ದೆಹಲಿ ಅಬಕಾರಿ ನೀತಿ ಹಗರಣ (Delhi liquor policy Case)ದ ಪ್ರಕರಣವನ್ನು ಇ.ಡಿ. ಮತ್ತು ಸಿಬಿಐಗಳು ತನಿಖೆ ನಡೆಸುತ್ತಿದ್ದು, ಈ ಕೇಸ್ನಲ್ಲಿ ಆಪ್ನ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಈಗಾಗಲೇ ಜೈಲು ಸೇರಿದ್ದಾರೆ. ಅಬಕಾರಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮದ್ಯ ಉದ್ಯಮಿಗಳು, ವ್ಯಾಪಾರಿಗಳನ್ನೂ ಕೂಡ ತನಿಖಾ ದಳಗಳು ಅರೆಸ್ಟ್ ಮಾಡಿವೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರನ್ನೂ ಕೂಡ ಇ.ಡಿ.ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿವೆ. ಇಷ್ಟೆಲ್ಲದರ ಮಧ್ಯೆ ಆಪ್ನ ಇನ್ನೊಬ್ಬ ನಾಯಕ, ಸಂಸದ ರಾಘವ್ ಚಡ್ಡಾ (Raghav Chadha)ಗೂ ಸಂಕಷ್ಟ ಎದುರಾಗಿದೆ.
ರಾಘವ್ ಚಡ್ಡಾ ಹೆಸರನ್ನು ಇ.ಡಿ. ಇಂದು ಸಲ್ಲಿಕೆ ಮಾಡಿರುವ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ. 2021ರಲ್ಲಿ ನೂತನ ಅಬಕಾರಿ ನೀತಿಯನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಅಂದಿನ ಅಬಕಾರಿ ಸಚಿವರಾಗಿದ್ದ (ಈಗ ಜೈಲಿನಲ್ಲಿರುವ) ಮನೀಶ್ ಸಿಸೋಡಿಯಾ ಅವರ ನಿವಾಸದಲ್ಲಿ ಸಭೆ ನಡೆದಿತ್ತು. ಅದರಲ್ಲಿ ರಾಘವ್ ಚಡ್ಡಾ ಕೂಡ ಪಾಲ್ಗೊಂಡಿದ್ದರು ಎಂದು ಸಿಸೋಡಿಯಾ ಅವರ ಮಾಜಿ ಕಾರ್ಯದರ್ಶಿ ಸಿ.ಅರವಿಂದ್ ಎಂಬಾತ ಇ.ಡಿ. ಎದುರು ಹೇಳಿಕೆ ನೀಡಿದ ಬೆನ್ನಲ್ಲೇ ಇ.ಡಿ. ತನ್ನ ಚಾರ್ಜ್ಶೀಟ್ನಲ್ಲಿ ರಾಘವ್ ಚಡ್ಡಾ ಹೆಸರನ್ನೂ ಉಲ್ಲೇಖಿಸಿದೆ. ‘ಇನ್ನು ಸಭೆಯಲ್ಲಿ ರಾಘವ್ ಚಡ್ಡಾ ಜತೆಗೆ, ಪಂಜಾಬ್ ಅಬಕಾಯಿ ಆಯುಕ್ತ ವರುಣ್ ರೂಜಾಮ್ ಕೂಡ ಇದ್ದರು’ ಎಂದು ವರುಣ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Delhi Liquor Scam: ದೆಹಲಿ ಅಬಕಾರಿ ನೀತಿ ಅಕ್ರಮ; ಹೈದರಾಬಾದ್ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಬಂಧನ
ದೆಹಲಿ ಸರ್ಕಾರವು 2021ರಲ್ಲಿ ಜಾರಿಗೆ ತಂದ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಇ.ಡಿ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ. ಬೆಳಗಿನ ಜಾವ ಮೂರು ಗಂಟೆವರೆಗೆ ಬಾರ್‌ಗಳು ಓಪನ್ ಇರುವುದು, ಸುಲಭವಾಗಿ ಲೈಸೆನ್ಸ್ ನೀಡುವುದು ಸೇರಿ ಹಲವು ನಿಯಮಗಳು ಇದ್ದ ಈ ನೀತಿಯ ಜಾರಿ ವೇಳೆ ತಮಗೆ ಬೇಕಾದವರಿಗೆ ಲೈಸೆನ್ಸ್ ನೀಡಲು ಆಪ್ 100 ಕೋಟಿ ರೂ. ಲಂಚ ಪಡೆದಿದೆ ಎಂಬುದು ಆರೋಪವಾಗಿದೆ. ಮನೀಷ್ ಸಿಸೋಡಿಯಾ ಅವರು ಅಬಕಾರಿ ಸಚಿವರಾದ ಕಾರಣ, ತನಿಖಾ ದಳಗಳು ಅವರನ್ನೇ ಪ್ರಮುಖ ಆರೋಪಿಯನ್ನಾಗಿ ಪರಿಗಣಿಸಿವೆ. ಫೆಬ್ರವರಿಯಲ್ಲಿ ಅವರನ್ನು ಬಂಧಿಸಲಾಗಿದೆ. ಅದಕ್ಕೂ ಮೊದಲು ಹಲವು ಡೀಲರ್ಗಳೂ, ಮದ್ಯ ಉದ್ಯಮಿಗಳ ಅರೆಸ್ಟ್ ಆಗಿದೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪುತ್ರಿ ಕೆ.ಕವಿತಾರನ್ನೂ ಸಿಬಿಐ ಮತ್ತ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿವೆ.