ನವದೆಹಲಿ: ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಕೇಂದ್ರ ಸರ್ಕಾರ ಇ.ಡಿ. ಮೂಲಕ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಮತ್ತು ಸೇನಾ ನೇಮಕಾತಿ ಯೋಜನೆ ಅಗ್ನಿಪಥ್‌ನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಇಂದು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಪ್ರಮುಖರೆಲ್ಲ ಸೇರಿ ಪ್ರತಿಭಟನಾ ಸಭೆ ನಡೆಸಿದ್ದಾರೆ. ಇದರಲ್ಲಿ ರಾಹುಲ್ ಗಾಂಧಿಯೂ ಪಾಲ್ಗೊಂಡಿದ್ದರು. ರಾಜ್ಯ ಕಾಂಗ್ರೆಸ್ ನಾಯಕರಾದ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ ಇತರರು ಇದ್ದರು.
ಈ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ʼನಾವು ಇ.ಡಿ. ವಿಚಾರವನ್ನು ಬಿಟ್ಟುಬಿಡೋಣ. ಇಡಿ ಅಥವಾ ಅಂಥ ಯಾವುದೇ ಏಜೆನ್ಸಿಗಳೂ ನನ್ನನ್ನು ಭಯಪಡಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರು ಯಾರೂ ಇಂಥದ್ದಕ್ಕೆಲ್ಲ ಹೆದರುವುದಿಲ್ಲ, ಅವರ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದು ಇ.ಡಿ. ಅಧಿಕಾರಿಗಳಿಗೂ ಅರ್ಥವಾಗಿದೆ. ಇನ್ನೇನಿದ್ದರೂ ಅಗ್ನಿಪಥ್ ವಿರೋಧಿ ಹೋರಾಟ ಬಲಪಡಿಸೋಣʼ ಎಂದು ಹೇಳಿದರು. ಹಾಗೇ, ʼನನ್ನನ್ನು ವಿಚಾರಣೆಗೆ ಇ.ಡಿ. ವಿಚಾರಣೆಗೆ ಒಳಪಡಿಸಿದಾಗ ಪಕ್ಷದ ಕಾರ್ಯಕರ್ತರು ಅಪಾರ ಬೆಂಬಲ ನೀಡಿದರು. ನನ್ನೊಬ್ಬನನ್ನೇ ಬಿಡದೆ ಜತೆಯಾಗಿ ನಿಂತರು, ಅವರಿಗೆಲ್ಲ ಎಷ್ಟು ಧನ್ಯವಾದ ಸಲ್ಲಿಸಿದರೂ ಸಾಲದುʼ ಎಂದರು.
ಒಂದು ಚಿಕ್ಕ ಕೋಣೆಯಲ್ಲಿ ಸುದೀರ್ಘ ಅವಧಿಯವರೆಗೆ ಅಂದರೆ 10-11ತಾಸು ಕುಳಿತು ವಿಚಾರಣೆ ಎದುರಿಸಿದ ರಾಹುಲ್ ಗಾಂಧಿ ಇಂದಿನ ಸಭೆಯಲ್ಲಿ ಆ ಅನುಭವವನ್ನೂ ಹಂಚಿಕೊಂಡರು. ʼಇ.ಡಿ.ಅಧಿಕಾರಿಗಳು ನನ್ನ ಬಳಿ, ನಿಮ್ಮ ಎನರ್ಜಿಯ ಗುಟ್ಟೇನು ಎಂದು ಕೇಳಿದರು. ನಾನು ವಿಪಶ್ಯನ ಯೋಗ ಮಾಡುತ್ತೇನೆ. ಹಾಗಾಗಿ ಸುದೀರ್ಘ ಸಮಯದವರೆಗೆ ನನಗೆ ಒಂದೇ ಕೋಣೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿದೆ ಎಂದು ಇ.ಡಿ. ಅಧಿಕಾರಿಗಳಿಗೆ ಹೇಳಿದೆ. ಅದಕ್ಕವರು ʼವಿಪಶ್ಯನ ಎಂದರೆ ಏನುʼ ಎಂದು ಪ್ರಶ್ನಿಸಿದರು. ಅದೊಂದು ಮಾದರಿಯ ಯೋಗ ಎಂದು ವಿವರಿಸಿದೆ. ಆದರೆ ನನಗೆ ಒಂದು ಚಿಕ್ಕ ಕೋಣೆಯಲ್ಲಿ 10-11 ತಾಸು ಕುಳಿತುಕೊಳ್ಳಲು ಸಾಧ್ಯವಾಗಿದ್ದಕ್ಕೆ ಕಾರಣ ಬೇರೆಯದ್ದೇ ಇದೆ. ಅಲ್ಲಿ ನಾನೊಬ್ಬನೇ ಇದ್ದೆ ಎಂದು ಅನ್ನಿಸಲಿಲ್ಲ. ಬದಲಿಗೆ ನನ್ನ ಜತೆ ಕಾಂಗ್ರೆಸ್‌ನ ಪ್ರತಿಯೊಬ್ಬ ಹಿರಿಯರು, ಕಾರ್ಯಕರ್ತರು ಇದ್ದರು. ಹಾಗಾಗಿ ಒಂಟಿ ಅನ್ನಿಸಲಿಲ್ಲ. ಯಾವುದೇ ಬಳಲಿಕೆಯೂ ಆಗಲಿಲ್ಲʼ ಎಂದು ರಾಹುಲ್ ಗಾಂಧಿ ಹೇಳಿದರು.
ತಾಳ್ಮೆಯ ಗುಟ್ಟು ಹೇಳಿದ ರಾಹುಲ್ ಗಾಂಧಿ
ʼನನ್ನ ತಾಳ್ಮೆಯನ್ನು ನೋಡಿ ಇ.ಡಿ. ಅಧಿಕಾರಿಗಳೇ ಅಚ್ಚರಿಪಟ್ಟಿದ್ದಾರೆ. ನಿಮಗೆ ಇಷ್ಟು ತಾಳ್ಮೆ ಹೇಗೆ ಎಂದು ಪ್ರಶ್ನಿಸಿದರು. ಆದರೆ ನಾನದಕ್ಕೆ ಅವರಿಗೆ ಉತ್ತರ ಕೊಟ್ಟಿಲ್ಲ. ನಾನು ಈಗಾಗಲೇ ನನ್ನ ಎನರ್ಜಿಯ ಗುಟ್ಟನ್ನು ಹೇಳಿದ್ದೇನೆ. ಮತ್ತೆ ತಾಳ್ಮೆಯ ಗುಟ್ಟನ್ನೂ ಹೇಳುವುದಿಲ್ಲ ಎಂದೆ. ಆದರೆ ಇಲ್ಲಿ, ಸಭೆಯಲ್ಲಿ ಹೇಳುತ್ತಿದ್ದೇನೆ, ನನಗೆ ತಾಳ್ಮೆ ಕಲಿಸಿದ್ದೇ ನನ್ನ ಪಕ್ಷ. ನನಗೊಬ್ಬನಿಗೆ ಎಂದಲ್ಲ, ನಮ್ಮ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬರಿಗೂ ತಾಳ್ಮೆಯಿದೆ. ಆದರೆ ಬಿಜೆಪಿಯಲ್ಲಿ ಹಾಗಿಲ್ಲ. ಕೈಕಟ್ಟಿಕೊಂಡಿರಬೇಕು, ಸತ್ಯವನ್ನು ಹೇಳಬಾರದು ಎಂಬ ನಿಯಮವಿದೆʼ ಎಂದೂ ಕೈ ನಾಯಕ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಪೆನ್ಶನ್ ಹಣ ಉಳಿಸಿ ಅಭಿವೃದ್ಧಿ ಸಾಧಿಸಲು ಅಗ್ನಿಪಥ್ ಯೋಜನೆ: ಗೃಹ ಸಚಿವ ಆರಗ ಜ್ಞಾನೇಂದ್ರ ವ್ಯಾಖ್ಯಾನ
ಅಗ್ನಿಪಥ್ ಯೋಜನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಗ್ನಿಪಥ್ ಯೋಜನೆ ಮೂಲಕ ಇಡೀ ಸೈನ್ಯವನ್ನು ದುರ್ಬಲಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ. ಆದರೆ ತಮ್ಮನ್ನು ತಾವು ರಾಷ್ಟ್ರೀಯವಾದಿಗಳೆಂದು ಕರೆದುಕೊಳ್ಳುತ್ತಿದೆ. ಅಗ್ನಿವೀರರಾಗಿ ಸೇನೆಗೆ ಸೇರುವವರು 4ವರ್ಷ ಮುಂಜಾನೆ 4 ಗಂಟೆಗೆ ಎದ್ದು, ಓಡಿ, ತರಬೇತಿ ಪಡೆದು ಸೇವೆ ಸಲ್ಲಿಸುತ್ತಾರೆ. ಆದರೆ ನಾಲ್ಕು ವರ್ಷಗಳ ಬಳಿಕ ಅವರಿಗೆ ಒಂದೊಳ್ಳೆ ಉದ್ಯೋಗ ಸಿಗದೆ ಹೋಗುತ್ತದೆ. ಅವರ ಭವಿಷ್ಯವನ್ನು ಕಾಪಾಡುವುದು ನಮ್ಮ ಜವಾಬ್ದಾರಿ. ಹೀಗಾಗಿ ಅಗ್ನಿಪಥ್ ಯೋಜನೆ ಅವೈಜ್ಞಾನಿಕ ಎಂಬುದನ್ನು ಅರ್ಥಮಾಡಿಸಬೇಕು. ಅದರ ವಿರುದ್ಧ ನಾವು ಹೋರಾಟ ಮಾಡಬೇಕು ಎಂದು ಹೇಳಿದರು. ಈ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ, ಕೆ. ಸಿ. ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಇತರರು ಇದ್ದರು.
ಇದನ್ನೂ ಓದಿ: ಹೊಸ ಮಾದರಿಯ ಯುದ್ಧ ಎದುರಿಸಲು ಅಗ್ನಿಪಥ್ ಅಸ್ತ್ರ; ಎನ್‌ಎಸ್‌ಎ ಅಜಿತ್ ದೋವಲ್ ಪ್ರತಿಪಾದನೆ