Site icon Vistara News

ದೆಹಲಿಯಲ್ಲಿ ನಸುಕಿನಲ್ಲೇ ಬುಲ್ಡೋಜರ್​ ಶಬ್ದ; ಆಂಜನೇಯನ ದೇವಸ್ಥಾನ, ದರ್ಗಾ ಸಂಪೂರ್ಣ ನಾಶ

demolition drive by JCB

ರಾಷ್ಟ್ರ ರಾಜಧಾನಿ ದೆಹಲಿಯ ಭಜನ್​​ಪುರದಲ್ಲಿ ಇಂದು ಬೆಳ್ಳಂಬೆಳಗ್ಗೆ ಲೋಕೋಪಯೋಗಿ ಇಲಾಖೆ (PWD)ವತಿಯಿಂದ ಒತ್ತುವರಿ ತೆರವು ಕಾರ್ಯಾಚರಣೆ (Encroachment clearance)ನಡೆಸಲಾಯಿತು. ಭಾರಿ ಭದ್ರತೆಯಲ್ಲಿ ಈ ಒತ್ತುವರಿಗಳನ್ನು ತೆರವು ಮಾಡಲಾಯಿತು. ಕಾರಣ ಇಂದು ಬೆಳಗ್ಗೆ ಜೆಸಿಬಿ ಧ್ವಂಸಗೊಳಿಸಿದ್ದು ಎರಡು ಧಾರ್ಮಿಕ ಪ್ರದೇಶಗಳನ್ನು. ಭಜನ್​ಪುರದಲ್ಲಿ ಕಾನೂನು ಬಾಹಿರವಾಗಿ ಕಟ್ಟಿಕೊಳ್ಳಲಾಗಿದ್ದ ಒಂದು ದೇವಸ್ಥಾನ ಮತ್ತು ಇನ್ನೊಂದು ದರ್ಗಾ (ಮಜರ್​)ವನ್ನು ಪೊಲೀಸರು, ಸಿಆರ್​ಪಿಎಫ್​ ಯೋಧರ ಬಿಗಿ ಭದ್ರತೆಯಲ್ಲಿ ಕೆಡವಲಾಗಿದೆ. ಯಾವುದೇ ಗಲಾಟೆ-ಗಲಭೆ ಆಗದಂತೆ ಎಚ್ಚರವಹಿಸಲಾಗಿದೆ.

ದೆಹಲಿಯಾದ್ಯಂತ ಎಲ್ಲ ಕಡೆಗಳಲ್ಲಿ ಹೀಗೆ ಸರ್ಕಾರಿ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡು, ಅಕ್ರಮವಾಗಿ ಕಟ್ಟಲಾದ ಧಾರ್ಮಿಕ ಕಟ್ಟಡಗಳು, ಸಂಸ್ಥೆಗಳನ್ನು ತೆರವುಗೊಳಿಸಬೇಕು ಎಂದು ಅಲ್ಲಿನ ಪಿಡಬ್ಲ್ಯೂಡಿ ಇಲಾಖೆಗೆ ಲೆಫ್ಟಿನೆಂಟ್ ಗವರ್ನರ್​ ಸೂಚನೆ ನೀಡಿದ್ದಾರೆ. ಅದರ ಅನ್ವಯ ಕಾರ್ಯಾಚರಣೆಯೂ ಪ್ರಾರಂಭವಾಗಿದೆ. ಇಲಾಖಾ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ದೆಹಲಿಯಲ್ಲಿ ಕೆಲವು ರಸ್ತೆ ಅಗಲೀಕರಣ ಮಾಡಬೇಕಿರುವ ಹಿನ್ನೆಲೆಯಲ್ಲಿ ಇಂಥ ಒತ್ತುವರಿ ತೆರವುಗೊಳಿಸಲಾಗುತ್ತಿದೆ. ಇದೀಗ ಶಹರಾನ್​ಪುರ ಹೆದ್ದಾರಿ ಅಗಲೀಕರಣ ಸಲುವಾಗಿ ಆಂಜನೇಯನ ಗುಡಿ ಮತ್ತು ದರ್ಗಾವನ್ನು ಧ್ವಂಸಗೊಳಿಸಲಾಗಿದೆ. ಇಂದು ಮುಂಜಾನೆ 6ಗಂಟೆಯಿಂದ ಕಾರ್ಯಾಚರಣೆ ಶುರುವಾಗಿತ್ತು.

ಈ ಒತ್ತುವರಿ ತೆರವು ಕಾರ್ಯಾಚರಣೆ ಬಗ್ಗೆ ಮಾತನಾಡಿದ ಈಶಾನ್ಯ ದೆಹಲಿ ಡಿಸಿಪಿ ಜಾಯ್ ಎನ್ ಟಿರ್ಕಿ ‘ಭಜನ್​ಪುರ್​​ ಚೌಕ್​​ನಲ್ಲಿ ಶಾಂತಿಯುತವಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ದರ್ಗಾ ಮತ್ತು ದೇಗುಲಗಳನ್ನು ಕೆಡವುದಕ್ಕೂ ಪೂರ್ವ ಎರಡೂ ಧಾರ್ಮಿಕ ಸ್ಥಳಗಳ ಸಮಿತಿ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಲಾಗಿತ್ತು. ಇಂದು ಏನೂ ಸಮಸ್ಯೆಯಾಗದಂತೆ ಧಾರ್ಮಿಕ ಕಟ್ಟಡಗಳೆರಡನ್ನೂ ಕೆಡವಲಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ: Tumkur News: ಒತ್ತುವರಿ ತೆರವಿಗೆ ಆಕ್ಷೇಪಿಸಿದ್ದಕ್ಕೆ ಲಾಠಿ ಚಾರ್ಜ್ ಮಾಡಿದ ಅರಣ್ಯ ಸಿಬ್ಬಂದಿ; 4 ರೈತರಿಗೆ ಗಂಭೀರ ಗಾಯ

ಆದರೆ ಪಿಡಬ್ಲ್ಯೂಡಿ ಇಲಾಖೆಯ ಸಚಿವೆ, ಆಪ್​ ನಾಯಕಿ ಅತಿಶಿ ಅವರಿಗೇ ಇದು ಇಷ್ಟವಾಗಿಲ್ಲ. ಹೀಗೆ ದೇವಾಲಯ-ದರ್ಗಾಗಳನ್ನು ಕೆಡವಬೇಡಿ ಎಂದು ನಾನು ಲೆಫ್ಟಿನೆಂಟ್​ ಗವರ್ನರ್​ಗೆ ಈಗಾಗಲೇ ಪತ್ರ ಬರೆದಿದ್ದೆ. ಆದರೆ ಆ ಮಾತನ್ನು ಅವರು ಕಿವಿಮೇಲೆ ಹಾಕಿಕೊಳ್ಳುತ್ತಿಲ್ಲ. ಇಂದು ಮತ್ತೆ ಭಜನ್​ಪುರದಲ್ಲಿ ಒತ್ತುವರಿ ತೆರವು ಮಾಡಿದ್ದಾರೆ ಎಂದು ಅತಿಶಿ ಕಿಡಿಕಾರಿದ್ದಾರೆ. ದೆಹಲಿಯಲ್ಲಿ ಅಧಿಕಾರಿಗಳಿಗೆ ಸೂಚನೆ ಕೊಡುವ ಅಧಿಕಾರ ಅಲ್ಲಿನ ಲೆಫ್ಟಿನೆಂಟ್ ಗವರ್ನರ್​ಗೆ ಇದ್ದುದರಿಂದ ಈ ಗೊಂದಲ ಆಗುತ್ತಿದೆ.

Exit mobile version