ಕೋಲ್ಕತ್ತ: ಪಶ್ಚಿಮ ಬಂಗಾಳದ ಕೈಗಾರಿಕೆ, ವಾಣಿಜ್ಯ ಮತ್ತು ಉದ್ಯಮ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿಯವರನ್ನು ಇ.ಡಿ. ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಶಾಲಾ ಸೇವಾ ಆಯೋಗದ ನೇಮಕಾತಿ ಹಗರಣದಡಿ ಇ.ಡಿ. ಅಧಿಕಾರಿಗಳು ಕಳೆದ ಎರಡು ದಿನಗಳಿಂದಲೂ ರೇಡ್ ಮಾಡುತ್ತಿದ್ದಾರೆ. ಪಾರ್ಥ ಚಟರ್ಜಿಯವರನ್ನು ಕಳೆದ 26 ತಾಸುಗಳಿಂದ ವಿಚಾರಣೆಗೆ ಒಳಪಡಿಸಿದ್ದ ಇ.ಡಿ. ಇಂದು ಬೆಳಗ್ಗೆ ಬಂಧಿಸಿದೆ. ಪಾರ್ಥ ಚಟರ್ಜಿ ಟಿಎಂಸಿಯ ಪ್ರಬಲ ನಾಯಕರು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಹಗರಣ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಡಿ ತನಿಖೆ ನಡೆಸುತ್ತಿದೆ. ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಕೂಡ ಈ ಕೇಸ್‌ನಲ್ಲಿ ಇ.ಡಿ. ವಿಚಾರಣೆಗೆ ಒಳಪಟ್ಟಿದ್ದಾರೆ. ಹಾಗೇ ಅವರನ್ನೂ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ಪಶ್ಚಿಮ ಬಂಗಾಳದ ಶಾಲಾ ಸೇವಾ ಆಯೋಗದ ನೇಮಕಾತಿಯಲ್ಲಿ ಹಗರಣ ನಡೆದ ಆರೋಪದಡಿ ಶುಕ್ರವಾರ ಅರ್ಪಿತಾ ಮುಖರ್ಜಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅರ್ಪಿತಾ ಮನೆಯಲ್ಲಿ 20 ಕೋಟಿ ರೂಪಾಯಿ ಪತ್ತೆಯಾಗಿದೆ. ಈ ಅರ್ಪಿತಾ ನಟಿ ಮತ್ತು ರೂಪದರ್ಶಿಯಾಗಿದ್ದು, ಕೆಲವು ಬೆಂಗಾಲಿ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಇವರು ಪಾರ್ಥ ಚಟರ್ಜಿಯವರಿಗೆ ಆಪ್ತರು. ಹಗರಣದಲ್ಲಿ ಇವರೊಂದಿಗೆ ಪಾರ್ಥ ಚಟರ್ಜಿಯವರ ಹೆಸರೂ ಕೇಳಿಬಂದಿದೆ. ಯಾಕೆಂದರೆ ಪಾರ್ಥ ಚಟರ್ಜಿ ಈ ಹಿಂದೆ ಶಿಕ್ಷಣ ಇಲಾಖೆಯಲ್ಲೂ ಸಚಿವರಾಗಿದ್ದರು. ನಿನ್ನೆ ದಾಳಿ ನಡೆಸಿದ್ದ ಇ.ಡಿ. ಅಧಿಕಾರಿಗಳು 20 ಕೋಟಿ ರೂ.ದೊಂದಿಗೆ 20 ಮೊಬೈಲ್‌ಗಳನ್ನೂ ಕೂಡ ಅರ್ಪಿತಾ ಮನೆಯಿಂದ ವಶಪಡಿಸಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ಶಾಲಾ ಸೇವಾ ಆಯೋಗದ ನೇಮಕಾತಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಇ.ಡಿ. ಹಲವು ಕಡೆಗಳಲ್ಲಿ ರೇಡ್ ಮಾಡುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ದಾಳಿ ಮಾಡಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಅರ್ಪಿತಾ ಅವರನ್ನೂ ಕೂಡ ಎಂಟು ತಾಸುಗಳ ವಿಚಾರಣೆ ನಡೆಸಲಾಗಿದೆ. ಅಂದಹಾಗೇ ಈ ಪಾರ್ಥ ಚಟರ್ಜಿ, 2001ರಲ್ಲಿ ಮೊದಲಿಗೆ ಬೆಹಾಲಾ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾದರು. 2011ರಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೂ ಅಂದರೆ 2006ರಿಂದ 2011ರವರೆಗೆ ಇವರು ರಾಜ್ಯ ವಿಧಾನಸಭೆಯಲ್ಲಿ ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದರು.
ಈಗ ಕೇಳಿಬಂದಿರುವ ಹಗರಣದಡಿ ಕೇವಲ ಪಾರ್ಥ ಚಟರ್ಜಿ ಮನೆ ಮಾತ್ರವಲ್ಲ, ಇತರ ಸಚಿವರಾದ ಪರೇಶ್ ಅಧಿಕಾರಿ, ಮಾಣಿಕ್ ಭಟ್ಟಾಚಾರ್ಯ, ಶಾಸಕ ಮತ್ತು ಪಶ್ಚಿಮ ಬಂಗಾಳ ಪ್ರಾಥಮಿಕ ಶಾಲಾ ಮಂಡಳಿ ಮಾಜಿ ಅಧ್ಯಕ್ಷ ಕೆ. ಬಂಡೋಪಾಧ್ಯಾಯ ಸೇರಿ, ಇದೇ ಮಂಡಳಿಯ ಹಲವು ಸದಸ್ಯರ ಮನೆಯಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಪ್ರಾಥಮಿಕ ಶಾಲೆಗಳಲ್ಲಿ ಮತ್ತು 9-11ನೇ ತರಗತಿಗಳಿಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಾಗ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಇದಾಗಿದ್ದು, ತನಿಖೆ ನಡೆಸುವಂತೆ ಕೋಲ್ಕತ್ತ ಹೈಕೋರ್ಟ್ ಸಿಬಿಐಗೂ ಸೂಚಿಸಿದೆ.
ಇದನ್ನೂ ಓದಿ: ತೃಣಮೂಲ ಸಚಿವರ ಆಪ್ತೆಯ ಮನೆಯಲ್ಲಿ 20 ಕೋಟಿ ರೂ. ನಗದು ಇ.ಡಿ ವಶಕ್ಕೆ