Site icon Vistara News

ಬೋಟ್‌ ದುರಂತದಲ್ಲಿ ಮೃತಪಟ್ಟ ತನ್ನಿಬ್ಬರು ಮಕ್ಕಳನ್ನು ನೆನೆದು ವಿಧಾನಸಭೆಯಲ್ಲಿ ಕಣ್ಣೀರಿಟ್ಟ ಸಿಎಂ ಶಿಂಧೆ

Eknath Shinde breaks down

ಮುಂಬೈ: ಏಕನಾಥ ಶಿಂಧೆ ಇಂದು ಅತ್ಯಂತ ಸುಲಭವಾಗಿ ಬಹುಮತ ಸಾಬೀತು ಪಡಿಸಿದ್ದಾರೆ. ಅಲ್ಲಿಗೆ ಅವರ ಸರ್ಕಾರವೀಗ ಅಧಿಕೃತವಾದಂತಾಯ್ತು. ಶಿಂಧೆ ಮುಖ್ಯಮಂತ್ರಿಯಾಗಿ ಇಂದು ವಿಧಾನಸಭೆಯಲ್ಲಿ ಮೊದಲ ಭಾಷಣ ಮಾಡಿದರು. ಹೀಗೆ ಮಾತನಾಡುವಾಗ ಅವರ ಕುಟುಂಬದ ಬಗ್ಗೆ ಪ್ರಸ್ತಾಪ ಮಾಡಿ ಅಕ್ಷರಶಃ ಅತ್ತುಬಿಟ್ಟರು. 2000ನೇ ಇಸ್ವಿಯಲ್ಲಿ ಮೃತಪಟ್ಟ ತಮ್ಮ ಇಬ್ಬರು ಮಕ್ಕಳನ್ನು ನೆನಪಿಸಿಕೊಂಡು ಕಣ್ಣಲ್ಲಿ ನೀರು ಹಾಕಿದರು(Eknath Shinde breaks down). ಈ ವೇಳೆ ಗದ್ಗದಿತರಾಗಿ ಮಾತನಾಡಲು ತಡವರಿಸಿದರು.

ʼಶಿವಸೇನೆಯಿಂದ ಬಂಡಾಯ ಎದ್ದು ಮಹಾರಾಷ್ಟ್ರ ಬಿಟ್ಟು ಹೊರಹೋದಾಗ, ಇತ್ತ ನನ್ನ ಕುಟುಂಬಕ್ಕೆ ಬೆದರಿಕೆಯಿತ್ತು. ಯಾವ ಕ್ಷಣದಲ್ಲಿ ಬೇಕಾದರೂ ನನ್ನ ಮನೆಯೂ ಧ್ವಂಸ ಆಗಬಹುದಿತ್ತು. ಕುಟುಂಬದ ವಿಚಾರಕ್ಕೆ ಬಂದರೆ ನಾನೀಗಲೇ ದೊಡ್ಡ ನೋವು ತಿಂದಿದ್ದೇನೆ, ಅದಿನ್ನೂ ನನ್ನ ಮನಸಲ್ಲಿ ಕಹಿನೆನಪಾಗಿಯೇ ಉಳಿದುಕೊಂಡಿದೆʼ ಎಂದು ಹೇಳಿದ ಏಕನಾಥ ಶಿಂಧೆ, ʼ2000ನೇ ಇಸ್ವಿಯಲ್ಲಿ ನಡೆದ ಬೋಟ್‌ ಅಪಘಾತವೊಂದು ನನ್ನಿಬ್ಬರು ಮಕ್ಕಳನ್ನು ಬಲಿಪಡೆಯಿತು. ಆಗ ನಾನು ಥಾಣೆಯಲ್ಲಿ ಶಿವಸೇನೆ ಕಾರ್ಪೋರೇಟರ್‌ ಆಗಿದ್ದೆ. 11 ವರ್ಷದ ಮಗ, 7ವರ್ಷದ ಮಗಳು ನನ್ನ ಕಣ್ಣೆದುರಲ್ಲೇ ನೀರಿನಲ್ಲಿ ಮುಳುಗಿ ಮೃತಪಟ್ಟರು. ಆಗ ನನ್ನಿಡೀ ಕುಟುಂಬ ಶೋಕದಲ್ಲಿ ಮುಳುಗಿತು. ನಮ್ಮ ಪಾಲಿಗೆ ಸುಧಾರಿಸಿಕೊಳ್ಳಲು ಆಗದ ಆಘಾತ ಅದು. ಇನ್ನು ನಾನು ಯಾಕೆ ಬದುಕಬೇಕು? ಯಾರಿಗಾಗಿ ಬದುಕಬೇಕು ಎಂಬ ಹತಾಶೆ ನನ್ನನ್ನು ತೀವ್ರವಾಗಿ ಕಾಡಿತ್ತು. ಆ ಸಮಯದಲ್ಲಿ ನನ್ನನ್ನು ಸಂತೈಸಿ-ಸಮಾಧಾನ ಮಾಡಿದ್ದು, ಆನಂದ್‌ ದಿಘೆ (ಶಿವಸೇನೆಯ ಹಿರಿಯ ನಾಯಕ, ಬಾಳಾಸಾಹೇಬ್‌ ಠಾಕ್ರೆ ಆಪ್ತ ಮತ್ತು ಶಿವಸೇನೆಯ ಯುವ ರಾಜಕಾರಣಿಗಳ ಪಾಲಿಗೆ ಮೆಂಟರ್‌). ದಿಘೆಯವರು ನನ್ನ ಜತೆ ನಿಂತರು. ನಿನ್ನ ಅಗತ್ಯತೆ ನಿನ್ನ ಕುಟುಂಬಕ್ಕೆ ಎಷ್ಟಿದೆಯೋ, ಅಷ್ಟೇ ಈ ಸಮಾಜಕ್ಕೂ ಇದೆ ಎಂದು ಹೇಳಿದರು. ನನ್ನಲ್ಲಿ ಆತ್ಮವಿಶ್ವಾಸ ಹುಟ್ಟಿಸಿದರು. ಅವರಿಂದಾಗಿಯೇ ನಾನು ಇಷ್ಟು ದೃಢವಾಗಿ ಬೆಳೆದೆ. ಶಿವಸೇನೆಯ ಬಲಿಷ್ಠ ನಾಯಕ ಎನ್ನಿಸಿಕೊಂಡೆʼ ಎಂದು ಹಳೇ ನೆನಪು ಹಂಚಿಕೊಂಡು ಕಣ್ಣೀರು ಹಾಕಿದರು.

ʼನಾನು ಬಂಡಾಯವೆದ್ದಾಗ ನನ್ನ ಕುಟುಂಬಕ್ಕೆ ಬೆದರಿಕೆಯಿತ್ತು. ಆಗಲೂ ನನಗೆ ನೋವಾಗಿತ್ತು. ನನಗೆ ಅಪ್ಪ ಇದ್ದಾರೆ. ಅಮ್ಮ ಇಲ್ಲ. ಚಿಕ್ಕಂದಿನಿಂದಲೂ ನನ್ನ ಅಪ್ಪ-ಅಮ್ಮನೊಟ್ಟಿಗೆ ತುಂಬ ಸಮಯ ಕಳೆಯಲು ಆಗಲಿಲ್ಲ. ಬೆಳಗ್ಗೆ ನಾನು ಏಳುವಷ್ಟರಲ್ಲಿ ಅವರಿಬ್ಬರೂ ಕೆಲಸಕ್ಕೆ ಹೋಗಿರುತ್ತಿದ್ದರು. ರಾತ್ರಿ ನಾನು ವಾಪಸ್‌ ಮನೆಗೆ ಹೋಗುವಷ್ಟರಲ್ಲಿ ಅವರು ಮಲಗಿರುತ್ತಿದ್ದರು. ನನ್ನ ಪತ್ನಿ-ಮಕ್ಕಳೊಟ್ಟಿಗೂ ಸಾಕಷ್ಟು ಸಮಯ ಕಳೆಯಲು ಆಗಲಿಲ್ಲʼ ಎಂದು ತಮ್ಮ ನೋವನ್ನೆಲ್ಲ ಹೊರಹಾಕಿದರು. ಇಷ್ಟು ದಿನ ಬಂಡಾಯವೆದ್ದು ಹಠಮಾರಿಯಂತೆ ಕಂಡಿದ್ದ ಏಕನಾಥ ಶಿಂಧೆ ಇಂದು ವಿಧಾನಸಭೆಯಲ್ಲಿ ಮಾತನಾಡುವಾಗ ತುಂಬ ಮೃದು ಸ್ವಭಾವದ ವ್ಯಕ್ತಿಯಂತೆ ಕಂಡರು.

ಇದನ್ನೂ ಓದಿ: Maha politics: ಶಿವಸೇನೆ ಶಾಸಕಾಂಗ ಪಕ್ಷ ನಾಯಕರಾಗಿ ಶಿಂಧೆ, ಈಗ ಉದ್ಧವ್‌ ಟೀಮ್‌ಗೆ ಅನರ್ಹತೆ ಭೀತಿ!

ಶಿಂಧೆ ಮಕ್ಕಳ ದಾರುಣ ಸಾವು
ಏಕನಾಥ ಶಿಂಧೆಗೆ ಈಗಿರುವ ಮಗ ಶ್ರೀಕಾಂತ್‌ ಹೊರತು ಪಡಿಸಿ ಇನ್ನಿಬ್ಬರು ಮಕ್ಕಳಿದ್ದರು. ಅದರಲ್ಲೊಬ್ಬ ಪುತ್ರ, ಇನ್ನೊಬ್ಬಳು ಪುತ್ರಿ. ಇವರಿಬ್ಬರೂ ಚಿಕ್ಕವರಿದ್ದಾಗ, ಮಹಾರಾಷ್ಟ್ರದಲ್ಲಿರುವ ತಮ್ಮ ಹಳ್ಳಿಗೆ ಹೋಗಿದ್ದಾಗ ಸಮೀಪದ ಸರೋವರವೊಂದಕ್ಕೆ ಬೋಟಿಂಗ್‌ಗೆ ಹೋಗಿದ್ದರು. ಮಕ್ಕಳಾಗಿದ್ದರಿಂದ ಆಟದ ಹುಚ್ಚು ಸಹಜವಾಗಿಯೇ ಇತ್ತು. ಆದರೆ ದುರಂತವೆಂದರೆ ಆ ಬೋಟ್‌ ಸರೋವರದಲ್ಲಿ ಮುಳುಗಿ ಹೋಗಿತ್ತು. ಶಿಂಧೆಯ ಇಬ್ಬರೂ ಮಕ್ಕಳೂ ಬಲಿಯಾಗಿದ್ದರು. ಈ ಸಮಯದಲ್ಲಿ ಕಾರ್ಪೋರೇಟರ್‌ ಆಗಿದ್ದ ಏಕನಾಥ ಶಿಂಧೆ ಮಕ್ಕಳನ್ನು ಕಳೆದುಕೊಂಡು ಖಿನ್ನತೆಗೆ ಜಾರಿ ತೆರೆಮರೆಗೆ ಸರಿದುಬಿಟ್ಟಿದ್ದರು. ಮತ್ತೆ ಅವರಿಗೆ ಹೆಗಲು ಕೊಟ್ಟವರು ಶಿವಸೇನೆ ನಾಯಕ ಆನಂದ್‌ ದಿಘೆ. ಎಷ್ಟೆಷ್ಟೋ ಸಮಾಧಾನದ ಮಾತುಗಳನ್ನಾಡಿ ಸಕ್ರಿಯ ರಾಜಕಾರಣಕ್ಕೆ ಇಳಿಸಿದರು. ನಂತರ 2004ರಲ್ಲಿ ಶಿಂಧೆ ಮೊದಲ ಬಾರಿಗೆ ಶಾಸಕನಾದರು.

ಇದನ್ನೂ ಓದಿ: ಸಿಎಂ ಏಕನಾಥ ಶಿಂಧೆಯನ್ನು ಶಿವಸೇನೆಯ ಎಲ್ಲ ಹುದ್ದೆಗಳಿಂದ ವಜಾಗೊಳಿಸಿದ ಉದ್ಧವ್‌ ಠಾಕ್ರೆ

Exit mobile version