಪಿಯಲ್ಲೇ ಇರಿ. ಪಕ್ಷ ಬಿಟ್ಟು ಬರುವುದೇನೂ ಬೇಡ. ಆದರೆ ಅಲ್ಲಿಯೇ ಇದ್ದುಕೊಂಡು ಆಮ್​ ಆದ್ಮಿ ಪಕ್ಷಕ್ಕಾಗಿ ಕೆಲಸ ಮಾಡಿ. ನಿಮ್ಮ ಸಂಬಳವನ್ನೂ ಬಿಜೆಪಿಯಿಂದಲೇ ಪಡೆಯಿರಿ’ ಎಂದು ಗುಜರಾತ್​ ಬಿಜೆಪಿ ಕಾರ್ಯಕರ್ತರಿಗೆ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ‘ನಮಗೆ ಬಿಜೆಪಿ ನಾಯಕರು ಬೇಡ. ಆ ಪಕ್ಷದ ನಾಯಕರು ಅಲ್ಲಿಯೇ ಇರಲಿ. ಇತ್ತೀಚೆಗೆ ಹಳ್ಳಿಹಳ್ಳಿಗಳಲ್ಲಿ ಬಿಜೆಪಿ ನಾಯಕರು, ಬೂತ್​ ಮಟ್ಟದ, ತಾಲೂಕು ಮಟ್ಟದ ನಾಯಕರು ನಮ್ಮೊಂದಿಗೆ ಸೇರುತ್ತಿದ್ದಾರೆ. ಇಷ್ಟೆಲ್ಲ ವರ್ಷಗಳ ಕಾಲ ಆ ಪಕ್ಷಕ್ಕಾಗಿ ದುಡಿದರೂ, ಬಿಜೆಪಿ ಅವರಿಗೆ ಕೊಟ್ಟಿದ್ದೇನು’ ಎಂದು ಅರವಿಂದ್ ಕೇಜ್ರಿವಾಲ್​ ಪ್ರಶ್ನಿಸಿದ್ದಾರೆ.

ಹಾಗೇ, ಗುಜರಾತ್​ನಲ್ಲಿ ಆಪ್ ಸರ್ಕಾರ ಅಧಿಕಾರಕ್ಕೆ ಬಂದರೆ ಉಚಿತವಾಗಿ, ದಿನದ 24ಗಂಟೆ ವಿದ್ಯುತ್​ ನೀಡುತ್ತೇವೆ. ಉತ್ತಮ ವ್ಯವಸ್ಥೆಗಳುಳ್ಳ ಶಾಲೆಗಳನ್ನು ನಿರ್ಮಿಸುತ್ತೇವೆ. ಉಚಿತವಾಗಿ-ಅತ್ಯುತ್ತಮ ಶಿಕ್ಷಣ ನೀಡುತ್ತೇವೆ. ದೆಹಲಿ ಮಾದರಿಯ ಶಿಕ್ಷಣ ವ್ಯವಸ್ಥೆಯನ್ನೇ ಗುಜರಾತ್​​ನಲ್ಲೂ ಜಾರಿಗೊಳಿಸುತ್ತೇವೆ. ಹಾಗೇ, ಅತ್ಯುತ್ತಮ ಗುಣಮಟ್ಟದ ಉಚಿತ ಮತ್ತು ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡುತ್ತೇವೆ. ಪ್ರತಿ ಕುಟುಂಬದ ಮಹಿಳೆಯರಿಗೆ 1000 ರೂಪಾಯಿಯನ್ನು ಭತ್ಯೆ ರೂಪದಲ್ಲಿ ನೀಡುತ್ತೇವೆ ಎಂದೂ ಭರವಸೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಬಹುಮತ ಸಾಬೀತು ಪಡಿಸಿದ ಸಿಎಂ ಅರವಿಂದ್ ಕೇಜ್ರಿವಾಲ್​; 62 ಶಾಸಕರಲ್ಲಿ ಮತ ಹಾಕಿದ್ದು 58 ಮಂದಿ

Exit mobile version