ಮುಂಬಯಿಯ ಸಹಕಾರಿ ಹೌಸಿಂಗ್ ಸೊಸೈಟಿ (ವಸತಿ ಸಮುಚ್ಛಯ)ಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಬಕ್ರೀದ್ ಹಬ್ಬದ (Eid al-Adha) ನಿಮಿತ್ತ ಬಲಿ ಕೊಡಲು ಎರಡು ಕುರಿಗಳನ್ನು ತಂದ ನಂತರ ಅಲ್ಲಿದ್ದ ಹಿಂದು ಸಮುದಾಯ (Hindu Community)ದವರೆಲ್ಲ ಸೇರಿ ಗಲಾಟೆ ಎಬ್ಬಿಸಿದ್ದಾರೆ. ಅಷ್ಟೇ ಅಲ್ಲ, ಆ ಕುರಿಗಳನ್ನು ಮುಂದೆ ಒಯ್ಯುವುದನ್ನು ತಡೆದು, ಹಿಂದು ಧರ್ಮೀಯರೆಲ್ಲ ಸೇರಿ ದೊಡ್ಡದಾಗಿ ಹನುಮಾನ್ ಚಾಲೀಸಾ ಪಠಣ ಮಾಡಿದ್ದಾರೆ. ಕುರಿಗಳನ್ನು ಸೊಸೈಟಿಯ ಆವರಣದಿಂದ ಹೊರಗೆ ತೆಗೆದುಕೊಂಡು ಹೋಗುವಂತೆ ಆಗ್ರಹಿಸಿದ್ದಾರೆ. ಇದರಿಂದ ಮುಸ್ಲಿಂ ಕುಟುಂಬ ಮತ್ತು ಹಿಂದು ಸಮುದಾಯದವರ ಮಧ್ಯೆ ಜಗಳಕ್ಕೆ ಕಾರಣವಾಯಿತು.
ಜೂ.29ರಂದು ಬಕ್ರೀದ್ ಹಬ್ಬವಿದೆ. ಹೀಗಾಗಿ ಆ ಹೌಸಿಂಗ್ ಸೊಸೈಟಿಯ ನಿವಾಸಿ ಮೊಹ್ಸೀನ್ ಶೇಖ್ ಎಂಬಾತ ಎರಡು ಕುರಿಗಳನ್ನು ಬಲಿಕೊಡಲು ಮನೆಗೆ ತಂದಿದ್ದ. ಆತ ಸೊಸೈಟಿಯ ಗೇಟ್ ದಾಟುತ್ತಿದ್ದಂತೆ, ಅದೇ ಸೊಸೈಟಿಯಲ್ಲಿ ವಾಸವಾಗಿರುವ ಎಲ್ಲ ಹಿಂದು ಸಮಾಜದವರು ಸೇರಿ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವ ಕಾರಣಕ್ಕೂ ಕುರಿಯನ್ನು ನೀವಿಲ್ಲಿ ಬಲಿಕೊಡುವ ಹಾಗಿಲ್ಲ ಎನ್ನುತ್ತ, ಹಿಂದೂ ಧಾರ್ಮಿಕ ಘೋಷಣೆಗಳನ್ನು ಕೂಗಿದ್ದಾರೆ. ಇವರ ವಿರೋಧಕ್ಕೆ ಮಣಿದ ಮೊಹ್ಸೀನ್ ಶೇಖ್, ಕುರಿಯನ್ನು ಅಲ್ಲಿಂದ ಹೊರಗೆ ತೆಗೆದುಕೊಂಡು ಹೋಗಿದ್ದಾನೆ. ಇವರ ವಾಗ್ವಾದ ಮಿತಿಮೀರಿದ್ದರಿಂದ ಅಲ್ಲಿಗೆ ಮೀರಾ ರೋಡ್ನ ಪೊಲೀಸ್ ಕೂಡ ಆಗಮಿಸಿದ್ದರು.
ಇದನ್ನೂ ಓದಿ: Eid al Adha: ಬಕ್ರೀದ್ ದಿನ ಮಂಗಳೂರಲ್ಲಿ ಗೋವುಗಳ ಮಾರಣಹೋಮ ಆತಂಕ; ಜಿಲ್ಲಾಡಳಿತಕ್ಕೆ ಬಜರಂಗದಳ ಮೊರೆ
ಪೊಲೀಸರ ಎದುರು ಹೇಳಿಕೆ ನೀಡಿ, ಬೇಸರ ವ್ಯಕ್ತಪಡಿಸಿದ ಮೊಹ್ಸೀನ್ ಶೇಖ್, ‘ಈ ಹೌಸಿಂಗ್ ಸೊಸೈಟಿಯಲ್ಲಿ ಸುಮಾರು 200-250 ಮುಸ್ಲಿಂ ಕುಟುಂಬಗಳು ಇವೆ. ನಾನು ಪ್ರತಿವರ್ಷ ಬಕ್ರೀದ್ ವೇಳೆ ಕುರಿಗಳನ್ನು ತಂದು ಇದೇ ಸೊಸೈಟಿ ಆವರಣದಲ್ಲಿ ಕಟ್ಟುತ್ತಿದ್ದೆ. ಆದರೆ ಈ ಬಾರಿ ಹೌಸಿಂಗ್ ಸೊಸೈಟಿ ಆವರಣದಲ್ಲಿ ಕುರಿಗಳನ್ನು ಬಿಡಲು ಅವಕಾಶ ಕೊಡಲಿಲ್ಲ. ಹೀಗಾಗಿ ಮನೆಯೊಳಗೆ ತರಲು ಯತ್ನಿಸಿದೆ. ಆದರೆ ಅದಕ್ಕೂ ಅವಕಾಶ ಕೊಡಲಿಲ್ಲ. ನಾನು ಸೊಸೈಟಿ ಆವರಣದಲ್ಲಿ ಕುರಿಗಳನ್ನು ಕಟ್ಟಿರುತ್ತಿದ್ದೆ ಅಷ್ಟೇ. ಆದರೆ ಯಾವತ್ತೂ ಅಲ್ಲಿ ಬಲಿಕೊಡಲಿಲ್ಲ. ಈ ಸಲ ಯಾಕೆ ವಿರೋಧ ವ್ಯಕ್ತವಾಗುತ್ತಿದೆ ಗೊತ್ತಿಲ್ಲ’ ಎಂದಿದ್ದಾರೆ. ಆದರೆ ಹಿಂದು ಸಮುದಾಯದವರು ತಮ್ಮ ಪಟ್ಟು ಬದಲಿಸಿಲಿಲ್ಲ. ಪೊಲೀಸರು, ಇವರ ಜಗಳವನ್ನು ಪರಿಹರಿಸಿ, ಸೊಸೈಟಿ ಆವರಣದಲ್ಲಿ ಏನಾದರೂ ಕುರಿ ಕಡಿದರೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಹೋಗಿದ್ದಾರೆ.