ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದಿದ್ದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪಾದ ಸ್ಪರ್ಶಿಸಿ ನಮಿಸಲು ಪ್ರಯತ್ನಿಸಿದ್ದ ಅಲ್ಲಿನ ಸರ್ಕಾರಿ ಎಂಜಿನಿಯರ್ ಒಬ್ಬರನ್ನು ಅಮಾನತು ಮಾಡಲಾಗಿದೆ. ಸಾರ್ವಜನಿಕ ಆರೋಗ್ಯ ಎಂಜಿನಿಯರ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಿರಿಯ ಮಹಿಳಾ ಎಂಜಿನಿಯರ್ ಅಂಬಾ ಸಿಯೋಲ್ ಹೀಗೆ ಅಮಾನತುಗೊಂಡವರಾಗಿದ್ದಾರೆ.
ಜನವರಿ 4ರಂದು ರಾಜಸ್ಥಾನದ ರೊಹೆಟ್ನಲ್ಲಿ ಸ್ಕೌಟ್-ಗೈಡ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪಾಲ್ಗೊಂಡಿದ್ದರು. ಅದರಲ್ಲಿ ಅಂಬಾ ಅವರು ನೀರಿನ ವ್ಯವಸ್ಥೆ ಉಸ್ತುವಾರಿ ನೋಡಿಕೊಳ್ಳಲು ನಿಯೋಜಿತರಾಗಿದ್ದರು. ಆದರೆ ರಾಷ್ಟ್ರಪತಿಯವರನ್ನು ನೋಡುತ್ತಿದ್ದಂತೆಯೇ ಅಂಬಾ ಸಿಯೋಲ್ ಅವರ ಬಳಿ ಹೋಗಿ, ಪಾದ ಸ್ಪರ್ಶಿಸಿ ನಮಸ್ಕಾರ ಮಾಡಲು ಮುಂದಾಗಿದ್ದಾರೆ. ಬಳಿಕ ರಾಷ್ಟ್ರಪತಿಯವರ ಭದ್ರತಾ ಸಿಬ್ಬಂದಿಯಿಂದ ತಡೆಯಲ್ಪಟ್ಟಿದ್ದಾರೆ.
ಅಂಬಾ ಸಿಯೋಲ್ ಅವರು ರಾಷ್ಟ್ರಪತಿಯವರ ಭದ್ರತಾ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಗೃಹ ಇಲಾಖೆಯ ಸೂಚನೆ ಮೇರೆಗೆ ಆಕೆಯನ್ನು ಅಮಾನತುಗೊಳಿಸಲಾಗಿದೆ ಎಂದು ಸಾರ್ವಜನಿಕ ಆರೋಗ್ಯ ಇಂಜಿನಿಯರ್ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಭದ್ರತಾ ವೈಫಲ್ಯ ಆಗಿದ್ದಲ್ಲ, ರಾಹುಲ್ ಗಾಂಧಿಯೇ ನಿಯಮ ಉಲ್ಲಂಘಿಸಿದ್ದಾರೆ; ಪ್ರತಿಕ್ರಿಯಾ ಪತ್ರ ಬರೆದ ಸಿಆರ್ಪಿಎಫ್