ನವ ದೆಹಲಿ: ಪಶ್ಚಿಮ ಬಂಗಾಳ ಶಾಲಾ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಆರೋಪಿಯಾಗಿರುವ ಅರ್ಪಿತಾ ಮುಖರ್ಜಿ ಮನೆಯಲ್ಲಿ ಎಲ್ಲೆಲ್ಲೂ ಹಣವೋ ಹಣ. ಬುಧವಾರ ಮಧ್ಯಾಹ್ನದಿಂದಲೂ ಪಶ್ಚಿಮ ಬಂಗಾಳದ ಉತ್ತರ ಪರಗಣದ ಬೆಲ್ಘಾರಿಯಾ ನಿವಾಸದಲ್ಲಿ ಇ ಡಿ ಶೋಧ ನಡೆದಿತ್ತು. ಈ ಬಾರಿಯಂತೂ ಬುಧವಾರ ಮಧ್ಯಾಹ್ನದಿಂದ ಗುರುವಾರ ಮುಂಜಾನೆ 4ಗಂಟೆವರೆಗೆ ಸುಮಾರು 18 ತಾಸುಗಳ ಕಾಲ ರೇಡ್ ಮಾಡಿದ ಅಧಿಕಾರಿಗಳಿಗೆ ಅಲ್ಲಿ 28.90 ಕೋಟಿ ರೂಪಾಯಿ ನಗದು, 5 ಕೆಜಿ ಚಿನ್ನ ಸಿಕ್ಕಿದೆ. ಈ ಮನೆಯ ಶೌಚಗೃಹದಲ್ಲೂ ಹಣ ಪತ್ತೆಯಾಗಿದೆ. ಹಾಗೇ, ಕಳೆದ ಶುಕ್ರವಾರ ರೇಡ್ ಮಾಡಿದಾಗ 21 ಕೋಟಿ ರೂ. ಪತ್ತೆಯಾಗಿತ್ತು. ಅಲ್ಲಿಗೆ ಅರ್ಪಿತಾ ಮನೆಯಲ್ಲಿ ಒಟ್ಟಾರೆ ಸಿಕ್ಕ ಹಣ 50 ಕೋಟಿ ರೂಪಾಯಿಗೂ ಹೆಚ್ಚು ಎಂದು ಇ ಡಿ ಮೂಲಗಳು ತಿಳಿಸಿವೆ.
ಅರ್ಪಿತಾ ಮುಖರ್ಜಿ ಮನೆಯಲ್ಲಿ ಮೊಟ್ಟಮೊದಲು ಇ ಡಿ ದಾಳಿಯಾಗಿದ್ದು ಜುಲೈ ೨೨ರಂದು. ಅಂದು 21.90 ಕೋಟಿ ರೂ. ನಗದು, 56 ಲಕ್ಷ ರೂ. ವಿದೇಶಿ ಕರೆನ್ಸಿ, 76 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಸಿಕ್ಕಿತ್ತು. ಇದೆಲ್ಲ ಸೇರಿ ಅಂದು ಸಿಕ್ಕಿದ್ದ ಆಸ್ತಿಯ ಮೌಲ್ಯ 23.22 ಕೋಟಿ ರೂಪಾಯಿ ಆಗಿತ್ತು. ಪಾರ್ಥ ಚಟರ್ಜಿ ಶಿಕ್ಷಣ ಸಚಿವರಾಗಿದ್ದಾಗ ನಡೆದ ಹಗರಣ ಇದು. ತನ್ನ ಮನೆಯಲ್ಲಿ ಸಿಕ್ಕ ಹಣವೆಲ್ಲ ಸಚಿವ ಪಾರ್ಥ ಅವರಿಗೇ ಸೇರಿದ್ದು. ಅವರು ನನ್ನ ಮನೆಯನ್ನು ಮಿನಿ ಬ್ಯಾಂಕ್ ಮಾಡಿಕೊಂಡಿದ್ದರು ಎಂದೂ ಹೇಳಿದ್ದಾರೆ.
ಬುಧವಾರ ಇ ಡಿ ಅಧಿಕಾರಿಗಳು, ಕೇಂದ್ರ ಸಶಸ್ತ್ರ ಪಡೆಗಳ ಭದ್ರತೆಯಲ್ಲಿ ಅರ್ಪಿತಾ ಮನೆಯ ಬಳಿ ತೆರಳಿದ್ದರು. ಆಕೆಯ ನಿವಾಸದ ಪ್ರವೇಶ ದ್ವಾರವನ್ನು ಮುರಿಯಲಾಗಿದೆ. ಬಳಿಕ ಆಕೆಯ ಮನೆಯ ಪ್ರತಿ ಕೋಣೆ ಕೋಣೆ ಶೋಧ ನಡೆದಿದೆ. 500 ರೂಪಾಯಿ ನೋಟುಗಳ ಕಂತೆ ಮತ್ತು 1000 ರೂಪಾಯಿ ನೋಟುಗಳ ಕಂತೆಯನ್ನು ಪ್ರತ್ಯೇಕವಾಗಿಯೇ ಇಡಲಾಗಿತ್ತು. ಅದನ್ನು ನೋಡಿದ ತಕ್ಷಣ ಇ ಡಿ ಅಧಿಕಾರಿಗಳು ಆರ್‌ಬಿಐಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಹಾಗೇ ನೋಟು ಎಣಿಕೆ ಮಾಡಲು ಸಹಾಯ ಕೋರಿದ್ದಾರೆ. ಕೆಲವೇ ಹೊತ್ತಲ್ಲಿ ಅಲ್ಲಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿ ನಾಲ್ಕು ನೋಟು ಎಣಿಕೆ ಯಂತ್ರದೊಂದಿಗೆ ಅಲ್ಲಿಗೆ ಆಗಮಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮನೆಯಲ್ಲಿ ಹಣದ ಹೊಳೆ; ಇಂದು ಮತ್ತೆ 20 ಕೋಟಿ ರೂ. ನಗದು ಪತ್ತೆ !