Site icon Vistara News

ಮಹಾರಾಷ್ಟ್ರದಲ್ಲಿ ವಿವಾದ ಎಬ್ಬಿಸಿದ ಟಿಪ್ಪು; ಉದ್ಯಾನವನಕ್ಕೆ ಇಡಲಾಗಿದ್ದ ಶಾಹೀದ್​ ಟಿಪ್ಪು ಸುಲ್ತಾನ್ ಹೆಸರನ್ನು ತೆಗೆಸಿದ ಶಿಂಧೆ ಸರ್ಕಾರ

Eknath Shinde named new Shiv Sena chief

ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ ಹೆಸರಿನಲ್ಲಿ ಆಗಾಗ ಭುಗಿಲೇಳುವ ವಿವಾದ ಈಗ ಮಹಾರಾಷ್ಟ್ರಕ್ಕೂ ಕಾಲಿಟ್ಟಿದೆ. ಮಹಾರಾಷ್ಟ್ರದ ಶಿವಸೇನೆ ಏಕನಾಥ್​ ಶಿಂಧೆ- ಬಿಜೆಪಿ ದೇವೇಂದ್ರ ಫಡ್ನವೀಸ್​ ಸರ್ಕಾರ ಮುಂಬಯಿಯ ಮಲಾಡ್​ ಪ್ರದೇಶದಲ್ಲಿರುವ ಉದ್ಯಾನವನವೊಂದಕ್ಕೆ ಇಡಲಾಗಿದ್ದ ಟಿಪ್ಪು ಸುಲ್ತಾನ್​ ಹೆಸರನ್ನು ತೆಗೆದು ಹಾಕಿದೆ. ಈ ಹಿಂದೆ ಇದ್ದ ಎನ್​ಸಿಪಿ-ಕಾಂಗ್ರೆಸ್-ಶಿವಸೇನೆ ಮೈತ್ರಿ ಸರ್ಕಾರ ಆಡಳಿತದಲ್ಲಿದ್ದು, ಉದ್ಧವ್​ ಠಾಕ್ರೆ ಮುಖ್ಯಮಂತ್ರಿಯಾಗಿದ್ದಾಗ ಈ ಉದ್ಯಾನವನಕ್ಕೆ ‘ಟಿಪ್ಪು ಸುಲ್ತಾನ್​’ ಹೆಸರನ್ನು ಇಡಲಾಗಿತ್ತು. ಇದೀಗ ಟಿಪ್ಪು ಹೆಸರನ್ನು ತೆಗೆಯುತ್ತಿದ್ದಂತೆ, ಶಿವಸೇನೆಯ ಉದ್ಧವ್​ ಠಾಕ್ರೆ ಬಣ, ಕಾಂಗ್ರೆಸ್​ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

ಮಲಾಡ್​ನಲ್ಲಿರುವ ಉದ್ಯಾನವನಕ್ಕೆ ಟಿಪ್ಪು ಹೆಸರಿಟ್ಟು ಬರೆಯಲಾಗಿದ್ದ ಬೋರ್ಡ್​ಗಳನ್ನು ಕೂಡಲೇ ತೆರವುಗೊಳಿಸಲು ಆದೇಶಿಸಿರುವ ಮುಂಬಯಿ ಉಪನಗರ ಜಿಲ್ಲಾ ಉಸ್ತುವಾರಿ ಸಚಿವ ಮಂಗಲ್​ ಪ್ರಭಾತ್​ ಲೋಧಾ ಬಳಿಕ ಟ್ವೀಟ್ ಮಾಡಿ ‘ಉದ್ಯಾನವನಕ್ಕೆ ಟಿಪ್ಪು ಹೆಸರು ಇಟ್ಟಾಗಿನಿಂದಲೂ ಅನೇಕರು ವಿರೋಧ ಮಾಡುತ್ತಲೇ ಇದ್ದರು. ಸಕಲ್​ ಹಿಂದು ಸಮಾಜ ಸಂಘಟನೆಯವರು ಪ್ರತಿಭಟನೆಯನ್ನೂ ನಡೆಸುತ್ತಿದ್ದರು. ಹಾಗೇ, ಟಿಪ್ಪು ಹೆಸರನ್ನು ತೆಗೆಯುವಂತೆ ಮುಂಬಯಿ ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಶೆಟ್ಟಿಯವರೂ ಜಿಲ್ಲಾ ಯೋಜನೆ ಮತ್ತು ಅಭಿವೃದ್ಧಿ ಮಂಡಳಿ (ಡಿಪಿಡಿಸಿ) ಸಭೆಯಲ್ಲಿ ಆಗ್ರಹಿಸಿದ್ದರು. ಅಂತಿಮವಾಗಿ ಈಗ ಅದನ್ನು ತೆಗೆಯಲಾಗಿದೆ ಎಂದು ಹೇಳಿದ್ದಾರೆ.

18ನೇ ಶತಮಾನದ ರಾಜ ಟಿಪ್ಪು ಸುಲ್ತಾನ್​ ಈ ಆಧುನಿಕ ರಾಜಕಾರಣಿಗಳ ಪ್ರಮುಖ ವಿಷಯವಾಗಿದ್ದಾನೆ. ಬಿಜೆಪಿ ಸೇರಿ ಎನ್​ಡಿಎ ಒಕ್ಕೂಟದ ಪಕ್ಷಗಳು, ಹಿಂದುಪರ ಸಂಘಟನೆಗಳು ಟಿಪ್ಪುವನ್ನು ವಿರೋಧಿಸಿದರೆ, ಕೆಲವು ಪ್ರತಿಪಕ್ಷಗಳು, ಹಿಂದು ವಿರೋಧಿ ಸಂಘಟನೆಗಳೆಲ್ಲ ಟಿಪ್ಪುವನ್ನು ದೇವರಂತೆ ಪೂಜಿಸುತ್ತಾರೆ. ಆತ ಬ್ರಿಟಿಷರ ವಿರುದ್ಧ ಶೌರ್ಯದಿಂದ ಹೋರಾಡಿದ್ದ ಎಂಬುದನ್ನೇ ಸಾರುತ್ತಿವೆ. ಕರ್ನಾಟಕದಲ್ಲೂ ಈ ರಾಜ ಆಗಾಗ ಭಯಂಕರ ಸದ್ದು ಮಾಡುವುದು ಗೊತ್ತೇ ಇದೆ.

ಇದನ್ನೂ ಓದಿ: ಟಿಪ್ಪು ವಿವಾದ : ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿಯಲ್ಲಿ ಹಾಕಿದ್ದ ಟಿಪ್ಪು ಸುಲ್ತಾನ್ ಫೋಟೊ ತೆರವು

ಇನ್ನು ಮಹಾರಾಷ್ಟ್ರದಲ್ಲಿ ಎನ್​ಸಿಪಿ-ಶಿವಸೇನೆ-ಕಾಂಗ್ರೆಸ್ ಮೈತ್ರಿ ಸರ್ಕಾರವಿದ್ದಾಗ ಜವಳಿ ಸಚಿವನಾಗಿದ್ದ, ಮಲಾಡ್ ಪಶ್ಚಿಮ ಕ್ಷೇತ್ರ ಸಂಸದ ಅಸ್ಲಾಮ್ ಶೇಖ್​ ಅವರು 2022ರಲ್ಲಿ ಈ ಉದ್ಯಾನವನ್ನು ಮರು ಅಭಿವೃದ್ಧಿಗೊಳಿಸಿದ್ದರು. ಅಲ್ಲಿ ಕ್ರೀಡೆ, ವ್ಯಾಯಾಮದ ಉಪಕರಣಗಳನ್ನೆಲ್ಲ ಅಳವಡಿಸಿ ಜನರಿಗೆ ಅನುಕೂಲ ಮಾಡಿಕೊಟ್ಟು, ಬಳಿಕ ಶಾಹೀದ್​ ಟಿಪ್ಪು ಸುಲ್ತಾನ್​ ಆಟದಮೈದಾನ’ ಎಂದು ನಾಮಕರಣ ಮಾಡಿದ್ದರು. ಈಗಿರುವ ಸರ್ಕಾರ ಅದನ್ನು ತೆಗೆಯುತ್ತಿದ್ದಂತೆ ಪ್ರತಿಪಕ್ಷಗಳೆಲ್ಲ ತಿರುಗಿಬಿದ್ದಿವೆ. ಶಿಂಧೆ ಸರ್ಕಾರದ್ದು ಕ್ಷುಲ್ಲಕ ರಾಜಕಾರಣ. ಪರಿಹರಿಸಬೇಕಾದ ಸಮಸ್ಯೆಗಳನ್ನೆಲ್ಲ ಬಿಟ್ಟು ಇಂಥ ಹೆಸರು ಬದಲಾವಣೆ ರಾಜಕೀಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.

Exit mobile version