Site icon Vistara News

15 ನಿಮಿಷ ಕಾದರೂ ಸಿಗಲಿಲ್ಲ ಸೀಟ್‌; ಬೇಸರ ಹೊರಹಾಕಿದ ಮಾಜಿ ಕೇಂದ್ರ ಸಚಿವ ಡಾ. ಹರ್ಷವರ್ಧನ್

Harsh Vardhan

ನವದೆಹಲಿ: ದೆಹಲಿಯ ನೂತನ ಲೆಫ್ಟಿನೆಂಟ್‌ ಗವರ್ನರ್‌ ಆಗಿ ನಿನ್ನೆ ವಿನಯ್‌ ಕುಮಾರ್‌ ಸಕ್ಸೇನಾ ನಿನ್ನೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ ಈ ಸಮಾರಂಭದ ವೇಳೆ ಒಂದು ಹೈಡ್ರಾಮಾ ನಡೆದಿದೆ. ಮಾಜಿ ಕೇಂದ್ರ ಸಚಿವ ಡಾ. ಹರ್ಷವರ್ಧನ್‌ (Dr Harsh Vardhan) ಕಾರ್ಯಕ್ರಮಕ್ಕೆ ಆಗಮಿಸಿದ್ದವರು, ಕೆಲವೇ ಹೊತ್ತಲ್ಲಿ ಹೊರನಡೆದಿದ್ದರು. ಕುಳಿತುಕೊಳ್ಳಲು ಒಂದೂ ಆಸನವಿಲ್ಲ. ಸಂಸದರಿಗಾಗಿ ಸೀಟ್‌ ಕಾಯ್ದಿರಿಸಿಲ್ಲ. ಹೀಗಾಗಿ ವಾಪಸ್‌ ಹೋಗುತ್ತಿದ್ದೇನೆ ಎಂದು ಹೇಳಿದ್ದರು. ಹೀಗೆ ಅವರು ಹೊರ ಹೋದ ಬೆನ್ನಲ್ಲೇ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಶುರುವಾಗಿತ್ತು. ಕೇಂದ್ರದ ಮಾಜಿ ಸಚಿವರಿಗೇ ಆಸನ ಇಲ್ಲವಾ? ಇದು ಅವಮಾನ ಎಂಬಿತ್ಯಾದಿ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಇಷ್ಟೆಲ್ಲ ಆದ ಬಳಿಕ ಡಾ. ಹರ್ಷವರ್ಧನ್‌ ಟ್ವೀಟ್‌ ಮೂಲಕ ನಿನ್ನೆಯ ಸನ್ನಿವೇಶವನ್ನು ವಿವರಿಸಿದ್ದಾರೆ. ನಾನು ವಿನಯ್‌ ಕುಮಾರ್‌ ಸಕ್ಸೇನಾ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹೋದೆ. ಅಲ್ಲಿ ಸೀಟ್‌ ಇರಲಿಲ್ಲ. ಹಾಗಿದ್ದಾಗ್ಯೂ ಅಧಿಕಾರಿಯೊಬ್ಬರು ನನ್ನನ್ನು ಒಂದು ಸೀಟ್‌ನಲ್ಲಿ ಕೂರಿಸಿದರು. ಆದರೆ ಇನ್ನೊಬ್ಬ ಅಧಿಕಾರಿ ಬಂದು ಏಳುವಂತೆ ಹೇಳಿದರು. ಕೇಳಿದ್ದಕ್ಕೆ ಇದೆಲ್ಲ ಕಾಯ್ದಿರಿಸಿದ ಆಸನಗಳು ಎಂದರು. ನಾನು ಸುಮಾರು 15 ನಿಮಿಷ ಕಾದಿದ್ದೇನೆ. ನಂತರ ಅಲ್ಲಿ ನಿಲ್ಲಲಾಗದೆ ವಾಪಸ್‌ ಬಂದೆ ಎಂದು ತಿಳಿಸಿದ್ದಾರೆ. ನಾನಿಲ್ಲಿಯ ಸಂಸದ. ಸಾರ್ವಜನಿಕ ಜೀವನವನ್ನು ಇದೇ ದೆಹಲಿಯಲ್ಲೇ ಕಳೆಯುತ್ತಿದ್ದೇನೆ. ಹಾಗಿದ್ದಾಗ್ಯೂ ನನಗೆ ನೂತನ ಲೆಫ್ಟಿನೆಂಟ್‌ ಗವರ್ನರ್‌ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ಇರುವುದಕ್ಕೆ ಬೇಸರವಿದೆ ಎಂದೂ ಬರೆದುಕೊಂಡಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಏನಿದೆ?
ದೆಹಲಿ ಚಾಂದನಿ ಚೌಕ್‌ದ ಸಂಸದ, ಮಾಜಿ ಕೇಂದ್ರ ಸಚಿವ ಹರ್ಷವರ್ಧನ್‌ ಅವರು ನಿನ್ನೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿರುವ ಸ್ಥಳದಿಂದ ವೇಗವಾಗಿ ವಾಪಸ್‌ ಹೋಗುತ್ತಿದ್ದರು. ಅವರೊಂದಿಗೆ ಮೂರ್ನಾಲ್ಕು ಪೊಲೀಸ್‌ ಅಧಿಕಾರಿಗಳೂ ಇದ್ದರು. ಈ ವೇಳೆ ಅಲ್ಲಿದ್ದ ಅಧಿಕಾರಿಯೊಬ್ಬರು ಯಾಕೆ? ಏನಾಯಿತು ಸರ್‌ ಎಂದು ಕೇಳುತ್ತಾರೆ. ಅದಕ್ಕೆ ಸ್ವಲ್ಪ ಕೋಪದಿಂದಲೇ ಉತ್ತರಿಸಿದ ಹರ್ಷವರ್ಧನ್‌, ಲೋಕಸಭಾ ಸಂಸದರು ಕುಳಿತುಕೊಳ್ಳಲು ಒಂದೇ ಒಂದು ಆಸನವನ್ನೂ ಕಾಯ್ದಿರಿಸಿಲ್ಲ. ಸೀಟ್‌ ಇಲ್ಲ ಎಂದು ಹೇಳುತ್ತ ಹೋದರು. ಈ ವಿಡಿಯೋವನ್ನು ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಉಸ್ತುವಾರಿ ರೋಹನ್‌ ಗುಪ್ತಾ ಶೇರ್‌ ಮಾಡಿಕೊಂಡು, ಭಾರತದ ಮಾಧ್ಯಮಗಳು ಇಂಥ ದೃಶ್ಯಗಳನ್ನು ತೋರಿಸುವ ಧೈರ್ಯ ಮಾಡುತ್ತವೆಯೇ? ಸಮಾರಂಭದಲ್ಲಿ ಕುಳಿತುಕೊಳ್ಳಲು ಆಸನ ಸಿಗಲಿಲ್ಲವೆಂದು ಹರ್ಷವರ್ಧನ್‌ ಕೋಪಗೊಂಡಂತೆ ಕಾಣುತ್ತಿದೆ. ಬಿಜೆಪಿಯಲ್ಲಿ ಮಾಜಿ ಸಚಿವರು, ಹಿರಿಯ ನಾಯಕರ ಪರಿಸ್ಥಿತಿ ಹೀಗೇ ಎಂದು ಹೇಳಿದ್ದರು.

ಇದನ್ನೂ ಓದಿ: 1 ಲಕ್ಷ ಡ್ರೋನ್‌ ಗಳಿಗೆ ಬೇಡಿಕೆಯಾಗಲಿದೆ ಎಂದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯ

Exit mobile version