ರಾಯ್ಪುರ: ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಮತ ಎಣಿಕೆಯಲ್ಲಿ (Chhattisgarh Election Results 2023) ಕಾಂಗ್ರೆಸ್ ಅನ್ನು ಹಿಂದಿಕ್ಕಿ ಬಿಜೆಪಿ ಮುನ್ನಡೆ ಸಾಧಿಸಿದೆ. ಬೆಳಗ್ಗಿನ ಟ್ರೆಂಡ್‌ಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲ ತೋರಿಸಿದ್ದವು. 10 ಗಂಟೆಯ ಹೊತ್ತಿಗೆ ಬಿಜೆಪಿ ಮೇಲುಗೈ ಸಾಧಿಸಿತು.
ಆರಂಭಿಕ ಟ್ರೆಂಡ್‌ಗಳು ಎಕ್ಸಿಟ್ ಪೋಲ್ ಭವಿಷ್ಯವಾಣಿಗಳಿಗೆ ಅನುಗುಣವಾಗಿದ್ದವು. ಆಡಳಿತಾರೂಢ ಪಕ್ಷ ತನ್ನ ಪ್ರತಿಸ್ಪರ್ಧಿ ಬಿಜೆಪಿಗಿಂತ ತುಸು ಮೇಲುಗೈ ಸಾಧಿಸಿತ್ತು. ನಂತರದ ಟ್ರೆಂಡ್‌ಗಳಲ್ಲಿ ಬಿಜೆಪಿ 49 ಹಾಗೂ ಕಾಂಗ್ರೆಸ್ 38 ಸ್ಥಾನಗಳಲ್ಲಿ ಮುನ್ನಡೆ ತೋರಿಸಿದವು. ಛತ್ತೀಸ್‌ಗಢ ಅಸೆಂಬ್ಲಿ 90 ಸ್ಥಾನಗಳನ್ನು ಹೊಂದಿದೆ. ಅಂಚೆ ಮತಪತ್ರಗಳು ಚಲಾವಣೆಯಾದ ಒಟ್ಟು ಮತಗಳಲ್ಲಿ ಅತ್ಯಂತ ಕಡಿಮೆ ಶೇಕಡಾವಾರು ಪ್ರಮಾಣವನ್ನು ಹೊಂದಿವೆ.
ನಾಲ್ಕು ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ಬಹುಮತದ ಗೆರೆ 46 ಸ್ಥಾನ ದಾಟುತ್ತದೆ ಎಂದು ನಿರೀಕ್ಷಿಸಿದ್ದವು. ಇನ್ನೆರಡು ಪೋಲ್‌ಗಳು 42-44 ಮತ್ತು ಉಳಿದ ಮೂರು 40ಕ್ಕಿಂತ ಹೆಚ್ಚು ಸ್ಥಾನ ನೀಡಿದ್ದವು. ಒಂಬತ್ತು ಎಕ್ಸಿಟ್ ಪೋಲ್‌ಗಳಲ್ಲಿ ಎರಡು ಮಾತ್ರ ಬಿಜೆಪಿಗೆ ರಾಜ್ಯವನ್ನು ಗೆಲ್ಲಲು ಅಗತ್ಯವಿರುವ 46+ ಸ್ಥಾನ ದೊರೆಯಲಿದೆ ಎಂದಿತ್ತು.
2013ರ ಜಿರಾಮ್ ಘಾಟಿ ಮಾವೋವಾದಿ ದಾಳಿಯ ನಂತರ ರಾಜ್ಯದಲ್ಲಿ ಪಕ್ಷವನ್ನು ಮರುನಿರ್ಮಾಣ ಮಾಡಿದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಟ್ರ್ಯಾಕ್ ರೆಕಾರ್ಡ್‌ನಲ್ಲಿ ಕಾಂಗ್ರೆಸ್ ಉನ್ನತ ಮಟ್ಟದ ನಾಯಕತ್ವವನ್ನು ಬಲಪಡಿಸಿಕೊಂಡಿದೆ. ನವೆಂಬರ್ 7 ಮತ್ತು 17ರಂದು ಇಲ್ಲಿ ಎರಡು ಹಂತಗಳಲ್ಲಿ ಚುನಾವಣೆಗಳು ನಡೆದವು. ಮತದಾನದ ಪ್ರಮಾಣ ಶೇಕಡಾ 76.31 ರಷ್ಟಿತ್ತು. ಇದು 2018ರ ಚುನಾವಣೆಯಲ್ಲಿ ದಾಖಲಾದ ಶೇಕಡಾ 76.88ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.