ಕೋಲ್ಕತ್ತ: ಪಶ್ಚಿಮ ಬಂಗಾಳ ಶಾಲಾ ನೇಮಕಾತಿ ಹಗರಣದಲ್ಲಿ ಆರೋಪಿಯಾಗಿರುವ ಅರ್ಪಿತಾ ಮುಖರ್ಜಿ ಇ ಡಿ ಕಸ್ಟಡಿಯಲ್ಲಿದ್ದಾರೆ. ಮಾಜಿ ಸಚಿವ ಪಾರ್ಥ ಚಟರ್ಜಿ ಆಪ್ತೆಯಾಗಿರುವ ಆಕೆಯ ಮನೆಯಲ್ಲಿ 50 ಕೋಟಿ ರೂಪಾಯಿಗೂ ಅಧಿಕ ನಗದು ಪತ್ತೆಯಾಗಿದೆ. ಅದರೊಂದಿಗೆ ಅಪಾರ ಪ್ರಮಾಣದಲ್ಲಿ ಬೆಳ್ಳಿ ತಟ್ಟೆಗಳು, ಲೈಂಗಿಕ ಆಟಿಕೆಗಳು (ಸೆಕ್ಸ್ ಟಾಯ್ಸ್) ಕೂಡ ಸಿಕ್ಕಿವೆ. ಇದೆಲ್ಲದರ ಮಧ್ಯೆ ಅರ್ಪಿತಾಳ ನಾಲ್ಕು ಕಾರುಗಳು ನಾಪತ್ತೆಯಾಗಿವೆ ಎಂದು ವರದಿಯಾಗಿತ್ತು. ಆದರೆ ಆ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲ್ಲ. ಆದರೆ ಇದೀಗ ಅರ್ಪಿತಾ ಕಾರು ಚಾಲಕ ಪ್ರಣಬ್ ಭಟ್ಟಾಚಾರ್ಯ ಇದನ್ನು ಸ್ಪಷ್ಟಪಡಿಸಿದ್ದಾರೆ.
ಅರ್ಪಿತಾ ಹೆಸರಿನಲ್ಲಿರುವ ಮೂರ್ನಾಲ್ಕು ವಾಹನಗಳು ಕಳೆದ ಮೂರು ತಿಂಗಳಿಂದ ಕಾಣಿಸುತ್ತಿಲ್ಲ. ನಾನು ಅರ್ಪಿತಾ ಮುಖರ್ಜಿ ಚಾಲಕನಾಗಿದ್ದರೂ ಇಷ್ಟು ದಿನಗಳಲ್ಲಿ ಒಮ್ಮೆಯೂ ಆ ಕಾರುಗಳನ್ನು ಡ್ರೈವ್ ಮಾಡಿರಲಿಲ್ಲ. ಅವರ ಹೊಂಡಾ ಸಿಟಿ ಕಾರು ಚಾಲನೆಗೆ ಮಾತ್ರ ನನಗೆ ಅವಕಾಶ ಇತ್ತು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ʼಪಾರ್ಥ ಚಟರ್ಜಿ ಹಲವು ಬಾರಿ ಅರ್ಪಿತಾ ಮನೆಗೆ ಬಂದಿದ್ದನ್ನು ನಾನು ನೋಡಿದ್ದೇನೆʼ ಎಂದೂ ಮಾಹಿತಿ ನೀಡಿದ್ದಾರೆ.
ಇ ಡಿ ಅಧಿಕಾರಿಗಳು ನನ್ನನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಅರ್ಪಿತಾ ಮನೆಗೆ ಇ ಡಿ ಅಧಿಕಾರಿಗಳು ಬಂದಾಗ ಅಲ್ಲಿ ನಾನೂ ಇದ್ದೆ. ನನ್ನ ಫೋನ್‌ನ್ನು ಅವರು ತೆಗೆದುಕೊಂಡರು ಮತ್ತು ಕೋಣೆಯೊಂದರಲ್ಲಿ ಕುಳಿತುಕೊಳ್ಳುವಂತೆ ಹೇಳಿದರು. ಹಾಗೇ, ಅರ್ಪಿತಾಗೆ ಸಂಬಂಧಪಟ್ಟು ನನಗೆ ಗೊತ್ತಿರುವ ಎಲ್ಲ ವಿಚಾರಗಳನ್ನೂ ತಿಳಿಸುವಂತೆ ಹೇಳಿದರು ಎಂದೂ ಕಾರು ಚಾಲಕ ಹೇಳಿದ್ದಾಗಿ ಇಂಡಿಯಾ ಟುಡೆ ಮಾಧ್ಯಮ ವರದಿ ಮಾಡಿದೆ. ಅಂದಹಾಗೇ, ಇದೀಗ ಕಾಣೆಯಾದ ಕಾರುಗಳಲ್ಲೂ ಅಪಾರ ಹಣವಿದೆ ಎಂದೂ ಹೇಳಲಾಗಿದೆ.
ಇದನ್ನೂ ಓದಿ: ಹಣದ ಗೋದಾಮು ಆಗಿರುವ ಅರ್ಪಿತಾ ಮನೆಯಲ್ಲಿದ್ದ 4 ಐಷಾರಾಮಿ ಕಾರುಗಳು ನಾಪತ್ತೆ !
ಪಾರ್ಥ ಚಟರ್ಜಿ ಶಿಕ್ಷಣ ಸಚಿವರಾಗಿದ್ದಾಗ ನಡೆದ ಹಗರಣ ಇದಾಗಿದ್ದು, ಇದೀಗ ಇ ಡಿ ತನಿಖೆ ಚುರುಕುಗೊಂಡಿದೆ. ಪಾರ್ಥನನ್ನು ಇ ಡಿ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ ಅವರು ಇನ್ನೂ ವಿಚಾರಣೆಗೆ ಒಳಪಟ್ಟಿಲ್ಲ. ಆದರೆ ಜುಲೈ 29ರಂದು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಅವರು ʼನನ್ನ ವಿರುದ್ಧ ವ್ಯವಸ್ಥಿತವಾಗಿ ಸಂಚು ಹೆಣೆಯಲಾಗಿದೆ. ನಾನೀಗ ಏನೂ ಹೇಳುವುದಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಣವಿದ್ದ ಕೋಣೆಗಳಿಗೆ ನನಗೆ ಪ್ರವೇಶ ಇರಲಿಲ್ಲ; ಇ ಡಿ ಎದುರು ಬಾಯ್ಬಿಟ್ಟ ಅರ್ಪಿತಾ ಮುಖರ್ಜಿ