Site icon Vistara News

National Herald Case | ನ್ಯಾಷನಲ್ ಹೆರಾಲ್ಡ್​ ಕಚೇರಿ ಸೇರಿ 10 ಪ್ರದೇಶಗಳಲ್ಲಿ ಇಡಿ ದಾಳಿ

Herald House

ನವ ದೆಹಲಿ: ನ್ಯಾಷನಲ್ ಹೆರಾಲ್ಡ್​ ಕೇಸ್​​​ನಲ್ಲಿ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿಯನ್ನು ಐದು ಸುತ್ತು ಮತ್ತು ಮುಖ್ಯಸ್ಥೆ ಸೋನಿಯಾ ಗಾಂಧಿಯನ್ನು ಮೂರು ಹಂತದಲ್ಲಿ ವಿಚಾರಣೆಗೆ ಒಳಪಡಿಸಿದ ಇಡಿ ಅಧಿಕಾರಿಗಳು ಇಂದು ನ್ಯಾಷನಲ್​ ಹೆರಾಲ್ಡ್ ಕಚೇರಿ ಸೇರಿ, 10 ಪ್ರದೇಶಗಳ ಮೇಲೆ ರೇಡ್​ ಮಾಡಿದ್ದಾರೆ.

ನ್ಯಾಷನಲ್​ ಹೆರಾಲ್ಡ್​ ಎಂಬುದು ಸ್ವಾತಂತ್ರ್ಯ ಪೂರ್ವದ ಪತ್ರಿಕೆಯಾಗಿದ್ದು, ಜವಾಹರ್​ ಲಾಲ್​ ನೆಹರೂ 1938ರಲ್ಲಿ ಪ್ರಾರಂಭಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಉತ್ತೇಜನ ನೀಡುವ ಸಲುವಾಗಿ ಹುಟ್ಟಿಕೊಂಡ ಈ ಪತ್ರಿಕೆಯನ್ನು ಅಸೋಷಿಯೇಟೆಡ್ ಜರ್ನಲ್ಸ್ ಲಿಮಿಟೆಡ್​ ಪ್ರಕಟಿಸುತ್ತಿತ್ತು. 2010ರಲ್ಲಿ ಇದು ಯಂಗ್ ಇಂಡಿಯಾಕ್ಕೆ ವರ್ಗಾವಣೆಯಾಗಿದೆ. ಹೀಗೆ ವರ್ಗಾವಣೆ ಆಗುವ ಹೊತ್ತಲ್ಲಿ ದೊಡ್ಡಮೊತ್ತದ ಅಕ್ರಮ ನಡೆದಿದೆ ಎಂಬುದು ಆರೋಪ.

ಯಂಗ್​ ಇಂಡಿಯಾವನ್ನು ಸ್ಥಾಪಿಸಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಇದರಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಪಾಲು ಶೇ. 7.6ರಷ್ಟಿದೆ. ಉಳಿದ ಪಾಲು ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್ ಅವರ ಬಳಿ ಇತ್ತು. ಇನ್ನು 2010ರ ಹೊತ್ತಿಗೆ ಅಸೋಷಿಯೇಟೆಡ್ ಜರ್ನಲ್ಸ್ ಲಿಮಿಟೆಡ್​​ನಿಂದ ಯಂಗ್​ ಇಂಡಿಯಾಕ್ಕೆ ನ್ಯಾಷನಲ್​ ಹೆರಾಲ್ಡ್​ ಪತ್ರಿಕೆ ವರ್ಗಾವಣೆಯಾಗುವಾಗ 90 ಕೋಟಿ ರೂಪಾಯಿಗೂ ಅಧಿಕ ಸಾಲವಿತ್ತು. ಸಾಲ ವರ್ಗಾವಣೆಯಾಗಲೀ, ಷೇರು ವರ್ಗಾವಣೆಯಾಗಲೀ ಕಾನೂನು ಬದ್ಧವಾಗಿಲ್ಲ ಎಂದು ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ದೂರು ಸಲ್ಲಿಸಿದ್ದರು. ಯಂಗ್​ ಇಂಡಿಯಾದಲ್ಲಿ ಷೇರು ಹೊಂದಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್​ ವೋರಾ, ಆಸ್ಕರ್​ ಫರ್ನಾಂಡಿಸ್​, ಸ್ಯಾಮ್​ ಪಿತ್ರೊಡ, ಪತ್ರಕರ್ತ ಸುಮನ್​ ದುಬೆ ಇತರರ ಹೆಸರನ್ನೂ ಅವರು ಉಲ್ಲೇಖಿಸಿದ್ದರು.

ನ್ಯಾಷನಲ್​ ಹೆರಾಲ್ಡ್​ ಕೇಸ್​​ನಲ್ಲಿ ಯಾರೆಲ್ಲರ ಹೆಸರು ಕೇಳಿಬಂದಿದೆಯೋ ಅವರೆಲ್ಲರನ್ನೂ ಇಡಿ ವಿಚಾರಣೆಗೆ ಒಳಪಡಿಸಿದೆ. ಪ್ರಕರಣದ ತನಿಖೆಯನ್ನೂ ಚುರುಕುಗೊಳಿಸಿದೆ. ಜೂನ್​ ತಿಂಗಳಲ್ಲಿ ರಾಹುಲ್​ ಗಾಂಧಿಯನ್ನು ಐದು ದಿನ ವಿಚಾರಣೆ ಮಾಡಲಾಗಿದೆ ಮತ್ತು ಜುಲೈನಲ್ಲಿ ಸೋನಿಯಾ ಗಾಂಧಿಯವರನ್ನು ಮೂರು ದಿನ ತೀವ್ರ ವಿಚಾರಣೆ ಮಾಡಲಾಗಿದೆ. ಇವರಿಬ್ಬರೂ ಕೂಡ ಹಣ ವರ್ಗಾವಣೆ ಬಗ್ಗೆ ನಮಗೇನೂ ಗೊತ್ತಿಲ್ಲ. ಯಂಗ್​ ಇಂಡಿಯಾಕ್ಕೆ ಸಂಬಂಧಪಟ್ಟ ಹಣಕಾಸಿನ ಜವಾಬ್ದಾರಿಯನ್ನು ಮೋತಿಲಾಲ್​ ವೋರಾ ಹೊತ್ತಿದ್ದರು ಎಂದು ಹೇಳಿದ್ದಾರೆ. ಅದರ ಬೆನ್ನಲ್ಲೇ ಇಡಿ ವಿವಿಧ ಕಡೆಗಳಲ್ಲಿ ದಾಳಿ ನಡೆಸುತ್ತಿದೆ.

ಇದನ್ನೂ ಓದಿ: ನ್ಯಾಷನಲ್‌ ಹೆರಾಲ್ಡ್‌ ಕೇಸ್‌ ಮೋತಿಲಾಲ್‌ ವೋರಾ ತಲೆಗೆ ಕಟ್ಟಲು ರಾಹುಲ್ ಯತ್ನ!

Exit mobile version