Site icon Vistara News

ಕಾನೂನು ಪಾಲಿಸಿ; 2100ಕ್ಕೂ ಹೆಚ್ಚು ಪಕ್ಷಗಳಿಗೆ ಎಚ್ಚರಿಕೆ ನೀಡಿದ ಚುನಾವಣಾ ಆಯೋಗ

Election Commission

ನವದೆಹಲಿ: ನೋಂದಾಯಿತವಾಗಿದ್ದರೂ ಮಾನ್ಯತೆ ಪಡೆಯದೆ ಇರುವ 2100ಕ್ಕೂ ಹೆಚ್ಚು ರಾಜಕೀಯ ಪಕ್ಷಗಳ ವಿರುದ್ಧ ಶ್ರೇಣೀಕೃತ ಕ್ರಮಕ್ಕೆ ಚುನಾವಣಾ ಆಯೋಗ (Election Commission) ಮುಂದಾಗಿದೆ. ಈ ಪಕ್ಷಗಳು ಪ್ರಜಾ ಪ್ರಾತಿನಿಧ್ಯ ಕಾಯ್ದೆ (RP Act)ಯಡಿ ಬರುವ ಶಾಸನಬದ್ಧ ಅವಶ್ಯಕ ನಿಯಮಗಳನ್ನು ಪಾಲನೆ ಮಾಡದೆ ಇರುವ ಕಾರಣಕ್ಕೆ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ನೋಂದಣಿ ಪಟ್ಟಿಯಲ್ಲಿರುವ ಸುಮಾರು 87 ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲೇ ಇಲ್ಲ ಎಂಬುದು ಬುಧವಾರ ನಡೆಸಿದ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಆ ಪಕ್ಷಗಳ ಹೆಸರನ್ನು ಡಿಲೀಟ್‌ ಮಾಡಲಾಗಿದೆ ಮತ್ತು ನಿರ್ದಿಷ್ಟ ಚುನಾವಣಾ ಚಿಹ್ನೆಯಡಿ ಪಕ್ಷಕ್ಕೆ ನೀಡಲಾಗುತ್ತಿದ್ದ ಅನುಕೂಲಗಳನ್ನು ನಿಲ್ಲಿಸಲಾಗುತ್ತದೆ ಎಂದೂ ಎಲೆಕ್ಷನ್‌ ಕಮಿಷನ್‌ ಮಾಹಿತಿ ನೀಡಿದೆ.

ಒಟ್ಟೂ 2796 ನೋಂದಾಯಿತ ಮಾನ್ಯತೆ ರಹಿತ ರಾಜಕೀಯ ಪಕ್ಷಗಳಲ್ಲಿ ಅನೇಕ ಪಕ್ಷಗಳು ಚುನಾವಣಾ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಹಾಗೇ, ಪ್ರಜಾ ಪ್ರತಿನಿಧಿ ಕಾಯ್ದೆಯ ನಿಯಮಗಳಿಗೆ ಬದ್ಧವಾಗಿಲ್ಲ. ಇವು ಕಾಯ್ದೆಯ ಶಾಸನಬದ್ಧ ನಿಯಮಗಳನ್ನು ಉಲ್ಲಂಘಿಸುವ ಜತೆ, ಚುನಾವಣಾ ಆಯೋಗದ ಪಾರದರ್ಶಕತೆಯ ಉದ್ದೇಶಗಳಿಗೆ ಹಿನ್ನಡೆಯನ್ನುಂಟುಮಾಡುತ್ತಿವೆ. ನ್ಯಾಯಯುತ, ಮುಕ್ತ, ಪಾರದರ್ಶಕವಾಗಿ ಚುನಾವಣೆ ನಡೆಸುವುದೇ ಆದ್ಯತೆಯಾಗಿದ್ದು, ಆ ದೃಷ್ಟಿಯಿಂದ ಒಂದಷ್ಟು ರಾಜಕೀಯ ಪಕ್ಷಗಳ ವಿರುದ್ಧ ಶ್ರೇಣೀಕೃತ ಕ್ರಮ ಕೈಗೊಳ್ಳುತ್ತೇವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್‌ ಕುಮಾರ್‌ ನೇಮಕ; ಮೇ 15ರಂದು ಅಧಿಕಾರ ಸ್ವೀಕಾರ

ನಾವು ಇದೀಗ ಪಟ್ಟಿ ಮಾಡಿರುವ ನೋಂದಾಯಿತ ಮಾನ್ಯತೆ ರಹಿತ ರಾಜಕೀಯ ಪಕ್ಷಗಳಲ್ಲಿ, ಮೂರು ಪಕ್ಷಗಳು ಹಣಕಾಸಿನ ವ್ಯವಹಾರದಲ್ಲಿ ಪಾಲ್ಗೊಂಡಿದ್ದು ಗೊತ್ತಾಗಿದೆ. ಅದಕ್ಕೆ ಸಂಬಂಧಪಟ್ಟ ಸೂಕ್ತ ದಾಖಲೆಗಳೂ ನಮಗೆ ಸಿಕ್ಕಿವೆ. 2056 ಪಕ್ಷಗಳು ಹಣಕಾಸು ವರ್ಷಕ್ಕೆ ಅಗತ್ಯವಿರುವ ವಾರ್ಷಿಕ ಲೆಕ್ಕಪರಿಶೋಧನಾ ಖಾತೆಗಳನ್ನು ಒದಗಿಸಲು ವಿಫಲವಾಗಿವೆ. ಹಾಗೇ, ನಮಗೆ ಕೊಡಲಾದ ಬ್ಯಾಂಕ್‌ ಅಕೌಂಟ್‌, ಪಾನ್‌, ಅಧಿಕೃತ ಸಹಿದಾರರ ವಿವರ, ಆಸ್ತಿ ಬಗ್ಗೆ ನೀಡಿದ ಹೇಳಿಕೆಗಳು, ಖರ್ಚುವೆಚ್ಚಗಳಲ್ಲಿ ತುಂಬ ವ್ಯತ್ಯಾಸ ಕಂಡುಬರುತ್ತಿದೆ ಎಂದೂ ಚುನಾವಣಾ ಆಯೋಗ ಹೇಳಿದೆ.

ಹಾಗಿದ್ದಾಗ್ಯೂ ನಾವು ಒಮ್ಮೆಲೇ ಈ ನೋಂದಾಯಿತ ಮಾನ್ಯತೆ ರಹಿತ ರಾಜಕೀಯ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಅಂಥ ಪಕ್ಷಗಳ ಹೆಸರಿನ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿಗಳು ವೆಬ್‌ಸೈಟ್‌ನಲ್ಲಿ ಹಾಕುತ್ತಾರೆ. ಉಲ್ಲೇಖಿತ ಪಕ್ಷಗಳು, 30 ದಿನಗಳ ಒಳಗೆ ಅಸ್ತಿತ್ವದಲ್ಲಿರುವ ಕಾನೂನುಗಳಿಗೆ ಒಳಪಡಬೇಕು ಮತ್ತು ನಿಯಂತ್ರಕ ಆಡಳಿತ ನಿಯಮಗಳನ್ನು ಅನುಸರಿಸಬೇಕು. ಇಲ್ಲದೆ ಹೋದರೆ ಅಂಥ ಪಕ್ಷಗಳಿಗೆ ಚುನಾವಣಾ ಚಿಹ್ನೆಯಡಿ ನೀಡಲಾಗುತ್ತಿರುವ ಪ್ರಯೋಜನಗಳನ್ನು ಕಡಿತಗೊಳಿಸಲಾಗುವುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ಹೆಲಿಕಾಪ್ಟರ್‌ನಲ್ಲಿ ಬಂದು ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ

Exit mobile version