Site icon Vistara News

ಶಿವಸೇನೆಯ ಚಿಹ್ನೆ ಮೇಲೆ ಏಕನಾಥ್‌ ಕಣ್ಣು, ಬಿಲ್ಲು ಬಾಣಾನೂ ಕಳೆದುಕೊಳ್ತಾರಾ ಠಾಕ್ರೆ?

ಮುಂಬಯಿ: ೪೦ಕ್ಕೂ ಅಧಿಕ ಶಿವಸೇನೆ ಶಾಸಕರನ್ನು ತನ್ನ ತೆಕ್ಕೆಯೊಳಗೆ ಇಟ್ಟುಕೊಂಡಿರುವ ಬಂಡಾಯ ನಾಯಕ ಏಕನಾಥ್ ಶಿಂಧೆ ಇದೀಗ ಪಕ್ಷದ ಅಧಿಕೃತ ಚಿಹ್ನೆಯನ್ನು ತಮ್ಮ ಗುಂಪಿಗೇ ನೀಡಬೇಕು ಎಂದು ಹಕ್ಕು ಮಂಡಿಸಲು ಮುಂದಾಗಿದ್ದಾರೆ. ಶಿವಸೇನೆಯ ೫೬ ಶಾಸಕರ ಪೈಕಿ ಮೂರನೇ ಎರಡರಷ್ಟು ಮಂದಿ ತಮ್ಮ ಜತೆಗಿದ್ದಾರೆ ಎಂಬ ಮಾಹಿತಿಯನ್ನು ರಾಜ್ಯಪಾಲರು, ಡೆಪ್ಯುಟಿ ಸ್ಪೀಕರ್‌ ಅವರಿಗೆ ರವಾನಿಸಿರುವ ಏಕನಾಥ್‌ ಶಿಂಧೆ‌ ಮುಂದಿನ ಹೆಜ್ಜೆಯಾಗಿ ಚಿಹ್ನೆಯನ್ನು ಸೆಳೆದುಕೊಳ್ಳಲು ಬಯಸಿದಂತಿದೆ. ಈ ಬೆಳವಣಿಗೆಯಿಂದಾಗಿ, ಬಂಡಾಯದ ಹೊಡೆತಕ್ಕೆ ಬಹುತೇಕ ನಿಶ್ಯಸ್ತ್ರರಾಗಿರುವ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಕೊನೆಯದಾಗಿ ಉಳಿಸಿಕೊಂಡಿರುವ ಬಿಲ್ಲು-ಬಾಣವನ್ನೂ ಕಳೆದುಕೊಳ್ಳುತ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ.

ಸಿಎಂ ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನವನ್ನು ಬಿಡಲು ಸಿದ್ಧ ಎಂದು ಘೋಷಿಸಿದ್ದಲ್ಲದೆ ಅಧಿಕೃತ ನಿವಾಸವನ್ನು ತೆರವುಗೊಳಿಸಿ ಮಾತೋಶ್ರೀ ಬಂಗಲೆಗೆ ಮರಳಿದ್ದಾರೆ. ಈ ಭಾವನಾತ್ಮಕ ನಡೆಯ ಹೊರತಾಗಿಯೂ ಶಿಂಧೆ ತಮ್ಮ ಪಟ್ಟು ಸಡಿಲಿಸಿಲ್ಲ. ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜತೆಗಿನ ಅಸ್ವಾಭಾವಿಕ ಮೈತ್ರಿಯಿಂದ ಶಿವಸೇನೆ ಹೊರಗೆ ಬರಬೇಕು ಎಂದು ಅವರು ಸ್ಪಷ್ಟ ಶಬ್ದಗಳಲ್ಲಿ ಹೇಳಿದ್ದಾರೆ. ಆದರೆ, ಈ ಬೇಡಿಕೆಗೆ ಠಾಕ್ರೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಇದರ ನಡುವೆಯೇ ಏಕನಾಥ್‌ ಶಿಂಧೆ ಎತ್ತಿಕೊಂಡಿರುವ ಹೊಸ ಅಸ್ತ್ರವೇ ಶಿವಸೇನೆಯ ಚಿಹ್ನೆ. ತಮ್ಮ ಗುಂಪಿನಲ್ಲಿ ೪೧ ಮಂದಿ ಶಾಸಕರಿದ್ದು, ಹಾಗಾಗಿ ಚಿಹ್ನೆ ತಮಗೆ ಸೇರಿದ್ದು ಎನ್ನುವ ವಾದವನ್ನು ಏಕನಾಥ್‌ ಶಿಂಧೆ ಮುಂದಿಟ್ಟಿದ್ದಾರೆ. ಹಾಗಿದ್ದರೆ ಈ ಚಿಹ್ನೆ ಏಕನಾಥ್‌ ಶಿಂಧೆ ಅವರಿಗೆ ಸಿಕ್ಕಿಬಿಡುತ್ತದಾ?

ರಾಜಕೀಯ ಬಂಡಾಯಗಳು ನಡೆದಾಗ ಪ್ರತಿ ಬಾರಿಯೂ ಚಿಹ್ನೆ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಆಗ ಚುನಾವಣಾ ಆಯೋಗ ಹೇಗೆ ನಡೆದುಕೊಳ್ಳುತ್ತದೆ ಎನ್ನುವುದು ತುಂಬ ಕುತೂಹಲಕಾರಿ. ಅಚ್ಚರಿ ಎಂದರೆ ಅದು ಪ್ರತಿ ಬಾರಿಯೂ ಒಂದೇ ರೀತಿ ನಡೆದುಕೊಳ್ಳುವುದಿಲ್ಲ. ಪ್ರತಿಯೊಂದು ಪ್ರಕರಣದಲ್ಲೂ ಅದರ ಬೇರೆ ಬೇರೆ ಆಯಾಮಗಳನ್ನು ನೋಡಿಕೊಂಡು ಪ್ರತಿಕ್ರಿಯಿಸುತ್ತದೆ. ಕೆಲವೊಮ್ಮೆ ಅಳೆದು ತೂಗಿ ಒಂದು ಗುಂಪಿಗೆ ನೀಡಿದರೆ, ಕೆಲವೊಮ್ಮೆ ಎರಡೂ ಗುಂಪಿಗೆ ನೀಡದೆ ತಟಸ್ಥಗೊಳಿಸಿದ್ದೂ ಇದೆ.

೧೯೬೮ರ ಕಾಯಿದೆ ಏನು ಹೇಳುತ್ತದೆ?
೧೯೬೮ರ ಚುನಾವಣಾ ಚಿಹ್ನೆಗಳು (ಮೀಸಲು ಮತ್ತು ಹಂಚಿಕೆ) ಆದೇಶವನ್ನು ಆಧರಿಸಿ ಚುನಾವಣಾ ಆಯೋಗವು ಪಕ್ಷಗಳಿಗೆ ಮಾನ್ಯತೆ ನೀಡುತ್ತದೆ ಮತ್ತು ಚಿಹ್ನೆಗಳನ್ನು ಹಂಚಿಕೆ ಮಾಡುತ್ತದೆ. ಒಂದು ಪಕ್ಷವು ನೋಂದಣಿಯಾಗಿದ್ದರೆ, ಮಾನ್ಯತೆ ಪಡೆದಿದ್ದರೆ ಆಯೋಗವು ಚಿಹ್ನೆಯನ್ನು ಯಾವುದೇ ಒಂದು ಗುಂಪಿಗೆ ನೀಡಬಹುದು ಇಲ್ಲವೇ ಯಾರಿಗೂ ನೀಡದೆಯೂ ಇರಬಹುದು ಎಂದು ಆದೇಶದ ೧೫ನೇ ಪಾರಾದಲ್ಲಿ ಉಲ್ಲೇಖಿಸಲಾಗಿದೆ.
ಲಭ್ಯ ಇರುವ ಎಲ್ಲ ದಾಖಲೆಗಳು, ಮಾಹಿತಿಗಳು, ಪ್ರಕರಣದ ಸಾಂದರ್ಭಿಕತೆ, ಪಕ್ಷದ ಪ್ರತಿನಿಧಿಗಳ ವಿಚಾರಣೆಯ ಬಳಿಕ ಚುನಾವಣಾ ಆಯೋಗ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲ ಪಕ್ಷಗಳು ಬದ್ಧವಾಗಿರಬೇಕಾಗುತ್ತದೆ ಎಂದು ಅದರಲ್ಲಿ ತಿಳಿಸಲಾಗಿದೆ.

೧೯೬೮ರಲ್ಲಿ ಮೊದಲ ಪ್ರಕರಣ
ಪಕ್ಷದ ಚಿಹ್ನೆಗೆ ಸಂಬಂಧಿಸಿದ ಮೊದಲ ವಿವಾದ ಹುಟ್ಟಿಕೊಂಡಿದ್ದು ೧೯೬೮ರಲ್ಲಿ. ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ಹುಟ್ಟಿಕೊಂಡ ವಿವಾದ ಕಾಂಗ್ರೆಸ್‌ ಪಕ್ಷದಲ್ಲಿ ಒಡಕನ್ನ ಉಂಟು ಮಾಡಿದ ಸಮಯವದು. ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರಿಗೆ ಉಪರಾಷ್ಟ್ರಪತಿಗಳಾಗಿದ್ದ ವಿ.ವಿ. ಗಿರಿ ಅವರನ್ನೇ ರಾಷ್ಟ್ರಪತಿ ಮಾಡಬೇಕು ಎಂದಿತ್ತು. ಆದರೆ, ಅವರ ವಿರೋಧಿ ಬಣ ನೀಲಂ ಸಂಜೀವ ರೆಡ್ಡಿ ಅವರ ಪರವಾಗಿ ನಿಂತು ಅಂತಿಮವಾಗಿ ರೆಡ್ಡಿ ಅವರೇ ಅಭ್ಯರ್ಥಿಯಾದರು. ಆಗ ಇಂದಿರಾ ಗಾಂಧಿ ಅವರು ವಿ.ವಿ. ಗಿರಿ ಅವರನ್ನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರು. ಪಕ್ಷದ ಅಧ್ಯಕ್ಷರಾಗಿದ್ದ ಎಸ್‌. ನಿಜಲಿಂಗಪ್ಪ ಅವರು ನೀಡಿದ ವಿಪ್‌ನ್ನು ಉಲ್ಲಂಘಿಸಿದ ಕಾಂಗ್ರೆಸ್‌ ಸಂಸದರು ಮತ್ತು ಶಾಸಕರು ವಿ.ವಿ. ಗಿರಿ ಅವರಿಗೆ ಮತ ಹಾಕಿದರು.

ವಿ.ವಿ. ಗಿರಿ ಅವರು ಗೆಲ್ಲುತ್ತಿದ್ದಂತೆಯೇ ಇಂದಿರಾ ಗಾಂಧಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಯಿತು. ಆಗ ಪಕ್ಷವೇ ವಿಭಜನೆಯಾಗಿ ಇಂದಿರಾ ನೇತೃತ್ವದ ಪಕ್ಷ ಕಾಂಗ್ರೆಸ್‌ ಜೆ ಅಂತಲೂ ನಿಜಲಿಂಗಪ್ಪ ಅವರ ನೇತೃತ್ವದ ಗುಂಪು ಕಾಂಗ್ರೆಸ್‌ (ಒ) ಎಂತಲೂ ಗುರುತಿಸಿಕೊಂಡಿತು. ಆಗ ಪಕ್ಷದ ಚಿಹ್ನೆಗಾಗಿ ಜಗಳ ವಿವಾದ ಸೃಷ್ಟಿಯಾಗಿ ಮೂಲ ಚಿಹ್ನೆಯಾದ ಎತ್ತಿನ ಗಾಡಿಯನ್ನು ಕಾಂಗ್ರೆಸ್‌ ಒ-ಗೆ ನೀಡಲಾಯಿತು. ಇಂದಿರಾ ಪಕ್ಷಕ್ಕೆ ದನ ಮತ್ತು ಕರುವಿನ ಚಿಹ್ನೆ ಕೊಡಲಾಯಿತು.

ಹೇಗೆ ನಿರ್ಧಾರ ಮಾಡುತ್ತದೆ ಚುನಾವಣಾ ಆಯೋಗ?
ಇಂಥಹುದೊಂದು ವಿವಾದ ಎದುರಾದಾಗ ಚುನಾವಣಾ ಆಯೋಗ ಪ್ರಾಥಮಿಕವಾಗಿ ನೋಡುವುದು ಪಕ್ಷದ ಜನಪ್ರತಿನಿಧಿಗಳ ಬೆಂಬಲ ಯಾವ ಕಡೆಗಿದೆ? ಸಂಘಟನಾತ್ಮಕವಾಗಿ ಯಾವ ಗುಂಪು ಬಲಯುತವಾಗಿದೆ ಎನ್ನುವುದನ್ನು. ರಾಜಕೀಯ ಪಕ್ಷಗಳ ಒಳಗಿನ ಉನ್ನತ ಸಮಿತಿಗಳು ಮತ್ತು ನೀತಿ ನಿರ್ಧಾರಕ ಮಂಡಳಿಗಳಲ್ಲಿ ಎಷ್ಟು ಜನ ಯಾವ ಬಣವನ್ನು ಬೆಂಬಲಿಸುತ್ತಾರೆ? ಪದಾಧಿಕಾರಿಗಳು ಯಾವ ಬಣಕ್ಕೆ ಹೆಚ್ಚು ಹತ್ತಿರವಾಗಿದ್ದಾರೆ? ಅಂತಿಮವಾಗಿ ಸಂಸದರು ಮತ್ತು ಶಾಸಕರ ಗುಂಪಿನ ಲೆಕ್ಕಾಚಾರಗಳು ನಡೆಯುತ್ತವೆ.

ಇತ್ತೀಚಿನ ಪ್ರಕರಣಗಳಲ್ಲಿ ಚುನಾವಣಾ ಆಯೋಗ ಪ್ರಮುಖವಾಗಿ ಪಕ್ಷದ ಪದಾಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳ ಬಲಾಬಲವನ್ನು ಪರಿಗಣಿಸಿ ಚಿಹ್ನೆಯ ತೀರ್ಮಾನವನ್ನು ಮಾಡಿತ್ತು. ಒಂದು ವೇಳೆ ಪದಾಧಿಕಾರಿಗಳ ಬಲಾಬಲವನ್ನು ಲೆಕ್ಕ ಹಾಕಲು ಸಾಧ್ಯವಾಗದೆ ಹೋದರೆ ಕೇವಲ ಪಕ್ಷ ಸಂಸದರು ಮತ್ತು ಶಾಸಕರ ಬಲವನ್ನು ಲೆಕ್ಕ ಹಾಕಲಾಗುತ್ತದೆ.

೧೯೮೭ರಲ್ಲಿ ಎಂ.ಜಿ. ರಾಮಚಂದ್ರನ್‌ ಅವರ ನಿಧನ ಬೆನ್ನಿಗೇ ಎಐಎಡಿಎಂಕೆ ವಿಭಜನೆ ಆಯಿತು. ನಿಜವೆಂದರೆ ಆಗ ಪಕ್ಷದ ಬಹುತೇಕ ಎಲ್ಲ ಸಂಸದರು ಮತ್ತು ಸಂಸದರು ಜಾನಕಿ ರಾಮಚಂದ್ರನ್‌ ಅವರ ಬೆಂಬಲಕ್ಕೆ ನಿಂತಿದ್ದರು. ಆದರೆ, ಪಕ್ಷದ ಸಂಘಟನಾ ಮಟ್ಟದಲ್ಲಿ ಅತಿ ಹೆಚ್ಚು ಬೆಂಬಲ ಇದ್ದಿದ್ದು ಜಯಲಲಿತಾ ಅವರಿಗೆ. ಎರಡೂ ಬಣಗಳ ಜಗಳ ತಾರಕಕ್ಕೇರಿ ತಣ್ಣಗಾದ ಬಳಿಕವಷ್ಟೇ ನಿಜವಾದ ಪರಿಸ್ಥಿತಿ ಗೊತ್ತಾಯಿತು. ಅಂತಿಮವಾಗಿ ಎರಡೆಲೆ ಚಿಹ್ನೆ ಜಯಲಲಿತಾ ಪಾಲಾಯಿತು.

ಆಯೋಗದ ಮುಂದಿರುವ ಆಯ್ಕೆಗಳು
ಚುನಾವಣಾ ಆಯೋಗ ಎರಡು ಗುಂಪುಗಳ ಪೈಕಿ ಸಂಘಟನಾತ್ಮಕ ಮತ್ತು ಜನಪ್ರತಿನಿಧಿಗಳ ಬಲಾಬಲ ಆಧರಿಸಿ ಯಾರಿಗೆ ಹೆಚ್ಚು ಬೆಂಬಲ ಇದೆ ಎನ್ನುವುದನ್ನು ಬೇರೆ ಬೇರೆ ಮೂಲಗಳಿಂದ ಗಮನಿಸಿ ತೀರ್ಮಾನ ತೆಗೆದುಕೊಳ್ಳಬಹುದು. ಇಂಥ ಸಂದರ್ಭದಲ್ಲಿ ಒಂದು ಪಕ್ಷಕ್ಕೆ ಚಿಹ್ನೆಯನ್ನು ಉಳಿಸಿಕೊಳ್ಳಲು ಅವಕಾಶ ಕೊಟ್ಟು ಇನ್ನೊಂದು ಬಣಕ್ಕೆ ಹೊಸ ರಾಜಕೀಯ ಪಕ್ಷವಾಗಿ ಮಾನ್ಯತೆ ನೀಡಿ ಹೊಸ ಚಿಹ್ನೆ ಹಂಚಿಕೆ ಮಾಡಬಹುದು.
ಒಂದು ವೇಳೆ ಯಾವ ಬಣಕ್ಕೆ ಹೆಚ್ಚಿನ ಬೆಂಬಲವಿದೆ ಎನ್ನುವುದನ್ನು ನಿರ್ಧರಿಸಲು ಸಾಧ್ಯವೇ ಆಗದ ಪಕ್ಷದಲ್ಲಿ ಅದು ಪಕ್ಷ ಚಿಹ್ನೆಯನ್ನೇ ತಟಸ್ಥಗೊಳಿಸಬಹುದು. ಎರಡೂ ಬಣಗಳಿಗೆ ಹೊಸ ಪಕ್ಷವಾಗಿ ನೋಂದಾಯಿಸಿ ಚಿಹ್ನೆ ಪಡೆಯಿರಿ ಎಂದು ಹೇಳಬಹುದು.
ಒಂದೊಮ್ಮೆ ಚಿಹ್ನೆ ಯಾರಿಗೆ ಎಂದು ತೀರ್ಮಾನಿಸುವ ಪ್ರಕ್ರಿಯೆ ವಿಳಂಬವಾಗುತ್ತಿದ್ದರೆ, ಅದೇ ಹೊತ್ತಿಗೆ ಚುನಾವಣೆ ನಡೆಯುವ ಸಂಭವವಿದ್ದರೆ ಹಾಲಿ ಚಿಹ್ನೆಯನ್ನು ಸ್ಥಗಿತಗೊಳಿಸಿ, ಎರಡೂ ಬಣಗಳಿಗೆ ತಾತ್ಕಾಲಿಕವಾಗಿ ಹೊಸ ಚಿಹ್ನೆಯನ್ನು ನೀಡಬಹುದು.
ಒಂದೊಮ್ಮೆ ಕಾಲಾಂತರದಲ್ಲಿ ಎರಡು ಬಣಗಳು ತಾವು ಜಗಳ ಮರೆತು ಒಂದಾಗುತ್ತೇವೆ ಎಂಬ ತೀರ್ಮಾನಕ್ಕೆ ಬಂದರೆ ಅದನ್ನು ಫ್ರೀಜ್‌ ಮಾಡಲಾದ ಚಿಹ್ನೆಯನ್ನು ಮರಳಿ ನೀಡುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ.

ಚಿಹ್ನೆಗೆ ಸಂಬಂಧಿಸಿದ ಇತ್ತೀಚಿನ ವಿವಾದಗಳು
ಲೋಕಜನಶಕ್ತಿ ಪಾರ್ಟಿ: ೨೦೨೧ರ ಅಕ್ಟೋಬರ್‌ನಲ್ಲಿ ಚುನಾವಣಾ ಆಯೋಗ ಚಿರಾಗ್‌ ಪಾಸ್ವಾನ್‌ ಮತ್ತ ಪಶುಪತಿ ಕುಮಾರ್‌ ಪರಸ್‌ ನಡುವೆ ಲೋಕಜನಶಕ್ತಿ ಪಾರ್ಟಿಯ ಚಿಹ್ನೆಗಾಗಿ ಹೋರಾಟ ನಡೆದಾಗ ಎರಡೂ ಬಣಗಳು ʻಬಂಗಲೆʼ ಚಿಹ್ನೆಯನ್ನು ಬಳಸುವಂತಿಲ್ಲ ಎಂದು ನಿರ್ಬಂಧ ವಿಧಿಸಿತು. ಅದೇ ಹೊತ್ತಿಗೆ ಅಕ್ಟೋಬರ್‌ ೩೦ರಂದು ಕುಶಾಲೇಶ್ವರ ಆಸ್ಥಾನ್‌ ಮತ್ತು ತಾರಾಪುರ್‌ ಅಸೆಂಬ್ಲಿ ಕ್ಷೇತ್ರಗಳ ಚುನಾವಣೆ ಎದುರಾಯಿತು. ಅಗ ಚುನಾವಣಾ ಆಯೋಗವು ಚಿರಾಗ್‌ ಪಾಸ್ವಾನ್‌ ಅವರ ಗುಂಪಿಗೆ ರಾಷ್ಟ್ರೀಯ ಜನಶಕ್ತಿ ಪಾರ್ಟಿ (ರಾಂ ವಿಲಾಸ್‌) ಎಂಬ ಹೆಸರು ಕೊಟ್ಟು ಹೆಲಿಕಾಪ್ಟರ್‌ ಚಿಹ್ನೆ ನೀಡಿದರು. ಪರಸ್‌ ಗುಂಪಿಗೆ ರಾಷ್ಟ್ರೀಯ ಲೋಕಜನಶಕ್ತಿ ಪಾರ್ಟಿ ಎಂದು ಹೆಸರು ನೀಡಿ ಹೊಲಿಗೆ ಯಂತ್ರ ಚಿಹ್ನೆಯಾಗಿ ನೀಡಲಾಗಿತ್ತು.

ಇದನ್ನೂ ಓದಿ| Maharashtra politics: ಏಕನಾಥ್ ಶಿಂಧೆ ಟೀಮಲ್ಲಿ 37+ ಶಾಸಕರು, ಏನಿದು 37ರ ಮಹಿಮೆ?

Exit mobile version