Site icon Vistara News

ಮೇಘಾಲಯದಲ್ಲಿ ಕಾಂಗ್ರೆಸ್​​ ತೊರೆದ ಮಾಜಿ ಸಚಿವೆ; ಪಕ್ಷದೊಳಗಿನ ವ್ಯವಸ್ಥೆ ಹದಗೆಟ್ಟಿದೆ ಎಂದ ಡಾ. ಲಿಂಗ್ಡೋ

Dr Ampareen Lyngdoh Quit Congress In Meghalaya

ನವ ದೆಹಲಿ: ಮೇಘಾಲಯದಲ್ಲಿ ಬರುವ ವರ್ಷ ಮಾರ್ಚ್​ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದೇ ವೇಳೆ ಪಕ್ಷಾಂತರವೂ ಪ್ರಾರಂಭವಾಗಿದೆ. ಕಾಂಗ್ರೆಸ್​ ನಾಯಕಿ, ಮೇಘಾಲಯ ರಾಜ್ಯ ಮಾಜಿ ಸಚಿವೆ ಡಾ. ಎಂಪಿರೀನ್​ ಲಿಂಗ್ಡೋ ಅವರು ತಮ್ಮ ಪಕ್ಷವನ್ನು ತೊರೆದಿದ್ದಾರೆ. ಅವರು ಮೇಘಾಲಯದ ನ್ಯಾಷನಲ್​ ಪೀಪಲ್ಸ್​ ಪಾರ್ಟಿ (ಎನ್​ಪಿಪಿ) ಸೇರಲಿದ್ದಾರೆ ಎಂದು ವರದಿಯಾಗಿದೆ. ಅಂದಹಾಗೇ, ಈ ಎನ್​ಸಿಪಿ ಎನ್ನುವುದು ಬಿಜೆಪಿಯ ಮೈತ್ರಿಪಕ್ಷವಾಗಿದೆ.
ಕಾಂಗ್ರೆಸ್​ಗೆ ರಾಜೀನಾಮೆ ಕೊಟ್ಟ ಬಗ್ಗೆ ಟ್ವೀಟ್ ಮಾಡಿದ ಡಾ. ಎಂಪಿರೀನ್​ ಲಿಂಗ್ಡ, ‘ನಾನು ಕಾಂಗ್ರೆಸ್​ ಪಕ್ಷಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದೇನೆ’ ಎಂದು ಕ್ಯಾಪ್ಷನ್​ ಬರೆದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, ಕಾಂಗ್ರೆಸ್​ ವರಿಷ್ಠರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ಟ್ಯಾಗ್​ ಮಾಡಿದ್ದಾರೆ. ರಾಜೀನಾಮೆ ಪತ್ರದ ಪ್ರತಿಯನ್ನೂ ಪೋಸ್ಟ್ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್​ ಪಕ್ಷದೊಳಗೆ ವ್ಯವಸ್ಥೆಗಳು ಸರಿಯಿಲ್ಲ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿರುವ ಡಾ. ಲಿಂಗ್ಡೋ, ‘ನಾನು ನನ್ನ ಜೀವನದ ಮುಕ್ಕಾಲು ಭಾಗವನ್ನು ಕಾಂಗ್ರೆಸ್​​ಗಾಗಿಯೇ ದುಡಿದು ಕಳೆದೆ. ಆದರೆ ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ, ಇದು ದಿಕ್ಕುತಪ್ಪುತ್ತಿರುವಂತೆ ಗೋಚರಿಸುತ್ತಿದೆ. ಈ ಬಗ್ಗೆ ಪಕ್ಷ ಮತ್ತು ಇದರ ವರಿಷ್ಠರು ಗಂಭೀರವಾಗಿ ಚಿಂತನೆ ಮಾಡಬೇಕಾದ ಅನಿವಾರ್ಯತೆ ಇದೆ. ಕಾಂಗ್ರೆಸ್​​ನಲ್ಲಿ ನಾಯಕರು ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ಮೇಘಾಲಯದಲ್ಲಿ ಕಾಂಗ್ರೆಸ್ ಜನರೊಂದಿಗೆ ಸಂಪರ್ಕವನ್ನೇ ಕಡಿದುಕೊಂಡಿದೆ. ಜನರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ನಾನು ಈ ಪಕ್ಷದಲ್ಲಿದ್ದು ರಾಜಕೀಯ ಭವಿಷ್ಯ ಕಾಣಬಹುದು, ಜನಸೇವೆ ಮಾಡಬಹುದು ಎಂದು ಯಾರೊಬ್ಬರೂ ಭಾವಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಇಲ್ಲಿದೆ ಎಂದೂ ಲಿಂಗ್ಡೋ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್​​ಗೆ ಹೀಗೆ ಪ್ರಮುಖರು ಬಿಟ್ಟು ಹೋಗುತ್ತಿರುವುದು ಹೊಸದಲ್ಲ. ಜ್ಯೋತಿರಾದಿತ್ಯ ಸಿಂಧಿಯಾ, ಆರ್​.ಪಿ. ಎನ್​ ಸಿಂಗ್​, ಸುನೀಲ್ ಜಾಖರ್, ಅಶ್ವನಿ ಕುಮಾರ್​, ಕಪಿಲ್​ ಸಿಬಲ್​, ಕ್ಯಾಪ್ಟನ್​ ಅಮರಿಂದರ್​ ಸಿಂಗ್​, ಹಾರ್ದಿಕ್​ ಪಟೇಲ್​, ಜೈವೀರ್​ ಶೆರ್ಗಿಲ್ ಮತ್ತು ಇತ್ತೀಚೆಗಷ್ಟೇ ಗುಲಾಂ ನಬಿ ಆಜಾದ್​ ಕಾಂಗ್ರೆಸ್ ತೊರೆದಿದ್ದಾರೆ. ಎಲ್ಲರೂ ಸಹ ಪಕ್ಷದೊಳಗೆ ವ್ಯವಸ್ಥೆ ಸರಿಯಿಲ್ಲ ಎಂದೇ ಹೇಳುತ್ತಿದ್ದಾರೆ.​

ಇದನ್ನೂ ಓದಿ: Belagavi session | ಸುವರ್ಣ ಸೌಧದಲ್ಲಿ ಸಾವರ್ಕರ್‌ ಫೋಟೊ: ಕಾಂಗ್ರೆಸ್‌ ಮೌನದ ಹಿಂದಿದ್ದಾರೆ ಸೋನಿಯಾ ಗಾಂಧಿ!

Exit mobile version