ನವ ದೆಹಲಿ: ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಮೊದಲ ಸುತ್ತು ಮುಕ್ತಾಯಗೊಂಡಿದೆ. ಸದ್ಯ ದ್ರೌಪದಿ ಮುರ್ಮು ತಮ್ಮ ಪ್ರತಿಸ್ಪರ್ಧಿ ಯಶವಂತ್ ಸಿನ್ಹಾರಿಗಿಂತಲೂ ಗಣನೀಯ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರ ಮತ ಎಣಿಕೆ ಮುಕ್ತಾಯದ ಹೊತ್ತಿಗೆ ದ್ರೌಪದಿ ಮುರ್ಮು 540 ಮತಗಳನ್ನು ಗಳಿಸಿದ್ದರೆ, ಯಶವಂತ್ ಸಿನ್ಹಾ 208 ವೋಟ್ ಪಡೆದಿದ್ದಾರೆ. ಅಂದರೆ ಮುರ್ಮು ಅವರಿಗೆ ಸಿಕ್ಕ ಮತಗಳ ಮೌಲ್ಯ 3,78,000 ಮತ್ತು ಸಿನ್ಹಾ ಪಡೆದ ಮತಗಳ ಮೌಲ್ಯ 1,45,600. ಇನ್ನು ಒಟ್ಟು 15 ಮತಗಳು ಅಮಾನ್ಯಗೊಂಡಿವೆ. ಇದೀಗ ಶಾಸಕರ ಮತಗಳ ಎಣಿಕೆ ಪ್ರಾರಂಭವಾಗಿದ್ದು, ಅದು ಮುಗಿದ ಬಳಿಕ ಫಲಿತಾಂಶ ಹೊರಬೀಳಲಿದೆ.
ಈಗಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವಧಿ ಜುಲೈ 24ರಂದು ಮುಕ್ತಾಯಗೊಳ್ಳಲಿದ್ದು, ಅದರ ಒಳಗೆ ಹೊಸ ರಾಷ್ಟ್ರಪತಿ ಆಯ್ಕೆಯಾಗಲಿದೆ. ಎನ್‌ಡಿಎ ಒಕ್ಕೂಟದ ಮತ ಮೌಲ್ಯ ಜಾಸ್ತಿ ಇರುವುದರಿಂದ ದ್ರೌಪದಿ ಮುರ್ಮು ಗೆಲುವೇ ನಿಶ್ಚಿತವಾಗಿದೆ. ದ್ರೌಪದಿ ಮುರ್ಮು ಗೆಲುವಿನ ಸಂಭ್ರಮ ಅವರ ಹುಟ್ಟೂರಲ್ಲಿ ಈಗಾಗಲೇ ಶುರುವಾಗಿದೆ. ಒಡಿಶಾದ ರೈರಂಗಪುರದಲ್ಲಿ ಸ್ಥಳೀಯರು ಡ್ರಮ್ ಬಾರಿಸುತ್ತ, ನೃತ್ಯವಾಡುತ್ತಿದ್ದಾರೆ. ಹಾಗೇ, ಇಂದು ಸಂಜೆ ಫಲಿತಾಂಶ ಹೊರಬೀಳುವ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿ, ಮುರ್ಮು ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಹಾಗೇ, ದ್ರೌಪದಿ ಮುರ್ಮು ಗೆಲುವು ಖಚಿತವಾಗುತ್ತಿದ್ದಂತೆ, ಬಿಜೆಪಿ ಪ್ರಮುಖರು ದೆಹಲಿ ಪ್ರಧಾನ ಕಚೇರಿಯಿಂದ ರೋಡ್ ಶೋ (ವಿಜಯ ಯಾತ್ರೆ) ನಡೆಸಲು ಯೋಜನೆ ರೂಪಿಸಿದ್ದಾರೆ. ಅಷ್ಟೇ ಅಲ್ಲ, ಈಗಾಗಲೇ ಕೇಂದ್ರ ಸಚಿವರುಗಳೂ ಕೂಡ ಈಗಾಗಲೇ ಸಡಗರದಲ್ಲಿದ್ದಾರೆ.
ಒಡಿಶಾದ ಶಾಲೆಯಲ್ಲಿ ಸಂಭ್ರಮ
ಒಡಿಶಾದ ಎಸ್‌ಎಲ್‌ಎಸ್ ಮೆಮೋರಿಯಲ್ ಶಾಲೆಯಲ್ಲಿ ಕೂಡ ಈಗಾಗಲೇ ಸಂಭ್ರಮಾಚರಣೆ ಪ್ರಾರಂಭವಾಗಿದೆ. ಈ ಶಾಲೆಯನ್ನು ದ್ರೌಪದಿ ಮುರ್ಮು ತನ್ನ ಮೃತ ಪತಿ ಮತ್ತು ಇಬ್ಬರು ಮಕ್ಕಳ ನೆನಪಿನಲ್ಲಿ ಕಟ್ಟಿಸಿದ್ದಾರೆ.
ಇದನ್ನೂ ಓದಿ: ನಮ್ಮೂರ ಮಗಳು ರಾಷ್ಟ್ರಪತಿ ಆಗ್ತಾಳೆ; ದ್ರೌಪದಿ ಮುರ್ಮು ಹುಟ್ಟೂರಲ್ಲಿ ಸಂಭ್ರಮ, ಲಡ್ಡು ತಯಾರಿಕೆ