ನವ ದೆಹಲಿ: ವಿಮಾನದಲ್ಲಿ ಪ್ರಯಾಣಿಕರ ಅಶಿಸ್ತಿನ ವರ್ತನೆಯ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಇದೀಗ ದುಬೈನಿಂದ ಮುಂಬಯಿಗೆ ಆಗಮಿಸುತ್ತಿದ್ದ (Dubai-Mumbai flight), ಇಂಡಿಗೊ ವಿಮಾನ (IndiGo Flight)ದಲ್ಲಿ ಇಬ್ಬರು ಪ್ರಯಾಣಿಕರು, ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸಿದ್ದಾರೆ. ವಿಮಾನ ಸಿಬ್ಬಂದಿಯನ್ನು ಮತ್ತು ಸಹಪ್ರಯಾಣಿಕರನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಹೀಗೆ ಪ್ಲೇನ್ನಲ್ಲಿ ಗಲಾಟೆ ಸೃಷ್ಟಿಸಿದ ಇವರಿಬ್ಬರನ್ನೂ, ಮುಂಬಯಿಯಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಬಂಧಿಸಲಾಗಿದೆ. ಈ ವರ್ಷದಲ್ಲಿ ನಡೆದ, ಪ್ರಯಾಣಿಕರ ಅಶಿಸ್ತಿನ ವರ್ತನೆಯ 7ನೇ ಪ್ರಕರಣ ಇದಾಗಿದೆ.
ಇದರಲ್ಲಿ ಒಬ್ಬಾತ ಪಾಲ್ಘರ್ನ ನಾಲಾಸೋಪಾರಾದವನಾಗಿದ್ದು, ಇನ್ನೊಬ್ಬಾತ ಕೊಲ್ಲಾಪುರದವನು. ಗಲ್ಫ್ನಲ್ಲಿ ಒಂದು ವರ್ಷ ಕೆಲಸ ಮಾಡಿ, ಈಗ ಭಾರತಕ್ಕೆ ವಾಪಸ್ ಬರುತ್ತಿದ್ದರು. ತಾವೇ ತಂದಿದ್ದ ಮದ್ಯವನ್ನು ಕುಡಿಯುತ್ತ, ಅಶಿಸ್ತಿನಿಂದ ವರ್ತನೆ ಮಾಡುತ್ತಿದ್ದರು. ವಿಮಾನದಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದರು. ಇದರಿಂದ ಸಹಪ್ರಯಾಣಿಕರಿಗೆ ತೀವ್ರ ಕಿರಿಕಿಯಾಗಿ, ಅವರೆಲ್ಲ ವಿರೋಧಿಸಲು ಶುರು ಮಾಡಿದರು. ಗಲಾಟೆ ಹೆಚ್ಚಾದಾಗ ವಿಮಾನ ಸಿಬ್ಬಂದಿ ಮಧ್ಯಪ್ರವೇಶ ಮಾಡಿದ್ದಾರೆ. ಆ ಇಬ್ಬರು ಪ್ರಯಾಣಿಕರ ಕೈಯಲ್ಲಿದ್ದ ಮದ್ಯದ ಬಾಟಲಿಯನ್ನು ಕಿತ್ತು ಎಸೆದಿದ್ದಾರೆ. ಆಗ ಇವರು ವಿಮಾನ ಸಿಬ್ಬಂದಿಯನ್ನೇ ನಿಂದಿಸಿದ್ದಾರೆ. ಮುಂಬಯಿಯಲ್ಲಿ ಅರೆಸ್ಟ್ ಮಾಡಿ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಆದರೆ ಅವರಿಬ್ಬರಿಗೂ ಜಾಮೀನು ಸಿಕ್ಕಿದೆ.
ಇದನ್ನೂ ಓದಿ: Air India: ಏರ್ ಇಂಡಿಯಾ ವಿಮಾನದಲ್ಲಿ ಧೂಮಪಾನ, ಗಲಾಟೆ; ಪ್ರಯಾಣಿಕನ ಕೈಕಾಲು ಕಟ್ಟಿ ಕೂರಿಸಿದ ಸಿಬ್ಬಂದಿ
ಇತ್ತೀಚೆಗೆ ಲಂಡನ್ನಿಂದ ಮುಂಬಯಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನೊಬ್ಬ ಟಾಯ್ಲೆಟ್ಗೆ ಹೋಗಿ ಧೂಮಪಾನ ಮಾಡಿದ್ದ. ಅಷ್ಟಲ್ಲದೆ, ವಿಮಾನದ ಎಮರ್ಜನ್ಸಿ ಎಕ್ಸಿಟ್ ಬಾಗಿಲು ತೆರೆಯಲು ಪ್ರಯತ್ನ ಮಾಡಿದ್ದ. ಆತನ ಗಲಾಟೆ ಸುಧಾರಿಸಲು ಸಾಧ್ಯವಾಗದೆ, ಸಿಬ್ಬಂದಿ ಅವನ ಕೈಕಾಲು ಕಟ್ಟಿ ಕೂರಿಸಿದ್ದರು.