ನವ ದೆಹಲಿ: ಕಾಂಗ್ರೆಸ್ಗೆ ಸೇರಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಕಚೇರಿಯನ್ನು ಇಡಿ ಅಧಿಕಾರಿಗಳು ಇಂದು ಸೀಲ್ ಮಾಡಿದ್ದಾರೆ. ಹಾಗೇ, ಜಾರಿ ನಿರ್ದೇಶನಾಲಯದ ಅನುಮತಿ ಇಲ್ಲದೆ, ಕಚೇರಿ ಗೇಟ್ನ್ನು ತೆರೆಯಬಾರದು, ಆವರಣವನ್ನೂ ಪ್ರವೇಶ ಮಾಡಬಾರದು ಎಂದೂ ಸೂಚನೆ ನೀಡಿದ್ದಾರೆ. ಇಲ್ಲೆಲ್ಲ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಎಐಸಿಸಿ ಪ್ರಧಾನ ಕಚೇರಿ ಹೊರಭಾಗದಲ್ಲಿಯೂ ಅಪಾರ ಪೊಲೀಸರನ್ನು ನಿಯೋಜಿಸಲಾಗಿದೆ. ನಿನ್ನೆ (ಆಗಸ್ಟ್ 3)ಯಷ್ಟೇ ಇ ಡಿ ಅಧಿಕಾರಿಗಳು ನ್ಯಾಷನಲ್ ಹೆರಾಲ್ಡ್ ಕಚೇರಿ ಸೇರಿ, ಪ್ರಕರಣಕ್ಕೆ ಸಂಬಂಧಪಟ್ಟ ಒಟ್ಟು 11 ಸ್ಥಳಗಳಲ್ಲಿ ಶೋಧ ನಡೆಸಿದ್ದರು. ಅದರ ಬೆನ್ನಲ್ಲೇ ಕಚೇರಿಗೆ ಬೀಗ ಹಾಕಿ, ಸೀಲ್ ಮಾಡಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಪಟ್ಟು ಹಣ ಅಕ್ರಮ ವರ್ಗಾವಣೆ ಆಗಿದೆ ಎಂಬ ಆರೋಪದಡಿ ತನಿಖೆ ನಡೆಸಲಾಗುತ್ತಿದೆ. ಈ ತನಿಖೆಯ ಒಂದು ಭಾಗವಾಗಿ ಇ ಡಿ ಕಚೇರಿಯನ್ನು ತಾತ್ಕಾಲಿಕವಾಗಿ ಸೀಲ್ ಮಾಡಲಾಗಿದೆ ಎಂದು ಇಡಿ ತಿಳಿಸಿದೆ. ಇಲ್ಲಿಗೆ ಇಂದು ಆಗಮಿಸಿದ್ದ ಮಲ್ಲಿಕಾರ್ಜುನ್ ಖರ್ಗೆ ಆವರಣಕ್ಕೆ ಪ್ರವೇಶಿಸಲಾಗದೆ ವಾಪಸ್ ಹೋಗಿದ್ದಾರೆ. ನ್ಯಾಷನಲ್ ಹೆರಾಲ್ಡ್ ಕೇಸ್ನಡಿ ಇಡಿ ಅಧಿಕಾರಿಗಳು ಈಗಾಗಲೇ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ವಿವಿಧ ಹಂತಗಳಲ್ಲಿ ವಿಚಾರಣೆ ನಡೆಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಎಂಬುದು ಸ್ವಾತಂತ್ರ್ಯ ಪೂರ್ವದ ಪತ್ರಿಕೆಯಾಗಿದ್ದು, ಜವಾಹರ್ ಲಾಲ್ ನೆಹರೂ 1938ರಲ್ಲಿ ಪ್ರಾರಂಭಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಉತ್ತೇಜನ ನೀಡುವ ಸಲುವಾಗಿ ಹುಟ್ಟಿಕೊಂಡ ಈ ಪತ್ರಿಕೆಯನ್ನು ಅಸೋಷಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಪ್ರಕಟಿಸುತ್ತಿತ್ತು. 2010ರಲ್ಲಿ ಇದು ಯಂಗ್ ಇಂಡಿಯಾಕ್ಕೆ ವರ್ಗಾವಣೆಯಾಗಿದೆ. ಹೀಗೆ ವರ್ಗಾವಣೆ ಆಗುವ ಹೊತ್ತಲ್ಲಿ ದೊಡ್ಡಮೊತ್ತದ ಅಕ್ರಮ ನಡೆದಿದೆ ಎಂಬುದು ಆರೋಪ.
ಯಂಗ್ ಇಂಡಿಯಾವನ್ನು ಸ್ಥಾಪಿಸಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಇದರಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಪಾಲು ಶೇ. 7.6ರಷ್ಟಿದೆ. ಉಳಿದ ಪಾಲು ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್ ಅವರ ಬಳಿ ಇತ್ತು. ಇನ್ನು 2010ರ ಹೊತ್ತಿಗೆ ಅಸೋಷಿಯೇಟೆಡ್ ಜರ್ನಲ್ಸ್ ಲಿಮಿಟೆಡ್ನಿಂದ ಯಂಗ್ ಇಂಡಿಯಾಕ್ಕೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವರ್ಗಾವಣೆಯಾಗುವಾಗ 90 ಕೋಟಿ ರೂಪಾಯಿಗೂ ಅಧಿಕ ಸಾಲವಿತ್ತು. ಸಾಲ ವರ್ಗಾವಣೆಯಾಗಲೀ, ಷೇರು ವರ್ಗಾವಣೆಯಾಗಲೀ ಕಾನೂನು ಬದ್ಧವಾಗಿಲ್ಲ ಎಂದು ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ದೂರು ಸಲ್ಲಿಸಿದ್ದರು. ಯಂಗ್ ಇಂಡಿಯಾದಲ್ಲಿ ಷೇರು ಹೊಂದಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸ್ಯಾಮ್ ಪಿತ್ರೊಡ, ಪತ್ರಕರ್ತ ಸುಮನ್ ದುಬೆ ಇತರರ ಹೆಸರನ್ನೂ ಅವರು ಉಲ್ಲೇಖಿಸಿದ್ದರು
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಕೇಸ್ ಮೋತಿಲಾಲ್ ವೋರಾ ತಲೆಗೆ ಕಟ್ಟಲು ರಾಹುಲ್ ಯತ್ನ!