Site icon Vistara News

Draupadi Murmu | ಅತಿ ಕಿರಿಯ ರಾಷ್ಟ್ರಪತಿ ಮುರ್ಮು; ಉಳಿದವರು ಹುದ್ದೆಗೇರುವಾಗ ಎಷ್ಟು ವಯಸ್ಸಾಗಿತ್ತು?

Draupadi Murmu 2

ನವ ದೆಹಲಿ: ದ್ರೌಪದಿ ಮುರ್ಮು ಇಂದು 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಅವರಿಗೆ ಇನ್ನೂ 64 ವರ್ಷ. ಇಷ್ಟು ಕಿರಿಯ ವಯಸ್ಸಿನಲ್ಲಿ ರಾಷ್ಟ್ರಪತಿ ಹುದ್ದೆಗೆ ಏರಿದ ಮೊದಲಿಗರೂ ಹೌದು. ಬುಡಕಟ್ಟು ಸಮುದಾಯದ ಮೊದಲ ವ್ಯಕ್ತಿಯೊಬ್ಬರು ರಾಷ್ಟ್ರಪತಿ ಹುದ್ದೆಯಾದ ಹೆಗ್ಗಳಿಕೆಯೂ ಇವರದ್ದು. ದಾಖಲಿಸಬಹುದಾದ ಇನ್ನೊಂದು ಅಂಶವೆಂದರೆ, ಇದುವರೆಗೂ ಭಾರತದಲ್ಲಿ ಸ್ವಾತಂತ್ರ್ಯಾ ನಂತರ ಹುಟ್ಟಿದವರು ರಾಷ್ಟ್ರಪತಿ ಆಗಿರಲಿಲ್ಲ. ಇದುವರೆಗೆ ಈ ಹುದ್ದೆ ಅಲಂಕರಿಸಿದ ಎಲ್ಲರೂ 1947ಕ್ಕೂ ಪೂರ್ವದಲ್ಲಿ ಜನಿಸಿದವರೇ ಆಗಿದ್ದರು. ಇದೇ ಮೊದಲ ಬಾರಿಗೆ ಸ್ವಾತಂತ್ರ್ಯ ಬಂದ ಬಳಿಕ ಹುಟ್ಟಿದವರೊಬ್ಬರು ರಾಷ್ಟ್ರಪತಿಯಾಗಿದ್ದಾರೆ. ಹಾಗಿದ್ದರೆ ಇಲ್ಲಿಯವರೆಗೆ ಭಾರತದ ರಾಷ್ಟ್ರಪತಿಯಾದವರು, ಯಾರೆಲ್ಲ ಎಷ್ಟನೇ ವಯಸ್ಸಿಗೆ ಈ ಹುದ್ದೆಗೆ ಏರಿದರು? ಇಲ್ಲಿದೆ ವಿವರ..

  1. ಸ್ವತಂತ್ರ ಭಾರತದ ಮೊಟ್ಟ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌. ಇವರು 1950ರಿಂದ 1962ರವರೆಗೆ ಅಂದರೆ 12 ವರ್ಷ ರಾಷ್ಟ್ರಪತಿಯಾಗಿದ್ದರು. ಬಳಿಕ ಬಂದವರ್ಯಾರೂ ಇಷ್ಟೆಲ್ಲ ಸುದೀರ್ಘ ಅವಧಿಗೆ ಹುದ್ದೆಯಲ್ಲಿರಲಿಲ್ಲ. ರಾಜೇಂದ್ರ ಪ್ರಸಾದ್‌ 1೮84ರ ಡಿಸೆಂಬರ್‌ 3ರಂದು ಜನಿಸಿದ್ದು, ರಾಷ್ಟ್ರಪತಿ ಆಗುವಾಗ ಅವರಿಗೆ 65 ವರ್ಷ, ಒಂದು ತಿಂಗಳ, 23ದಿನಗಳು.
  2. ಎರಡನೇ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್‌. ಇವರು ಹುಟ್ಟಿದ್ದು 1888ರ ಸೆಪ್ಟೆಂಬರ್‌ 5ರಂದು. 1962ರ ಮೇ 13ರಂದು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಆಗ ಅವರಿಗೆ 73 ವರ್ಷ, 8 ತಿಂಗಳು, ಎಂಟು ದಿನಗಳು. 1952ರಿಂದ 1962ರವರೆಗೆ ಭಾರತದ ಉಪರಾಷ್ಟ್ರಪತಿಯೂ ಆಗಿ ಸೇವೆಸಲ್ಲಿಸಿದ್ದರು.
  3. ಜಾಕಿರ್‌ ಹುಸೇನ್‌ ಭಾರತದ ಮೂರನೇ ರಾಷ್ಟ್ರಪತಿ. ಇವರು ಎರಡು ವರ್ಷ ಮಾತ್ರ ಈ ಹುದ್ದೆಯಲ್ಲಿದ್ದರು. 1897ರ ಫೆಬ್ರವರಿ 8ರಂದು ಹುಟ್ಟಿದ್ದಾರೆ. 1967ರ ಮೇ 13ರಂದು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವಾಗ ಇವರ ವಯಸ್ಸು 70 ವರ್ಷ-ಮೂರು ತಿಂಗಳು ಮತ್ತು ಐದು ದಿನಗಳು. ಇವರು ರಾಷ್ಟ್ರಪತಿ ಭವನದಲ್ಲಿಯೇ ಮೃತಪಟ್ಟ ಮೊದಲ ರಾಷ್ಟ್ರಪತಿ.
  4. ನಾಲ್ಕನೇ ರಾಷ್ಟ್ರಪತಿ ವಿ.ವಿ.ಗಿರಿ ತಮಗೆ 75 ವರ್ಷ ಕಳೆದು 14ದಿನ ಕಳೆದ ದಿನ ಈ ಹುದ್ದೆಯನ್ನು ಅಲಂಕರಿಸಿದರು. 1894ರ ಆಗಸ್ಟ್‌ನಲ್ಲಿ ಜನಿಸಿದ್ದ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದು, 1969ರ ಆಗಸ್ಟ್‌ 24ರಂದು.
  5. ಫಕ್ರುದ್ದೀನ್‌ ಮೊಹಮ್ಮದ್‌ ಅವರು 5ನೇ ಪ್ರೆಸಿಡೆಂಟ್‌. ಇವರು ಹುಟ್ಟಿದ್ದು 1905ರ ಮೇ 13ರಂದು ಮತ್ತು ರಾಷ್ಟ್ರಪತಿಯಾಗಿ ನೇಮಕಗೊಂಡಿದ್ದು 1974ರ ಆಗಸ್ಟ್‌ 24ರಂದು. ಆಗ ಅವರಿಗೆ 69ವರ್ಷ 3 ತಿಂಗಳು ಮತ್ತು 11ದಿನಗಳ ವಯಸ್ಸು. ಇವರೂ ಕೂಡ ಪೂರ್ಣಾವಧಿಗೆ ಅಧಿಕಾರ ನಡೆಸಲಿಲ್ಲ. ಇವರು ತುರ್ತುಪರಿಸ್ಥಿತಿಯಲ್ಲಿ ರಾಷ್ಟ್ರಪತಿಯಾಗಿದ್ದವರು. 1977ರಲ್ಲಿ ಮೃತಪಟ್ಟಿದ್ದಾರೆ.
  6. ಫಕ್ರುದ್ದೀನ್‌ ನಿಧನದ ನಂತರ ರಾಷ್ಟ್ರಪತಿ ಹುದ್ದೆಗೆ ಏರಿದ್ದು ನೀಲಮ್‌ ಸಂಜೀವಾ ರೆಡ್ಡಿ. 1913ರ ಮೇ 19ರಂದು ಜನಿಸಿದ್ದರು. ಹಾಗೇ, 1977ರ ಜುಲೈ 25ರಂದು ರಾಷ್ಟ್ರಪತಿಯಾದರು. ಆಗ ಅವರಿಗೆ 64ವರ್ಷ-2 ತಿಂಗಳು-ಆರು ದಿನಗಳು. ಅತ್ಯಂತ ಕಡಿಮೆ ವಯಸ್ಸಿನಲ್ಲಿ ರಾಷ್ಟ್ರಪತಿ ಹುದ್ದೆಗೆ ಏರಿದವರು ಎಂಬ ದಾಖಲೆ ಇಷ್ಟು ದಿನ ಇವರ ಹೆಸರಿನಲ್ಲಿಯೇ ಇತ್ತು.
  7. ಗ್ಯಾನಿ ಜೇಲ್‌ ಸಿಂಗ್‌ ಭಾರತದ 7ನೇ ರಾಷ್ಟ್ರಪತಿ. ಇವರು ಅಧಿಕಾರ ವಹಿಸಿಕೊಂಡಿದ್ದು 1982ರ ಜುಲೈ 25ರಂದು. 1916ರ ಮೇ 5ರಂದು ಹುಟ್ಟಿದ್ದ ಇವರಿಗೆ ರಾಷ್ಟ್ರಪತಿ ಹುದ್ದೆಗೆ ಏರುವಾಗ 66 ವರ್ಷ 2 ತಿಂಗಳು, 20 ದಿನಗಳು. ಇವರು ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಅಧಿಕಾರ ವಹಿಸಿಕೊಂಡು ರಾಜೀವ್‌ ಗಾಂಧಿ ಆಡಳಿತದಲ್ಲೂ ಮುಂದುವರಿದರು. ಹಾಗೇ, ಇದುವರೆಗೆ ಗ್ಯಾನಿ ಜೇಲ್‌ ಸಿಂಗ್‌ ಬಿಟ್ಟರೆ ಇನ್ಯಾವುದೇ ಸಿಖ್‌ ನಾಯಕ ಈ ಹುದ್ದೆಗೆ ಏರಿಲ್ಲ.
  8. ರಾಮಸ್ವಾಮಿ ವೆಂಕಟ್ರಮಣ್‌ ದೇಶದ 8ನೇ ಪ್ರೆಸಿಡೆಂಟ್‌. 1910ರ ಡಿಸೆಂಬರ್‌ 4ರಂದು ಜನಿಸಿದ್ದ ಇವರು, 1987ರ ಜುಲೈ 25ರಂದು, ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಅವರಿಗೆ ಆಗ 76ವರ್ಷ, 7 ತಿಂಗಳು-21ದಿನಗಳು.
  9. ಶಂಕರ ದಯಾಳ್‌ ಶರ್ಮಾ ಭಾರತದ 9ನೇ ರಾಷ್ಟ್ರಪತಿ ಆಗಿ 1992ರ ಜುಲೈ 25ರಂದು ನೇಮಕಗೊಂಡರು. 1918ರ ಆಗಸ್ಟ್‌ 19ರಂದು ಹುಟ್ಟಿದ್ದ ಅವರು ರಾಷ್ಟ್ರಪತಿ ಹುದ್ದೆಗೆ ನೇಮಕಗೊಳ್ಳುವಾಗ ವಯಸ್ಸು 73 ವರ್ಷ- 11ತಿಂಗಳು ಮತ್ತು 6 ದಿನಗಳು.
  10. ಕೆ.ಆರ್‌.ನಾರಾಯಣನ್‌ ಭಾರತದ ರಾಷ್ಟ್ರಪತಿ ಆಗುವ ವೇಳೆ ಅವರ ವಯಸ್ಸು 76 ವರ್ಷ. 8 ತಿಂಗಳು ಮತ್ತು 29ದಿನಗಳು. 1920ರ ಅಕ್ಟೋಬರ್‌ 27ರಂದು ಜನಿಸಿದ್ದರು ಮತ್ತು ರಾಷ್ಟ್ರಪತಿ ಹುದ್ದೆಗೇರಿದ್ದು 1997ರ ಜುಲೈ 25ರಂದು.
  11. ಎಪಿಜೆ ಅಬ್ದುಲ್‌ ಕಲಾಂ 11ನೇ ರಾಷ್ಟ್ರಪತಿ. ಇವರು 1931ರ ಅಕ್ಟೋಬರ್‌ 15 ರಂದು ಜನಿಸಿದ್ದರು. 2002ರ ಜುಲೈ 25ರಂದು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ವೇಳೆ ಅವರ ವಯಸ್ಸು 70 ವರ್ಷ, 9 ತಿಂಗಳು ಮತ್ತು 10 ದಿನಗಳು.
  12. ಪ್ರತಿಭಾ ಪಾಟೀಲ್‌: ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರತಿಭಾ ಪಾಟೀಲ್‌ ಹುಟ್ಟಿದ್ದು 1934ರ ಡಿಸೆಂಬರ್‌ 19ರಂದು. ಹಾಗೇ, 2007ರ ಜುಲೈ 25ರಂದು, ತಮ್ಮ 72ನೇ ವಯಸ್ಸಿನಲ್ಲಿ (72ವರ್ಷ- 7 ತಿಂಗಳು-ಆರು ದಿನಗಳು) ರಾಷ್ಟ್ರಪತಿ ಹುದ್ದೆ ಅಲಂಕರಿಸಿದರು.
  13. ಪ್ರಣಬ್‌ ಮುಖರ್ಜಿ ರಾಷ್ಟ್ರಪತಿಯಾಗಿ 2012ರ ಜುಲೈ 25ಕ್ಕೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. 1935ರ ಡಿಸೆಂಬರ್‌ 11ರಂದು ಜನಿಸಿದ್ದ ಇವರು ರಾಷ್ಟ್ರಪತಿ ಹುದ್ದೆ ಅಲಂಕರಿಸುವಾಗ 76 ವರ್ಷ. ಏಳು ತಿಂಗಳು ಮತ್ತು ಹದಿನಾಲ್ಕು ದಿನಗಳು.
  14. ಇದೀಗ ನಿರ್ಗಮಿಸಿರುವ ರಾಮನಾಥ ಕೋವಿಂದ್‌ ಅವರು 2017ರ ಜುಲೈ 25ರಂದು ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಇವರು ಜನಿಸಿದ್ದು 1945ರ ಅಕ್ಟೋಬರ್‌ 1ರಂದು. ರಾಷ್ಟ್ರಪತಿ ಆಗುವ ಹೊತ್ತಿಗೆ ಅವರಿಗೆ 71ವರ್ಷ 9 ತಿಂಗಳು ಮತ್ತು 24 ದಿನಗಳು.
  15. ದ್ರೌಪದಿ ಮುರ್ಮು ಇಂದು (2022ರ ಜುಲೈ 25) 15ನೇ ರಾಷ್ಟ್ರಪತಿಯಾಗಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದ್ದಾರೆ. ಇವರು ಜನಿಸಿದ್ದು 1958ರ ಜೂನ್‌ 20ರಂದು. ಇಂದಿಗೆ ಅವರಿಗೆ ವಯಸ್ಸು 64 ವರ್ಷ. ಒಂದು ತಿಂಗಳು ಮತ್ತು ಐದು ದಿನಗಳು.

ಇದನ್ನೂ ಓದಿ: ನಮ್ಮ ನೂತನ ರಾಷ್ಟ್ರಪತಿಯ ಮೂಲ ಹೆಸರು ದ್ರೌಪದಿ ಅಲ್ವೇ ಅಲ್ಲ !; ಹಾಗಿದ್ರೆ ಏನವರ ಹೆಸರು?

Exit mobile version