ಹೈದರಾಬಾದ್: ಜಗತ್ತಿನಲ್ಲಿ ಎಂತೆಂಥಾ ಕ್ರೂರಿಗಳು ಇದ್ದಾರೆ…ಪುಟಾಣಿ ಮಕ್ಕಳನ್ನೂ ಬಿಡದ ಕಾಮುಕರು ಹೆಚ್ಚುತ್ತಿದ್ದಾರೆ. ಮೂರು-ನಾಲ್ಕು ವರ್ಷ ತುಂಬಿದ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಏರಿಕೆಯಾಗುತ್ತಿವೆ. ಹೈದರಾಬಾದ್ನ ಬಂಜಾರಾ ಹಿಲ್ಸ್ನಲ್ಲಿ ಇಂಥದ್ದೇ ಒಂದು ದುರ್ಘಟನೆ ನಡೆದಿದೆ. ಇಲ್ಲಿನ ಶಾಲೆಯೊಂದರ ಶಿಶುವಿಹಾರ ವಿಭಾಗದ ಪ್ರಾಂಶುಪಾಲರ ಕಾರು ಚಾಲಕನೊಬ್ಬ ಅದೇ ಶಿಶುವಿಹಾರಕ್ಕೆ ಬರುತ್ತಿದ್ದ ನಾಲ್ಕು ವರ್ಷದ ಬಾಲಕಿಯ ಮೇಲೆ ಕಳೆದ 2 ತಿಂಗಳಿಂದ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದ. ಆತನನ್ನು ಈಗ ಪೊಲೀಸರು ಬಂಧಿಸಿದ್ದಾರೆ.
ಚಾಲಕನ ಕಾಮುಕತನ ಬೆಳಕಿಗೆ ಬರುತ್ತಿದ್ದಂತೆ ಆ ಶಿಶುವಿಹಾರಕ್ಕೆ, ಆ ಶಾಲೆಗೆ ಮಕ್ಕಳನ್ನು ಕಳಿಸುತ್ತಿದ್ದ ಪಾಲಕರೆಲ್ಲರೂ ಸೇರಿ ಪ್ರತಿಭಟನೆ ನಡೆಸಿದ್ದಾರೆ. ಶಾಲೆಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕ್ರೋಧ ಭರಿತ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ಶಾಲೆ ಸುತ್ತಲೂ ಭದ್ರತೆ ಹೆಚ್ಚಿಸಲಾಗಿದ್ದು, ಮೂರು ದಿನ ರಜಾವನ್ನೂ ಘೋಷಿಸಲಾಗಿದೆ.
ಈ ಬಾಲಕಿಯ ವರ್ತನೆಯಲ್ಲಿ ಕಳೆದ ಎರಡು ತಿಂಗಳಿಂದ ಬದಲಾವಣೆ ಆಗುತ್ತಿತ್ತು. ಒಂದೇ ಸಮ ಅಳುತ್ತಿದ್ದಳು. ಖಿನ್ನತೆಗೆ ಜಾರುತ್ತಿದ್ದಳು. ಅದರಲ್ಲೂ ಸೋಮವಾರ (ಅ.17) ಪ್ರಾಂಶುಪಾಲರ ಕೊಠಡಿ ಎದುರೇ ಇರುವ ಲ್ಯಾಬ್ನಲ್ಲಿ ಆಕೆಯ ಮೇಲೆ ಚಾಲಕ ಅತ್ಯಾಚಾರ ಮಾಡಿದ್ದ. ಅಂದೂ ಮನೆಗೆ ಬಂದವಳು ಅಳುತ್ತಿದ್ದಳು. ಆಗ ಆಕೆಯ ತಾಯಿ ಪುಟ್ಟ ಹುಡುಗಿಯನ್ನು ನಂಬಿಸಿ, ಏನೇನೋ ಹೇಳಿ ವಿಷಯ ಕೇಳಿದ್ದಾಳೆ. ಆಗ ಬಾಲಕಿ ಶಾಲೆಯಲ್ಲಿ ನಡೆದ್ದನ್ನು ಹೇಳಿದ್ದಾಳೆ. ಮರುದಿನ ತಂದೆ-ತಾಯಿ ಇಬ್ಬರೂ ಮಗಳೊಂದಿಗೆ ಶಿಶುವಿಹಾರಕ್ಕೆ ಬಂದಿದ್ದರು. ಆಗ ಆ ಹುಡುಗಿ ಆರೋಪಿ ಚಾಲಕನನ್ನು ತೋರಿಸಿದ್ದಾಳೆ. ಕೂಡಲೇ ಪಾಲಕರು ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲಕಿಗೆ ಭಯ ಹೋಗಲಾಡಿಸಲು ಸದ್ಯ ಕೌನ್ಸಿಲಿಂಗ್ ಮಾಡಲಾಗುತ್ತಿದೆ.
ಇದನ್ನೂ ಓದಿ: ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ ಹಿನ್ನೆಲೆ: ಮಂಡ್ಯ ಜಿಲ್ಲೆಯಲ್ಲಿ ಅನಧಿಕೃತ ಟ್ಯೂಷನ್ಗೆ ನಿಷೇಧ