ನವ ದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ (National Herald Case) ಇಂದು ಮತ್ತೆ ಇ.ಡಿ. ವಿಚಾರಣೆಗೆ ಹಾಜರಾಗಲಿದ್ದಾರೆ. ರಾಹುಲ್ ಗಾಂಧಿಯವರನ್ನು ಜೂ.13ರಿಂದ 15ರವರೆಗೆ ನಿರಂತರವಾಗಿ ವಿಚಾರಣೆಗೆ ಒಳಪಡಿಸಿದ್ದ ಇ.ಡಿ. ಅಧಿಕಾರಿಗಳು ಮತ್ತೆ 17ಕ್ಕೆ ಬರುವಂತೆ ಸಮನ್ಸ್ ಕೊಟ್ಟಿದ್ದರು. ಆದರೆ ರಾಹುಲ್ ಗಾಂಧಿ ತಾವು 20ಕ್ಕೆ ಬರುವುದಾಗಿ ಮನವಿ ಮಾಡಿದ್ದರು. ಅದನ್ನು ಇ.ಡಿ. ಪುರಸ್ಕರಿಸಿತ್ತು. ಇಂದು ರಾಹುಲ್ ಗಾಂಧಿ ಇ.ಡಿ.ವಿಚಾರಣೆಗೆ ಹಾಜರಾಗುವುದಕ್ಕೂ ಮೊದಲು ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಳೆದ ವಾರ ಕಾಂಗ್ರೆಸ್ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ಎಐಸಿಸಿ ಪ್ರಧಾನ ಕಚೇರಿ ಪ್ರವೇಶಿಸಿದ್ದರ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ʼಕಳೆದ ವಾರ ಕಾಂಗ್ರೆಸ್ ಕಚೇರಿಯ ಮೇಲೆ ದೆಹಲಿ ಪೊಲೀಸರು ದಾಳಿ ಮಾಡಿದರು. ಅವರು ಹೀಗೇ ಬೇರೆ ಯಾವುದಾದರೂ ರಾಜಕೀಯ ಪಕ್ಷಗಳ ಕಚೇರಿ ಮೇಲೆ ಅಟ್ಯಾಕ್ ಮಾಡಿದ್ದಾರಾ? ನನಗೆ ಗೊತ್ತಿಲ್ಲ. ರಾಹುಲ್ ಗಾಂಧಿಯವರನ್ನು ನಿರಂತರವಾಗಿ 30 ತಾಸು ಇ ಡಿ ವಿಚಾರಣೆಗೆ ಒಳಪಡಿಸಲಾಯಿತು. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಬಾಯಿಮುಚ್ಚಿಸುವ ಪ್ರಯತ್ನ ಇದು. ಯಾಕೆಂದರೆ ನಾವು ಯಾವಾಗಲೂ ಶ್ರಮಿಕರ, ರೈತರು, ದುರ್ಬಲರ ಪರವಾಗಿ ಧ್ವನಿ ಎತ್ತುತ್ತೇವೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ನಾವೆಂದರೆ ಭಯ ಎಂದು ಅಜಯ್ ಮಾಕೆನ್ ವಾಗ್ದಾಳಿ ನಡೆಸಿದರು. ಅಷ್ಟೇ ಅಲ್ಲ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ಬರುವಾಗ ಜಾರಿ ನಿರ್ದೇಶನಾಲಯದ ಎದುರು ಕೇವಲ 112 ಸಕ್ರಿಯ ಕೇಸ್‌ಗಳು ಇದ್ದವು. ಅದೀಗ 5,422 ಕ್ಕೆ ಏರಿದೆ. ಬಿಜೆಪಿ ಸರ್ಕಾರ ಮಾಡುತ್ತಿರುವುದು ಏನೆಂದು ಇದರಲ್ಲೇ ಗೊತ್ತಾಗುತ್ತದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಇ ಡಿ ವಿಚಾರಣೆ ವೇಳೆ ಮೋತಿಲಾಲ್ ವೋರಾ ಹೆಸರು ಹೇಳಿದ ರಾಹುಲ್ ಗಾಂಧಿ; ಆಧಾರ ರಹಿತವೆಂದ ಪುತ್ರ
ಗ್ಲೋ ಆ್ಯಂಡ್ ಲವ್ಲಿ ಸ್ಕೀಮ್ !
ಜಾರಿ ನಿರ್ದೇಶನಾಲಯ ʼಗ್ಲೋ ಆ್ಯಂಡ್ ಲವ್ಲಿ ಸ್ಕೀಮ್ʼ ಜಾರಿಯಲ್ಲಿ ಇಟ್ಟಿದೆ ಎಂದು ಅಜಯ್ ಮಾಕೆನ್ ಟೀಕಿಸಿದ್ದಾರೆ. ʼಇ.ಡಿ. ಮತ್ತು ಸಿಬಿಐ ತನಿಖಾ ಏಜೆನ್ಸಿಗಳು ತಮ್ಮ ಬಳಿ ಗ್ಲೋ ಆ್ಯಂಡ್ ಲವ್ಲಿ ಸ್ಕೀಮ್ ಬಾಕ್ಸ್ ಇಟ್ಟುಕೊಂಡೇ ಕುಳಿತಿವೆ. ಯಾರೆಲ್ಲರ ವಿರುದ್ಧ ಕೇಸ್ ದಾಖಲಾಗಿದೆಯೋ, ಅವರಿಗೆ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡದಂತೆ ಮೊದಲು ತಮ್ಮ ಕೆಲವು ಕ್ರಮಗಳ ಮೂಲಕ ಎಚ್ಚರಿಕೆ ಕೊಡುತ್ತವೆ. ಇದರಿಂದ ಎಚ್ಚೆತ್ತುಕೊಂಡು ಯಾರು ಸುಮ್ಮನಾಗುತ್ತಾರೋ ಅಥವಾ ಬಿಜೆಪಿ ಸೇರ್ಪಡೆಯಾಗುತ್ತಾರೋ ಅಂಥವರ ಸ್ಲೇಟ್‌ನ್ನು ಇದೇ ಗ್ಲೋ ಆ್ಯಂಡ್ ಲವ್ಲಿ ಸ್ಕೀಮ್ ಮೂಲಕ ಅಳಿಸಿ ಹಾಕುತ್ತವೆ. ಟೀಕೆ ಮುಂದುವರಿಸಿದವರನ್ನು ಹಿಡಿದುಕೊಂಡು ಒಂದೇ ಸಮ ಗ್ರಿಲ್ ಮಾಡುತ್ತವೆ ಎಂದು ಆರೋಪಿಸಿದ್ದಾರೆ. ಈ ಮೂಲಕ ಮುಖದರಲ್ಲಿರುವ ಕಲೆಯನ್ನು ಹೋಗಲಾಡಿಸಿ ಇನ್ನಷ್ಟು ಹೊಳಪು ಕೊಡುವ ಫೇರ್ ಆ್ಯಂಡ್ ಲವ್ಲಿ ಕ್ರೀಮ್‌ಗೆ ಗ್ಲೋ ಆ್ಯಂಡ್ ಲವ್ಲಿ ಸ್ಕೀಮ್‌ನ್ನು ಹೋಲಿಸಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ 52ನೇ ಜನ್ಮದಿನ, ಹುಟ್ಟುಹಬ್ಬ ಆಚರಿಸದಿರಲು ಪಕ್ಷದ ಕಾರ್ಯಕರ್ತರಿಗೆ ಮನವಿ