ನವದೆಹಲಿ: ಹಿಮಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯಗಳು ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿವೆ. ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12ರಂದು ಮತ್ತು ಗುಜರಾತ್ನಲ್ಲಿ ಡಿಸೆಂಬರ್ 1 ಮತ್ತು 5ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಎರಡೂ ರಾಜ್ಯಗಳ ಮತ ಎಣಿಕೆ ಡಿಸೆಂಬರ್ 8ರಂದು ನಡೆಯಲಿದೆ. ಈ ಮಧ್ಯೆ ಚುನಾವಣಾ ಆಯೋಗ ಒಂದು ಮಹತ್ವದ ಆದೇಶ ಹೊರಡಿಸಿದೆ. ಈ ಎರಡೂ ರಾಜ್ಯಗಳಲ್ಲಿ ಚುನಾವಣೋತ್ತರ ಸಮೀಕ್ಷೆಯನ್ನು ಡಿಸೆಂಬರ್ 5ರವರೆಗೆ ನಿಷೇಧಿಸಿದೆ.
ಗುರುವಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದರುವ ಚುನಾವಣಾ ಆಯೋಗ, ‘12/11/2022ರ ಬೆಳಗ್ಗೆ 8ಗಂಟೆಯಿಂದ 5/12/2022 ರ ಸಂಜೆ 5.30ರವರೆಗೆ ಹಿಮಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ಚುನಾವಣೋತ್ತರ ಸಮೀಕ್ಷೆ ನಡೆಸುವುದನ್ನು, ಯಾವುದೇ ರೀತಿಯ ಚುನಾವಣಾ ನಿರ್ಗಮನ ಸಮೀಕ್ಷೆ ವರದಿಗಳನ್ನು ಪ್ರಕಟಿಸುವುದನ್ನು ನಿಷೇಧಿಸಲಾಗಿದೆ’ ಎಂದು ಉಲ್ಲೇಖಿಸಿದೆ.
ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 12ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಗುಜರಾತ್ನಲ್ಲಿ ಒಟ್ಟು 182 ಕ್ಷೇತ್ರಗಳಿದ್ದು ಡಿಸೆಂಬರ್ 1ರಂದು 89 ಮತ್ತು ಡಿಸೆಂಬರ್ 5ರಂದು 93 ಕ್ಷೇತ್ರಗಳಲ್ಲಿ ಮತದಾನ ನಡೆಯುವುದು. ಈ ಎರಡೂ ರಾಜ್ಯಗಳ ಚುನಾವಣಾ ಮತ ಎಣಿಕೆ ಡಿ.8ರಂದು ನಡೆಯಲಿದೆ. ಸಾಮಾನ್ಯವಾಗಿ ಚುನಾವಣೆ ಮುಗಿಯುತ್ತಿದ್ದಂತೆ ವಿವಿಧ ಸಂಸ್ಥೆಗಳು, ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆ ನಡೆಸಿ, ಜನರ ಒಲವು ಯಾರ ಪರ ಇದೆ ಎಂದು ಹೇಳುತ್ತಾರೆ. ಟಿವಿ ಚಾನೆಲ್ಗಳು, ಪತ್ರಿಕೆಗಳು ಈ ಬಗ್ಗೆ ವರದಿ ಪ್ರಕಟಿಸುತ್ತವೆ. ಆದರೆ ಇದೀಗ ಚುನಾವಣಾ ಆಯೋಗದ ಆದೇಶದ ಅನ್ವಯ, ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12ರಂದೇ ಚುನಾವಣೆ ಮುಗಿದರೂ, ಡಿಸೆಂಬರ್ 5, ಅಂದರೆ ಗುಜರಾತ್ ಚುನಾವಣೆವರೆಗೂ ಚುನಾವಣೋತ್ತರ ಸಮೀಕ್ಷೆ ಮಾಡುವಂತಿಲ್ಲ,
ಇದನ್ನೂ ಓದಿ: Poster War | ಚುನಾವಣಾ ಪ್ರಚಾರ ಜೋರು, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್-ಬಿಜೆಪಿ ಪೋಸ್ಟರ್ ವಾರ್!