ನವ ದೆಹಲಿ: ವಿಮಾನದಲ್ಲಿ ಕುಡುಕ ಪ್ರಯಾಣಿಕರು ಸೃಷ್ಟಿಸುವ ಅವಾಂತರಗಳ ವರದಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದರಲ್ಲೂ ಇತ್ತೀಚೆಗೆ ಯುಎಸ್ನಿಂದ ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಶಂಕರ್ ಮಿಶ್ರಾ ಎಂಬಾತ ಕಂಠಪೂರ್ತಿ ಕುಡಿದು, ತನ್ನ ಸಹಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣದ ದೊಡ್ಡದಾಗಿತ್ತು. ಆತನ ವಿರುದ್ಧ ಕಾನೂನು ಕ್ರಮವೂ ಜರುಗಿ, ಸದ್ಯ ಆತ ಜಾಮೀನು ಪಡೆದು ಜೈಲಿನಿಂದ ಹೊರಗಿದ್ದಾನೆ. ಈಗ ಇನ್ನೊಂದು ಅಸಹ್ಯಕರ ಘಟನೆ ಇಂಡಿಗೊ ವಿಮಾನದಲ್ಲಿ (IndiGo Flight) ನಡೆದಿದೆ. ಮಾರ್ಚ್ 26ರಂದು ಅಸ್ಸಾಂನ ಗುವಾಹಟಿಯಿಂದ ದೆಹಲಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಕುಡಿದು ವಾಂತಿ ಮಾಡಿದ್ದಾನೆ. ಅಷ್ಟೇ ಅಲ್ಲ, ಮಲವಿಸರ್ಜನೆಯನ್ನೂ ಮಾಡಿದ್ದಾನೆ. ಆತ ಮಾಡಿದ ಗಲೀಜನ್ನು ವಿಮಾನದ ಸಿಬ್ಬಂದಿಯೊಬ್ಬರು ಸ್ವಚ್ಛ ಮಾಡುತ್ತಿದ್ದ ಫೋಟೋ ವೈರಲ್ ಆಗಿದೆ. ಈ ಬಗ್ಗೆ ಅಂದು ವಿಮಾನದಲ್ಲಿದ್ದ ಇನ್ನೊಬ್ಬ ಪ್ರಯಾಣಿಕರ ಭಾಸ್ಕರ್ ದೇವ್ ಕೋನ್ವಾರ್ ಎಂಬುವರು ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ವಿಮಾನ ಸಿಬ್ಬಂದಿ ಯುವತಿಯೊಬ್ಬಳು ಆ ಗಲೀಜಿನ ಮೇಲೆಲ್ಲ ಪೇಪರ್ ಹಾಕಿಟ್ಟು, ಸ್ವಚ್ಛ ಗೊಳಿಸುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡ ಪ್ರಯಾಣಿಕ ಭಾಸ್ಕರ್ ದೇವ್ ಕೋನ್ವಾರ್, ‘ಕಂಠಪೂರ್ತಿ ಕುಡಿದ ಪ್ರಯಾಣಿಕನೊಬ್ಬ ವಿಮಾನದೊಳಗೇ ವಾಂತಿ ಮಾಡಿದ. ಟಾಯ್ಲೆಟ್ ಸುತ್ತಲೂ ಮಲವಿಸರ್ಜನೆ ಮಾಡಿದ. ಆ ವಿಮಾನದ ಸಿಬ್ಬಂದಿಯಾಗಿದ್ದ ಶೇವತಾ ಅವರು ಅದನ್ನು ಸ್ವಚ್ಛಗೊಳಿಸಿದರು. ಮತ್ತು ಉಳಿದ ಯುವತಿಯರೂ ಆಕೆಗೆ ಸಹಾಯ ಮಾಡಿದರು. ಅದರಲ್ಲೂ ಒಂದಿನಿತೂ ಬೇಸರಿಸಿಕೊಳ್ಳದೆ ಕ್ಲೀನ್ ಮಾಡಿದ ಶೇವತಾ ಅವರಿಗೆ ನಿಜಕ್ಕೂ ಸೆಲ್ಯೂಟ್ ಎಂದಿದ್ದಾರೆ. ನನಗೆ ಆ ಯುವತಿ ಗಲೀಜನ್ನು ಕ್ಲೀನ್ ಮಾಡುವುದನ್ನು ನೋಡಿ ನಿಜಕ್ಕೂ ನೋವಾಯಿತು ಎಂದಿದ್ದಾರೆ.
ಈ ಪೋಸ್ಟ್ಗೆ ಹಲವರು ಕಮೆಂಟ್ ಹಾಕಿದ್ದಾರೆ. ಅನೇಕರು ರೀಟ್ವೀಟ್ ಮಾಡಿಕೊಂಡು ಆ ಕುಡುಕನಿಗೆ ಛೀಮಾರಿ ಹಾಕಿದ್ದಾರೆ. ನಿಜಕ್ಕೂ ಇದು ಅಸಹ್ಯಕರ. ಇಲ್ಲಿ ಬಲಿಪಶು ಆಗಿದ್ದು ವಿಮಾನದ ಸಿಬ್ಬಂದಿ ಎಂದು ಒಬ್ಬರು ಹೇಳಿದ್ದಾರೆ. ಅಲ್ಕೋಹಾಲ್ ತಮ್ಮ ಶರೀರಕ್ಕೆ ಆಗಿಬರುವುದಿಲ್ಲ ಎಂದ ಮೇಲೆ ಕುಡಿಯುವುದು ಯಾಕೆ? ಅದರಲ್ಲೂ ವಿಮಾನದಲ್ಲಿ ಹೀಗೆ ನೂರಾರು ಪ್ರಯಾಣಿಕರು ಇರುವಾಗ ಇಷ್ಟು ಗಲೀಜು ಮಾಡಿದರೆ ಸಹಿಸಿಕೊಳ್ಳುವುದಾದರೂ ಹೇಗೆ ಸಾಧ್ಯ. ಕುಡುಕನ ಗಲೀಜನ್ನು ಸ್ವಚ್ಛಗೊಳಿಸಿದ ಆ ವಿಮಾನ ಸಿಬ್ಬಂದಿಗೆ ನಿಜಕ್ಕೂ ಕೈಮುಗಿಯಬೇಕು ಎಂದು ಇನ್ನೊಬ್ಬರು ಹೇಳಿದ್ದಾರೆ.
ಈಗೊಂದು ವಾರದ ಹಿಂದೆ ದುಬೈನಿಂದ ಮುಂಬಯಿಗೆ ಬರುತ್ತಿದ್ದ ಇಂಡಿಗೊ ವಿಮಾನದಲ್ಲಿ ಇಬ್ಬರು ಪ್ರಯಾಣಿಕರು ಕುಡಿದು, ಕೈಯಲ್ಲಿ ಮದ್ಯದ ಬಾಟಲಿ ಹಿಡಿದು ಅಸಭ್ಯವಾಗಿ ವರ್ತಿಸಿದ್ದರು. ಇಡೀ ವಿಮಾನದಲ್ಲಿ ಓಡಾಡುತ್ತ, ಉಳಿದ ಪ್ರಯಾಣಿಕರಿಗೆ, ವಿಮಾನ ಸಿಬ್ಬಂದಿಗೆ ಬೈದಿದ್ದರು. ಅಸಭ್ಯ ಪದಗಳಿಂದ ನಿಂದಿಸಿದ್ದರು. ಬಳಿಕ ಮುಂಬಯಿಯಲ್ಲಿ ವಿಮಾನ ಲ್ಯಾಂಡ್ ಆದ ತಕ್ಷಣ ಅವರಿಬ್ಬರನ್ನೂ ಬಂಧಿಸಿ, ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಇಬ್ಬರೂ ಜಾಮೀನು ಪಡೆದಿದ್ದಾರೆ.