ನವ ದೆಹಲಿ: ಮೂರ್ನಾಲ್ಕು ತಿಂಗಳ ಹಿಂದೆ ಅಮೆರಿಕದ ನ್ಯೂಯಾರ್ಕ್ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಶಂಕರ್ ಮಿಶ್ರಾ (Shankar Mishra) ಎಂಬಾತ ಕುಡಿದ ಅಮಲಿನಲ್ಲಿ, ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಬಳಿಕ ಆತನ ಬಂಧನವಾಗಿ, ಜಾಮೀನು ಪಡೆದು ಹೊರಗಿದ್ದಾನೆ. ಆದರೆ ನಾಲ್ಕು ತಿಂಗಳ ಕಾಲ ಶಂಕರ್ ಮಿಶ್ರಾಗೆ ವಿಮಾನ ಸಂಚಾರ ನಿಷೇಧ ಮಾಡಲಾಗಿದೆ. ಈಗ ಇಂಥದ್ದೇ ಮತ್ತೊಂದು ಘಟನೆ ನಡೆದಿದೆ. ಇದೂ ಕೂಡ ನ್ಯೂಯಾರ್ಕ್ನಿಂದ ದೆಹಲಿ ಬರುತ್ತಿದ್ದ ವಿಮಾನದಲ್ಲೇ..!
ನ್ಯೂಯಾರ್ಕ್ನಿಂದ ದೆಹಲಿಗೆ ಬರುತ್ತಿದ್ದ, ಅಮೆರಿಕನ್ ಏರ್ಲೈನ್ಸ್ಗೆ ಸೇರಿದ ವಿಮಾನ AA292 ದಲ್ಲಿ ಪ್ರಯಾಣಿಕನೊಬ್ಬ ಕುಡಿದ ಮತ್ತಿನಲ್ಲಿ ತನ್ನ ಸಹಪ್ರಯಾಣಿಕನ ಮೇಲೆ ಮೂತ್ರವಿಸರ್ಜನೆ ಮಾಡಿದ್ದಾನೆ. ವಿಮಾನ ದೆಹಲಿಯ ಇಂದಿರಾಗಾಂಧಿ ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈತ ಯುಎಸ್ ಯೂನಿವರ್ಸಿಟಿಯ ವಿದ್ಯಾರ್ಥಿ. ಕಂಠಪೂರ್ತಿ ಕುಡಿದು, ಮಲಗಿದ್ದ. ನಿದ್ದೆಯಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾನೆ. ಅದು ಆತನ ಪಕ್ಕ ಕುಳಿತವನ ಮೇಲೆ ಬಿದ್ದಿದೆ. ಅವರು ಎದ್ದು ವಿಮಾನ ಸಿಬ್ಬಂದಿಗೆ ದೂರು ನೀಡಿದ್ದಾರೆ.
ಆ ವಿದ್ಯಾರ್ಥಿ ತನ್ನ ತಪ್ಪು ಅರ್ಥ ಮಾಡಿಕೊಂಡು ಕೂಡಲೇ ಕ್ಷಮೆ ಕೇಳಿದ್ದಾನೆ. ಇನ್ನು ಮೂತ್ರ ತಾಗಿದ್ದನ್ನು ಆ ಸಹಪ್ರಯಾಣಿಕ ಅಷ್ಟು ದೊಡ್ಡ ವಿಷಯವನ್ನಾಗಿ ಮಾಡಲಿಲ್ಲ. ಆದರೆ ವಿಮಾನ ಸಿಬ್ಬಂದಿ ಅದನ್ನು ಅಷ್ಟಕ್ಕೇ ಬಿಡದೆ, ಕೂಡಲೇ ಹೋಗಿ ಪೈಲೆಟ್ಗೆ ತಿಳಿಸಿದ್ದಾರೆ. ಆ ಪೈಲೆಟ್ ವಿಮಾನ ಲ್ಯಾಂಡ್ ಮಾಡುತ್ತಿದ್ದಂತೆ ಆ ವಿಷಯವನ್ನು ಏರ್ ಟ್ರಾಫಿಕ್ ಕಂಟ್ರೋಲ್ (ATC)ಗೆ ತಿಳಿಸಿದ್ದಾನೆ. ಮತ್ತೆ ಎಟಿಸಿ ಅದನ್ನು ಸಿಐಎಸ್ಎಫ್ (CISF-ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ತಿಳಿಸಿದ್ದರು. ಆರೋಪಿ ಹುಡುಗನನ್ನು ಸಿಐಎಸ್ಎಫ್ ಸಿಬ್ಬಂದಿ ವಶಕ್ಕೆ ಪಡೆದು, ಬಳಿಕ ಆತನನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ: Air India Urination Case: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ, ಆರೋಪಿ ಶಂಕರ್ ಮಿಶ್ರಾಗೆ ಜಾಮೀನು