ಜಮ್ಮು-ಕಾಶ್ಮೀರದ ಆವಂತಿಪೋರಾ ಏರಿಯಾದಲ್ಲಿ ಇಂದು ಮುಂಜಾನೆಯಿಂದ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್ಕೌಂಟರ್ ಪ್ರಾರಂಭವಾಗಿದ್ದು, ಒಬ್ಬ ಉಗ್ರನನ್ನು ಕೊಂದಿದ್ದಾಗಿ ಕಾಶ್ಮೀರ ವಲಯದ ಪೊಲೀಸರು ತಿಳಿಸಿದ್ದಾರೆ. ಆದರೆ ಆತನ ಮೃತದೇಹ ಇನ್ನೂ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಹಾಗೇ, ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ. ಟ್ವೀಟ್ ಮಾಡಿರುವ ಕಾಶ್ಮೀರ ವಲಯ ಪೊಲೀಸರು ‘ಪುಲ್ವಾಮಾ ಜಿಲ್ಲೆಯ ಆವಂತಿಪೋರಾದ ಪದಗಂಪೋರಾದಲ್ಲಿ ಎನ್ಕೌಂಟರ್ ಶುರುವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆಯಲ್ಲಿ ತೊಡಗಿವೆ’ ಎಂದು ಹೇಳಿದ್ದಾರೆ.
ಈಗೆರಡು ದಿನಗಳ ಹಿಂದೆ ಪುಲ್ವಾಮಾದಲ್ಲಿ 40 ವರ್ಷದ ಕಾಶ್ಮೀರಿ ಪಂಡಿತ ಸಂಜಯ್ ಶರ್ಮಾ ಎಂಬುವರನ್ನು ಉಗ್ರರು ಹತ್ಯೆ ಮಾಡಿದ್ದರು. ಎಟಿಎಂ ಗಾರ್ಡ್ ಆಗಿದ್ದ ಅವರು, ಸ್ಥಳೀಯ ಮಾರುಕಟ್ಟೆಗೆ ಹೋಗುತ್ತಿದ್ದಾಗ ಉಗ್ರರು ಗುಂಡು ಹಾರಿಸಿದ್ದರು. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಕಾಶ್ಮೀರಿ ಪಂಡಿತ ಸಮುದಾಯವನ್ನು ಟಾರ್ಗೆಟ್ ಮಾಡಿ ಉಗ್ರರು ದಾಳಿ ನಡೆಸುತ್ತಲೇ ಇದ್ದಾರೆ. ಅದರ ಬೆನ್ನಲ್ಲೇ ಪುಲ್ವಾಮಾದಲ್ಲಿ ಇಂದು ಮುಂಜಾನೆಯಿಂದಲೇ ಉಗ್ರರ ವಿರುದ್ಧ ಎನ್ಕೌಂಟರ್ ಶುರುಮಾಡಿದ್ದಾರೆ.