ನವ ದೆಹಲಿ: ಗಣಿ ಮಾಫಿಯಾಕ್ಕೆ ಬಲಿಯಾದ ಹರ್ಯಾಣದ ತಾವರು ನಗರದ ಡಿಎಸ್‌ಪಿ ಸುರೇಂದ್ರ ಸಿಂಗ್ ಬಿಷ್ಣೋಯಿ ಕುಟುಂಬದಲ್ಲೀಗ ಕಣ್ಣೀರು..ಮೌನ. ಅವರ ತಮ್ಮ ಅಶೋಕ್ ಮಂಜು ಬಿಕ್ಕಿಬಿಕ್ಕಿ ಅಳುತ್ತಲೇ ತನ್ನಣ್ಣನ ಬಗ್ಗೆ ಮಾತನಾಡಿದ್ದಾರೆ. ʼಇಂದು ಬೆಳಗ್ಗೆಯಷ್ಟೇ ಅಣ್ಣನ ಬಳಿ ಯಾವುದೋ ವಿಚಾರಕ್ಕೆ ಮಾತನಾಡಿದೆ. ಅದಾದ ಕೆಲವೇ ಹೊತ್ತಲ್ಲಿ ಅವರಿಲ್ಲ ಎಂಬ ಸುದ್ದಿ ಬಂತು. ಇಬ್ಬರು ಮಕ್ಕಳ ತಂದೆ ನನ್ನಣ್ಣ, ಇದೇ ವರ್ಷ ನಿವೃತ್ತಿಯೂ ಆಗುತ್ತಿದ್ದರು. ಅಷ್ಟರಲ್ಲಿ ಇದೊಂದು ಆಗಬಾರದ್ದು ಆಯಿತುʼ ಎಂದು ಹೇಳಿದ್ದಾರೆ. ಅಶೋಕ್ ಮಂಜು ಅಳುತ್ತಿರುವ ಮತ್ತು ಪೊಲೀಸ್ ಅಧಿಕಾರಿಯೊಬ್ಬರು ಅವರನ್ನು ಸಮಾಧಾನ ಮಾಡುತ್ತಿರುವ ಫೋಟೋ ಈಗ ವೈರಲ್ ಆಗಿದೆ.
ಸೋಮವಾರ ರಾತ್ರಿಯಿಂದಲೇ ಸಿದ್ಧತೆ
ಪಚಗಾಂವ್ ಸಮೀಪದ ಅರವಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಗುಡ್ಡದ ಕಲ್ಲುಗಳನ್ನೆಲ್ಲ ಅಲ್ಲಿಂದ ಬೇರೆಡೆಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಪಡೆದಿದ್ದ ಡಿಎಸ್‌ಪಿ ಸುರೇಂದ್ರ ಸಿಂಗ್ ಬಿಷ್ಣೋಯಿ, ಸೋಮವಾರ ರಾತ್ರಿಯೇ ತಾವರುದಿಂದ ಪಚಗಾಂವ್‌ಗೆ ತೆರಳಿದ್ದರು. ಇಂದು (ಮಂಗಳವಾರ) ಬೆಳಗ್ಗೆ 11ಗಂಟೆ ಹೊತ್ತಿಗೆ ತಮ್ಮ ತಂಡದೊಂದಿಗೆ ಅರವಲ್ಲಿ ಗುಡ್ಡಕ್ಕೆ ತೆರಳಿದ್ದಾರೆ. ಅಲ್ಲಿ ಹೋದ ಬಳಿಕ ಪೊಲೀಸರು, ಗಣಿಗಾರಿಕೆಯಲ್ಲಿ ತೊಡಗಿರುವವರನ್ನು ಹಿಡಿಯಲು ಚದುರಿ ಹೋಗಿದ್ದಾರೆ. ಇನ್ನು ಪೊಲೀಸರನ್ನು ನೋಡುತ್ತಿದ್ದಂತೆ ಅಲ್ಲಿದ್ದ ಅನೇಕರು ಓಡಿ ಹೋಗಿದ್ದಾರೆ. ಡಂಪರ್ ವಾಹನಗಳ ಮೂಲಕ ಕಲ್ಲು ಸಾಗಿಸುತ್ತಿರುವುದನ್ನು ನೋಡಿದ ಡಿಎಸ್‌ಪಿ ಸುರೇಂದ್ರ ಸಿಂಗ್ ಅವರು, ತಮ್ಮ ವಾಹನವನ್ನು ಅದೇ ಮಾರ್ಗದಲ್ಲಿ ನಿಲ್ಲಿಸಿಕೊಂಡು ನಿಂತಿದ್ದರು. ಡಂಪರ್ ಟ್ರಕ್ ಬರುತ್ತಿದ್ದಂತೆ ನಿಲ್ಲಿಸುವಂತೆ ಚಾಲಕನಿಗೆ ಸಂಜ್ಞೆ ಮಾಡಿದ್ದಾರೆ. ಆದರೆ ಆ ದುರುಳ ಡಿಎಸ್‌ಪಿ ಮೇಲೆ ಟ್ರಕ್ ಹಾಯಿಸಿ, ಅವರನ್ನು ಕೊಂದು ಪರಾರಿಯಾಗಿದ್ದಾನೆ ಎಂದು ಹರ್ಯಾಣ ಪೊಲೀಸರು ವಿವರಿಸಿದ್ದಾರೆ.
ಒಂದು ಕೋಟಿ ರೂ.ಪರಿಹಾರ
ಡಿಎಸ್‌ಪಿ ಹತ್ಯೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆರೋಪಿಯನ್ನು ಶೀಘ್ರವೇ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ. ಇನ್ನು ಘಟನಾ ಸ್ಥಳವನ್ನು ಪೊಲೀಸರು ಸುತ್ತುವರಿದಿದ್ದಾರೆ. ಆರೋಪಿಗಳನ್ನು ಒಬ್ಬರನ್ನೂ ಬಿಡುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ʼಹತ್ಯೆಗೀಡಾದ ಸುರೇಂದ್ರನ್ ಕುಟುಂಬಕ್ಕೆ ನಮ್ಮ ಸಾಂತ್ವನಗಳು. ಘಟನೆಯಿಂದ ತುಂಬ ನೋವಾಗಿದೆ. ಮೃತರ ಕುಟುಂಬಕ್ಕೆ 1ಕೋಟಿ ರೂಪಾಯಿ ಪರಿಹಾರ ನೀಡಲಾಗುವುದು ಮತ್ತು ಅವರ ಮನೆಯ ಯಾರಿಗಾದರೂ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದುʼ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಗಣಿ ಮಾಫಿಯಾಕ್ಕೆ ಪೊಲೀಸ್ ಅಧಿಕಾರಿ ಬಲಿ; ಗುಡ್ಡ ಹತ್ತಿದ ಡಿಎಸ್‌ಪಿ ಮೇಲೆ ಟ್ರಕ್ ಹಾಯಿಸಿದ ಚಾಲಕ