ನವದೆಹಲಿ: ದೇಶಾದ್ಯಂತ ಸುದ್ದಿಯಾಗಿದ್ದ ಟಿಆರ್‌ಪಿ ಹಗರಣದಲ್ಲಿ (TRP Scam) ಪತ್ರಕರ್ತ ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿ, ಆರ್. ಭಾರತ್ ಸುದ್ದಿ ವಾಹಿನಿಗಳಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಕ್ಲೀನ್‌ಚಿಟ್ ನೀಡಿದೆ. ಆದರೆ, ಇದೇ ಪ್ರಕರಣದಲ್ಲಿ ಇಂಡಿಯಾ ಟುಡೇ ಹಾಗೂ ನ್ಯೂಸ್ ನೇಷನ್ ವಿರುದ್ಧ ತನಿಖೆ ಮುಂದುವರಿದಿದೆ.
ಟಿಆರ್‌ಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಳೆದ ವಾರ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ. “ಪ್ರಕರಣದಲ್ಲಿ ರಿಪಬ್ಲಿಕ್ ಟಿವಿಯ ಪಾತ್ರದ ಕುರಿತು ಪರಿಶೀಲನೆ ನಡೆಸಿದೆ. ಆದರೆ, ಮುಂಬೈ ಪೊಲೀಸರ ತನಿಖೆಗೂ, ನಮ್ಮ ತನಿಖೆಗೂ ವ್ಯತ್ಯಾಸವಿದೆ. ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಪಾತ್ರವಿಲ್ಲ” ಎಂದು ಉಲ್ಲೇಖಿಸಿದೆ. ಹಾಗೆಯೇ, ಇಂಡಿಯಾ ಟುಡೇ ಹಾಗೂ ನ್ಯೂಸ್ ನೇಷನ್ ವಿರುದ್ಧದ ತನಿಖೆ ಪೂರ್ಣಗೊಂಡಿಲ್ಲ ಎಂದೂ ಮಾಹಿತಿ ನೀಡಿದೆ.
ಏನಿದು ಪ್ರಕರಣ?
ಯಾವುದೇ ಚಾನೆಲ್‌ನ ಭವಿಷ್ಯ ನಿರ್ಧರಿಸುವ ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‌ಪಿ) ಕುರಿತ ಮಾಹಿತಿಯನ್ನು ತಿರುಚಿರುವ ಪ್ರಕರಣ ಇದಾಗಿದೆ. ಅಂದರೆ, ಚಾನೆಲ್‌ನ ಟಿಆರ್‌ಪಿ ಅಥವಾ ಎಷ್ಟು ಜನ ವೀಕ್ಷಿಸುತ್ತಾರೆ ಎಂಬ ಕುರಿತು ಮಾಹಿತಿ ನೀಡುವ ಬ್ರಾಡ್‌ಕಾಸ್ಟ್ ಅಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಅಧಿಕಾರಿಗಳಿಗೆ ಲಂಚ ನೀಡಿ, ಟಿಆರ್‌ಪಿ ಕುರಿತು ಸುಳ್ಳು ಮಾಹಿತಿ ಪಡೆದ ಪ್ರಕರಣವನ್ನು ೨೦೨೦ರಲ್ಲಿ ಮುಂಬೈ ಪೊಲೀಸರು ಭೇದಿಸಿದ್ದರು. ಹಲವು ಚಾನೆಲ್‌ಗಳ ವಿರುದ್ಧ ಆರೋಪಗಳು ಕೇಳಿಬಂದಿವೆ. ಹಾಗೆಯೇ, ೨೦೨೦ರಿಂದಲೂ ಪ್ರಕರಣದ ಕುರಿತು ಇ.ಡಿ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ | Jote Joteyali | TRP ಅಲ್ಲ, ಕಥೆ ಬಹಳ ಮುಖ್ಯ: ಅಭಿಮಾನಿಗಳ ಬೆಂಬಲ ನಿರೀಕ್ಷಿಸಿದ ಆರೂರು ಜಗದೀಶ್!