ನವ ದೆಹಲಿ: ರಾಜಸ್ಥಾನ ವಿಧಾನಸಭೆ ಚುನಾವಣೆ 2023ರಲ್ಲಿ ನಡೆಯಲಿದ್ದು, ಅದರಲ್ಲಿ ಕಾಂಗ್ರೆಸ್ನಿಂದ ಮುಖ್ಯಮಂತ್ರಿ ಹುದ್ದೆಗೆ ಮಹಿಳಾ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಆ ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಒಂದು ವಿಚಿತ್ರವಾದ ಪ್ರತಿಕ್ರಿಯೆ ನೀಡಿದ್ದಾರೆ.
‘ಮಹಿಳೆಯರು ಮುಖ್ಯಮಂತ್ರಿಯಾಗಲು ಖಂಡಿತ ಸಾಧ್ಯವಿದೆ. ನಾವು ಗೆಲ್ಲಬೇಕು ಎಂಬುದೇ ನಮ್ಮ ಮೊದಲ ಆದ್ಯತೆ ಮತ್ತು ಗುರಿ. ಚುನಾವಣೆಗಳು ಪಕ್ಷ, ಸಿದ್ಧಾಂತಗಳು, ಪ್ರಣಾಳಿಕೆಗಳು ಮತ್ತು ಪಕ್ಷಗಳ ಚಿಹ್ನೆಗಳ ನಡುವಿನ ಹೋರಾಟವಾಗುತ್ತೆಯೇ ಹೊರತು, ವ್ಯಕ್ತಿಗಳ ನಡುವೆ ನಡೆಯುವ ಸೌಂದರ್ಯ ಸ್ಪರ್ಧೆಯಲ್ಲ’ ಎಂದು ಹೇಳಿದರು. ಹಾಗೇ, ಈ ‘ಸೌಂದರ್ಯ ಸ್ಪರ್ಧೆ’ ಎಂಬ ಪದ ಬಳಕೆ ಮಾಡಿದ್ದಕ್ಕೆ ಯಾರೂ ತಪ್ಪು ಭಾವಿಸಬಾರದು ಎಂದೂ ಜೈರಾಮ್ ರಮೇಶ್ ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ‘ಕಾಂಗ್ರೆಸ್ ಶೇ.99ರಷ್ಟು ಸಂದರ್ಭದಲ್ಲಿ ಚುನಾವಣಾ ಪೂರ್ವ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡುವುದಿಲ್ಲ. ಇದುವರೆಗೆ ಎಲ್ಲೋ ಒಂದೆರಡು ಬಾರಿಯಷ್ಟೇ ನಾವು ಚುನಾವಣೆಗೂ ಮೊದಲೇ ಮುಖ್ಯಮಂತ್ರಿ ಹೆಸರು ಪ್ರಕಟಿಸಿದ್ದೆವು. ಚುನಾವಣೆ ನಂತರವೇ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಹೇಳಬೇಕು ಎಂಬುದು ನಮ್ಮ ನಿಲುವು. ಯಾಕೆಂದರೆ ನಾವು ಚುನಾವಣೆಗಳು ಎಂದರೆ ಪಕ್ಷಗಳ ನಡುವಿನ ಸ್ಪರ್ಧೆ ಎಂದು ಭಾವಿಸಿದ್ದೇವೆ’ ಎಂದು ತಿಳಿಸಿದರು.
ಭಾರತ್ ಜೋಡೋ ಯಾತ್ರೆ ಸಂಬಂಧಪಟ್ಟ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈರಾಮ್ ರಮೇಶ್ ‘ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲೆಟ್ ನಡುವೆ ಯಾವುದೇ ರಾಜಕೀಯ ಹೋರಾಟ, ಸಂಘರ್ಷಗಳೂ ಇಲ್ಲ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಷ್ಟೇ ಇವೆ’ ಎಂದರು. ಗೆಹ್ಲೋಟ್ ಮತ್ತು ಪೈಲೆಟ್ ಹೆಸರುಗಳನ್ನು ಉಲ್ಲೇಖಿಸದೆ, ‘ರಾಜಸ್ಥಾನದಲ್ಲಿ ಅವರಿಬ್ಬರೂ ನಮ್ಮ ಪಕ್ಷದ ಆಸ್ತಿಗಳು. ಒಬ್ಬರು ಹಿರಿಯರು, ಅನುಭವಿ. ಮತ್ತೊಬ್ಬರು ಉತ್ಸಾಹಿ, ಯುವನಾಯಕ, ಜನಪ್ರಿಯ ಮತ್ತು ಸಿಕ್ಕಾಪಟೆ ಎನರ್ಜಿಟಿಕ್. ಅವರಿಬ್ಬರೂ ಕಾಂಗ್ರೆಸ್ಗೆ ಅತ್ಯಗತ್ಯವಾಗಿ ಬೇಕು’ ಎಂದು ಹೇಳಿದರು.
ಇದನ್ನೂ ಓದಿ: Cong Prez Poll | ಯಾರ ಅಪ್ಪಣೆ ಯಾಕೆ?- ಶಶಿ ತರೂರ್ ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ ಜೈರಾಮ್ ರಮೇಶ್ ಟ್ವೀಟ್