Site icon Vistara News

Mamata Banerjee: ಅಭಿಷೇಕ್‌ ಬ್ಯಾನರ್ಜಿಗೆ ಇ.ಡಿ ನೋಟಿಸ್‌; ಮೋದಿ ಅಂಜುಬುರುಕ ಎಂದ ಮಮತಾ ಬ್ಯಾನರ್ಜಿ

Sinners attended final match india defeated Says mamata banerjee

ಕೋಲ್ಕೊತಾ: ಪಶ್ಚಿಮ ಬಂಗಾಳದ ಸರಕಾರಿ ಶಾಲೆಗಳಲ್ಲಿನ ಶಿಕ್ಷಕರ ನೇಮಕದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು, ಸೆಪ್ಟೆಂಬರ್‌ 13ರಂದು ವಿಚಾರಣೆಗೆ ಹಾಜರಾಗುವಂತೆ ತೃಣಮೂಲ ಕಾಂಗ್ರೆಸ್‌ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರಿಗೆ ಸಮನ್ಸ್‌ ನೀಡಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಂಸದ ಅಭಿಷೇಕ್‌ ಬ್ಯಾನರ್ಜಿ ಸೆಪ್ಟೆಂಬರ್‌ 13ರಂದು ಐಎನ್‌ಡಿಐಎ (ಇಂಡಿಯ) ಮೈತ್ರಿಕೂಟದ ಸಮನ್ವಯ ಸಭೆಗೆ ಹಾಜರಾಗಬೇಕಿತ್ತು. ಆದರೆ ಅದೇ ದಿನ ವಿಚಾರಣೆಗೆ ಕರೆದಿರುವುದಕ್ಕೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿರಿಕಾರಿದ್ದಾರೆ. ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿರುವ ಅವರು, “ಇಂಡಿಯಾ ಸಮಿತಿಯ ಸಭೆಯ ದಿನವೇ ವಿಚಾರಣೆಗೆ ಹಾಜರಾಗುವಂತೆ ನನಗೆ ಸಮನ್ಸ್ ನೀಡಲಾಗಿದೆ. 56 ಇಂಚು ಎದೆಯವರ ಅಂಜುಬುರುಕತನ ಮತ್ತು ಖಾಲಿತನವನ್ನು ಕಂಡು ನನಗೆ ಅಚ್ಚರಿ ಪಡದೆ ಇರುವುದಕ್ಕೆ ಸಾಧ್ಯವೇ ಇಲ್ಲ” ಎಂದು ಮಮತಾ ಬ್ಯಾನರ್ಜಿ ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಪ್ರತಿಪಕ್ಷಗಳು ಜಂಟಿಯಾಗಿ ರಚಿಸಿಕೊಂಡಿರುವ ಇಂಡಿಯ ಸಮನ್ವಯ ಸಮಿತಿಯ 14 ಸದಸ್ಯರ ಪೈಕಿ ಅಭಿಷೇಕ್‌ ಬ್ಯಾನರ್ಜಿ ಸಹ ಒಬ್ಬರು. ಉಳಿದಂತೆ, ಕೆ.ಸಿ. ವೇಣುಗೋಪಾಲ್‌ (ಕಾಂಗ್ರೆಸ್)‌, ಟಿ. ಆರ್.‌ ಬಾಲು (ಡಿಎಂಕೆ), ಹೇಮಂತ್‌ ಸೊರೆನ್‌ (ಜೆಎಂಎಂ), ಸಂಜಯ್‌ ರಾವತ್‌ (ಶಿವಸೇನೆ), ತೇಜಸ್ವಿ ಯಾದವ್‌ (ಆರ್‌ಜೆಡಿ), ರಾಘವ್‌ ಚಡ್ಡಾ (ಎಎಪಿ), ಜಾವೇದ್‌ ಅಲಿ ಖಾನ್‌ (ಎಸ್‌ಪಿ), ಲಲನ್‌ ಸಿಂಗ್‌ (ಜೆಡಿ-ಯು), ಡಿ. ರಾಜಾ (ಸಿಪಿಐ), ಒಮರ್‌ ಅಬ್ದುಲ್ಲ (ಎನ್‌ಸಿ), ಮೆಹಬೂಬ ಮುಫ್ತಿ (ಪಿಡಿಪಿ) ಈ ಸಮಿತಿಯಲ್ಲಿದ್ದಾರೆ.

ಇದನ್ನೂ ಓದಿ: Raksha Bandhan: ಅಮಿತಾಭ್ ಬಚ್ಚನ್‌ಗೆ ರಾಖಿ ಕಟ್ಟಿದ ಬಂಗಾಳ ಸಿಎಂ ಮಮತಾ! ಬಚ್ಚನ್ ‘ಭಾರತ ರತ್ನ’ ಎಂದಿದ್ದೇಕೆ?

ಪಶ್ಚಿಮ ಬಂಗಾಳದ ಸರಕಾರಿ ಶಾಲೆಯ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ʻಲೀಪ್ಸ್‌ ಎಂಡ್‌ ಬೌಂಡ್ಸ್‌ʼ ಎಂಬ ಖಾಸಗಿ ಸಂಸ್ಥೆಯ ಮೇಲೆ ಇತ್ತೀಚೆಗೆ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಸಂಸದ ಬ್ಯಾನರ್ಜಿ ಈ ಸಂಸ್ಥೆಯ ಸಿಇಒ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಂಸದರಿಗೆ ವಿಚಾರಣೆಗೆ ಹಾಜರಾಗುವಂತೆ ತನಿಖಾ ಸಂಸ್ಥೆ ಸೂಚಿಸಿದೆ. ಆದರೆ ಇದರಲ್ಲಿ ತಮ್ಮದೇನೂ ಪಾತ್ರವಿಲ್ಲ, ಇವೆಲ್ಲಾ ರಾಜಕೀಯ ಪ್ರೇರಿತ ಎಂದು ಅಭಿಷೇಕ್‌ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.

Exit mobile version