Site icon Vistara News

ದೇಶಭ್ರಷ್ಟ ವ್ಯಾಪಾರಿ ನೀರವ್‌ ಮೋದಿಯ ಹಾಂಗ್‌ಕಾಂಗ್‌ನಲ್ಲಿದ್ದ 253.62 ಕೋಟಿ ರೂ. ಮುಟ್ಟುಗೋಲು

Nirav Modi

ನವ ದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚಿಸಿ ದೇಶಬಿಟ್ಟು ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್‌ ಮೋದಿಯ ಹಾಂಗ್‌ಕಾಂಗ್‌ನಲ್ಲಿರುವ ಚರಾಸ್ತಿಯನ್ನು ಜಾರಿ ನಿರ್ದೇಶನಲಾಯ (ಇ.ಡಿ.) ಮುಟ್ಟುಗೋಲು ಹಾಕಿದೆ. ಹಾಂಗ್‌ಕಾಂಗ್‌ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದ 253.62 ಕೋಟಿ ರೂಪಾಯಿ, ವಿವಿಧ ಬಗೆಯ ರತ್ನಗಳು, ಆಭರಣಗಳನ್ನು ಇಡಿ ಜಪ್ತಿಮಾಡಿದೆ.

ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿ ದೇಶದಿಂದ ಓಡಿ ಹೋಗಿದ್ದ ನೀರವ್‌ ಮೋದಿ ವಿರುದ್ಧ ಐಪಿಸಿ ಸೆಕ್ಷನ್‌ 420 (ವಂಚನೆ, ಅಗೌರವ, ಆಸ್ತಿ ವಿತರಣೆ), ಸೆಕ್ಷನ್‌ 467 (ಫೋರ್ಜರಿ), ಕ್ರಿಮಿನಲ್‌ ಪಿತೂರಿ, ನಕಲಿ ದಾಖಲೆಗಳನ್ನೇ ಸತ್ಯವೆಂದು ಬಿಂಬಿಸಿ ಬಳಸಿರುವ ಪ್ರಕರಣಗಳು ದಾಖಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ ಕೇಸ್‌ ದಾಖಲಿಸಿಕೊಂಡ ಇ.ಡಿ. ತನಿಖೆ ನಡೆಸುತ್ತಿದೆ. ನೀರವ್‌ ಮೋದಿ ಸದ್ಯ ಇಂಗ್ಲೆಂಡ್‌ನ ಜೈಲಿನಲ್ಲಿದ್ದಾನೆ.

ನೀರವ್‌ ಮೋದಿಯನ್ನು ಭಾರತಕ್ಕೆ ಕರೆತರಲು ಕೆಲವು ಕಾನೂನುಗಳು ಅಡ್ಡಿಯಾಗುತ್ತಿವೆ. ಅಷ್ಟಲ್ಲದೆ, ಇಂಗ್ಲೆಂಡ್‌ನ ಒಂದು ಕೋರ್ಟ್‌ನಲ್ಲೇ ಆತನ ವಿರುದ್ಧ ವಿಚಾರಣೆ ನಡೆಯುತ್ತಿದೆ. ಇಲ್ಲಿಯವರೆಗೆ ದೇಶ-ವಿದೇಶ ಸೇರಿ ನೀರವ್‌ ಮೋದಿಯ 2,396.45ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇ.ಡಿ. ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ. ನೀರವ್‌ ಬ್ಯಾಂಕ್‌ ಅಕೌಂಟ್‌ಗಳನ್ನೂ ಸೀಲ್‌ ಮಾಡಲಾಗಿದೆ. ಹಾಗೇ, ಮುಟ್ಟುಗೋಲು ಹಾಕಲಾಗಿರುವ ನೀರವ್‌ ಮೋದಿ ಮತ್ತು ಆತನ ಸಹಚರರ 1,389 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಆತ ಸಾಲ ಮಾಡಿದ್ದ ಬ್ಯಾಂಕ್‌ಗಳಿಗೆ ವರ್ಗಾಯಿಸುವ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ಇ.ಡಿ. ತಿಳಿಸಿದೆ.

ಇದನ್ನೂ ಓದಿ: Good news: ಬ್ಯಾಂಕ್‌ಗಳಲ್ಲಿ 100 ಕೋಟಿ ರೂ.ಗೂ ಹೆಚ್ಚಿನ ವಂಚನೆಯ ಪ್ರಕರಣಗಳ ಸಂಖ್ಯೆ ಇಳಿಕೆ

Exit mobile version