ಬೆಂಗಳೂರು: ನಗರದಲ್ಲಿ ಮಂಗಳವಾರ ಸಂಜೆ (ಏಪ್ರಿಲ್4ರಂದು) ಸುರಿದ ಧಾರಾಕಾರ ಮಳೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು. ಬೆಂಗಳೂರಿನಲ್ಲಿ ಇಳಿಯಬೇಕಾಗಿದ್ದ 14 ವಿಮಾನಗಳನ್ನು ಬೇರೆಡೆಗೆ ಕಳುಹಿಸಿದರೆ ಆರು ವಿಮಾನಗಳ ಟೇಕ್ಆಫ್ ಪ್ರಕ್ರಿಯೆ ವಿಳಂಬಗೊಂಡಿತು. ಏಕಾಏಕಿ ಮಳೆ ಸುರಿದ ಕಾರಣ ರನ್ವೇನಲ್ಲಿ ನೀರು ತುಂಬಿಕೊಂಡಿತು. ಹೀಗಾಗಿ ಹಾರಾಟದಲ್ಲಿ ವ್ಯತ್ಯಯಗೊಂಡಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಂಗಳವಾರ ಸಂಜೆ ದೇವನಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆ ಸುರಿದಿತ್ತು,. ಹೀಗಾಗಿ 4ಗಂಟೆ 5 ನಿಮಿಷದಿಂದ ಆರಂಭಗೊಂಡು 4.51 ನಿಮಿಷಗಳ ತನಕ ವಿಮಾನ ಹಾರಾಟದಲ್ಲಿ ಸಮಸ್ಯೆ ಉಂಟಾಯಿತು. ಲ್ಯಾಂಡಿಂಗ್ ಮಾಡಲು ಸಾಧ್ಯವಾಗದ 14 ವಿಮಾನಗಳಲ್ಲಿ 12 ವಿಮಾನವನ್ನು ಚೆನ್ನೈಗೆ ಕಳುಹಿಸಿದರೆ ಉಳಿದೆರಡು ವಿಮಾನಗಳಲ್ಲು ಹೈದರಾಬಾದ್ ಹಾಗೂ ಚೆನ್ನೈಗೆ ಕಳುಹಿಸಲಾಯಿತು.
ಇಂಡಿಗೋ ಸಂಸ್ಥೆಗೆ ಸೇರಿದ ಏಳು ವಿಮಾನಗಳು, ವಿಸ್ತಾರದ ಮೂರು ವಿಮಾನಗಳು, ಆಕಾಶ ಏರ್ಲೈನ್ಸ್ನ ಎರಡು ವಿಮಾನ, ಗೋ ಏರ್ ಮತ್ತು ಏರ್ ಇಂಡಿಯಾದ ಒಂದು ವಿಮಾನವನ್ನು ಬೇರೆಡೆಗೆ ಕಳುಹಿಸಲಾಯಿತು.
ಚೆನ್ನೈಗೆ ಕಳುಹಿಸಲಾದ ವಿಮಾನಕ್ಕೆ ಅಲ್ಲೇ ಇಂಧನ ತುಂಬಿಸಿ ವಾಪಸ್ ಬೆಂಗಳೂರಿಗೆ ಮತ್ತೆ ಕರೆಸಿಕೊಳ್ಳಲಾಯಿತು. ಇದೇ ವೇಳೆ ಏರ್ಪೋರ್ಟ್ ರಸ್ತೆಯಲ್ಲೂ ಭಯಂಕರ ಟ್ರಾಫಿಕ್ ಸೃಷ್ಟಿಯಾಗಿ ಜನರು ಪರದಾಡಿದರು.
ಜನ ಜೀವನ ಅಸ್ತವ್ಯಸ್ತ
ಬೆಂಗಳೂರು-ಮಹದೇವಪುರ ವಲಯ ಸೇರಿ ವಿವಿಧ ಭಾಗದಲ್ಲಿ ಸತತ 2 ಗಂಟೆ ಮಳೆ ಅಬ್ಬರದಿಂದ ಜನ ಜೀವನ ಅಸ್ತವ್ಯಸ್ತಗೊಂಡಿತು. ಮಳೆಯಿಂದ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ಆವರಿಸಿದ್ದರಿಂದ ಭಾರಿ ಅವಾಂತರ ಸೃಷ್ಟಿಯಾಗಿದೆ. ಪ್ರಮುಖ ರಸ್ತೆಗಳು ಜಲಾವೃತವಾಗಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ತೊಂದರೆ ಪಡಬೇಕಾಯಿತು.
ದೇವನಹಳ್ಳಿ ಭಾಗದಲ್ಲಿ ಮಳೆಯಿಂದ ಕೆಂಪೇಗೌಡ ಸರ್ಕಲ್ ಜಲಾವೃತವಾಗಿತ್ತು. ವರ್ತೂರು ಸಮೀಪವೂ ರಸ್ತೆ ಸಂಪೂರ್ಣ ಜಲಾವೃತವಾಗಿದ್ದರಿಂದ ವಾಹನ ಸವಾರರು ಪರದಾಡಿದರು. ಮಳೆಯಿಂದ ರಸ್ತೆಯಲ್ಲಿ 3-4 ಅಡಿ ಮಳೆ ನೀರು ನಿಂತಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು.
ನಲ್ಲೂರಹಳ್ಳಿ ಮೆಟ್ರೋ ಸ್ಟೇಷನ್‌ಗೆ ನುಗ್ಗಿದ ಮಳೆನೀರು
ಭಾರಿ ಮಳೆ ಹಿನ್ನೆಲೆಯಲ್ಲಿ ಕೆ.ಆರ್. ಪುರಂ, ವೈಟ್ ಫೀಲ್ಡ್ ನಡುವಿನ ನಲ್ಲೂರಹಳ್ಳಿ ಮೆಟ್ರೋ ಸ್ಟೇಷನ್‌ಗೆ ಮಳೆನೀರು ನುಗ್ಗಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಪ್ಲಾಟ್ಫಾರ್ಮ್ ಹಾಗೂ ಟಿಕೆಟ್ ಕೌಂಟರ್ ಒಳಗೆ ಕೂಡ ನೀರು ನುಗ್ಗಿತ್ತು. ಮಳೆ ನೀರು ಹೊರ ಹಾಕಲು ಸಿಬ್ಬಂದಿ ಮೆಟ್ರೋ ಸಿಬ್ಬಂದಿ ಪರದಾಡಿದರು.