ರಾಯ್ಪುರ: ಛತ್ತೀಸ್ಗಢ್ನಲ್ಲಿ ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ಇಡಿ ಅಧಿಕಾರಿಗಳು) ಭರ್ಜರಿ ಬೇಟೆಯಾಡಿದ್ದಾರೆ. ಸುಮಾರು 2000 ಕೋಟಿ ರೂಪಾಯಿ ಮೌಲ್ಯದ ಮದ್ಯ ಹಗರಣ (Liquor Scam)ವನ್ನು ಭೇದಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಇರುವ ಛತ್ತೀಸ್ಗಢ್ನಲ್ಲಿ ಇದೀಗ ಇಡಿ ಅಧಿಕಾರಿಗಳು ಭೇದಿಸಿರುವ ಮದ್ಯದ ಹಗರಣದಲ್ಲಿ ಹಲವು ಪ್ರಮುಖ ರಾಜಕಾರಣಿಗಳು, ಅಧಿಕಾರಶಾಹಿಗಳ ಪಾಲೂ ಇದೆ ಎಂದು ಹೇಳಲಾಗಿದೆ. ಈ ಹಗರಣದ ಪ್ರಮುಖ ಆರೋಪಿ ಅನ್ವರ್ ಧೇಬಾರ್ ಎಂಬುವನಾಗಿದ್ದು, ಆತನನ್ನು ಇಡಿ ಬಂಧಿಸಿದೆ. ರಾಯ್ಪುರ ಮೇಯರ್, ಕಾಂಗ್ರೆಸ್ ನಾಯಕ ಐಜಾಜ್ ಧೇಬರ್ನ ಸಹೋದರನಾಗಿರುವ ಅನ್ವರ್ ಧೇಬಾರ್ನನ್ನು ಇಡಿ 4 ದಿನಗಳ ಕಾಲ ತನ್ನ ಕಸ್ಟಡಿಗೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದೆ.
2019ರಿಂದ 2022ರ ಅವಧಿಯಲ್ಲಿ ಈ ಮದ್ಯ ಹಗರಣ ನಡೆದಿದೆ ಎನ್ನಲಾಗಿದೆ. ಹಣ ಅಕ್ರಮ ವರ್ಗಾವಣೆ, ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ಪುರಾವೆಯನ್ನು ಇಡಿ ಕಲೆಹಾಕಿದೆ. ಮಾರ್ಚ್ ತಿಂಗಳಲ್ಲಿ ಹಲವು ಪ್ರದೇಶಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸದ್ಯ ಈ ಕೇಸ್ ಹಲವು ರಾಜಕಾರಣಿಗಳ, ಪ್ರಮುಖ ಅಧಿಕಾರಿಗಳಿಗೆ ಕುತ್ತಾಗಲಿದೆ ಎಂದು ವರದಿಯಾಗಿದೆ. ‘ಅನ್ವರ್ ಧೇಬಾರ್ ಛತ್ತೀಸ್ಗಢ್ನಲ್ಲಿ ಕ್ರಿಮಿನಲ್ ಸಿಂಡಿಕೇಟ್ ರಚಿಸಿಕೊಂಡು, ಭ್ರಷ್ಟಾಚಾರ ನಡೆಸಿದ್ದು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ನಡೆಸಿದ ತನಿಖೆಯಲ್ಲಿ ದೃಢಪಟ್ಟಿದೆ. ಈ ಅನ್ವರ್, ಕೆಲವು ಪ್ರಮುಖ ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳಿಂದ ಬೆಂಬಲ ಪಡೆದು, ಖಾಸಗಿ ವ್ಯಕ್ತಿಗಳ ಮೂಲಕ ಅಕ್ರಮ ಕೆಲಸ ಮಾಡಿಸುತ್ತಿದ್ದ’ ಎಂದು ಇಡಿ ಹೇಳಿದೆ.
ಇದನ್ನೂ ಓದಿ: Liquor Policy Scam | ಬಿಜೆಪಿ ಹಂಚಿದೆ ಹಗರಣದ ಸ್ಟಿಂಗ್ ವಿಡಿಯೋ, ಇದಕ್ಕೇನು ಹೇಳ್ತಾರೆ ದಿಲ್ಲಿ ಡಿಸಿಎಂ ಸಿಸೋಡಿಯಾ?
ಅನ್ವರ್ ತುಂಬ ನಾಜೂಕಾಗಿ ವಂಚನೆಯ ಬಲೆ ಹೆಣೆದಿದ್ದ. ಅಕ್ರಮದ ಯೋಜನೆಗಳನ್ನು ಅನುಷ್ಠಾನ ಮಾಡಲು ಹಲವು ವ್ಯಕ್ತಿಗಳನ್ನು/ಘಟಕ/ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಬಳಸಿಕೊಂಡಿದ್ದ. ಛತ್ತೀಸ್ಗಢ್ನಲ್ಲಿ ಮಾರಾಟವಾಗುವ ಪ್ರತಿ ಮದ್ಯದ ಬಾಟಲಿಯಿಂದಲೂ ಈತ ಅಕ್ರಮ ಹಣ ಸಂಗ್ರಹ ಮಾಡಿದ್ದಾನೆ. ಇವನು ಇಷ್ಟು ದೊಡ್ಡಮೊತ್ತದ ಅಕ್ರಮ ಎಸಗಲು ಹಲವು ರಾಜಕಾರಣಿಗಳ/ಸರ್ಕಾರಿ ಅಧಿಕಾರಿಗಳ ಬೆಂಬಲವಿದೆ. ಅವರ ಮೇಲೆ ಕೂಡ ಕಣ್ಗಾವಲು ಇಟ್ಟಿದ್ದೇವೆ’ ಎಂದು ಇಡಿ ತಿಳಿಸಿದೆ.
ಛತ್ತೀಸ್ಗಢ್ನಲ್ಲಿ ಮದ್ಯ ವ್ಯಾಪಾರವು ಸಂಪೂರ್ಣವಾಗಿ ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿದೆ. ಅಲ್ಲಿರುವ ಎಲ್ಲ 800 ಮದ್ಯದ ಅಂಗಡಿಗಳೂ ರಾಜ್ಯ ಸರ್ಕಾರದಿಂದಲೇ ನಡೆಯುವಂಥದ್ದು. ಯಾವುದೇ ಖಾಸಗಿ ಮಳಿಗೆಗಳಿಗೆ ಅವಕಾಶವಿಲ್ಲ. ಮದ್ಯ ಮಾರಾಟಕ್ಕೆ ಸಂಬಂಧಪಟ್ಟಂತೆ ಪೂರೈಕೆಗೆ, ಅಂಗಡಿ ನಡೆಸುವ, ನಗದು ಸಂಗ್ರಹಣೆ ಮತ್ತಿತರ ಎಲ್ಲ ಕೆಲಸಗಳಿಗೂ ಅಲ್ಲಿನ ಸರ್ಕಾರವೇ ನೇರವಾಗಿ ಟೆಂಡರ್ ಕರೆಯುತ್ತದೆ. ಹೀಗೆಲ್ಲ ಇದ್ದ ಮೇಲೆ ಕೂಡ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.