Site icon Vistara News

Golden Temple: ಪಂಜಾಬ್​​ನ ಗೋಲ್ಡನ್​ ಟೆಂಪಲ್​​ ಸಮೀಪವೇ ಸ್ಫೋಟ; ಹಲವರಿಗೆ ಗಾಯ

Explosion near Golden Temple In Punjab

#image_title

ಪಂಜಾಬ್​​ನ ಅಮೃತ್​​ಸರ್​​ನಲ್ಲಿರುವ ಗೋಲ್ಡನ್​ ಟೆಂಪಲ್ (Golden Temple)​ ಸಮೀಪವೇ ಇರುವ ಹೆರಿಟೇಜ್​ ಸ್ಟ್ರೀಟ್​​ನಲ್ಲಿ ಶನಿವಾರ ರಾತ್ರಿ ಸ್ಫೋಟ (Blast At Golden Temple) ಉಂಟಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಸಾರಾಗಢಿ ನಿವಾಸದ ಪಾರ್ಕಿಂಗ್ ಪ್ರದೇಶದಲ್ಲಿ ಸ್ಫೋಟವಾಗಿದ್ದು, ಅಲ್ಲೇ ಇದ್ದ ರೆಸ್ಟೋರೆಂಟ್​ಗೆ ಕೂಡ ಹಾನಿಯಾಗಿದೆ ಎಂದು ವರದಿಯಾಗಿದೆ. ಪೊಲೀಸ್ ಸಿಬ್ಬಂದಿ ಕೂಡಲೇ ಅಲ್ಲಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಭಾನುವಾರ ಬೆಳಗ್ಗೆ ಟ್ವೀಟ್ ಮಾಡಿರುವ ಅಮೃತ್​ಸರ್​ ಪೊಲೀಸ್ ಆಯುಕ್ತರು ‘ಅಮೃತ್​ಸರ್​​ನ ಗೋಲ್ಡನ್​ ಟೆಂಪಲ್​ ಬಳಿ ಸ್ಫೋಟವುಂಟಾದ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಏನೂ ಅಪಾಯವಾಗಿಲ್ಲ. ಅಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಸುಳ್ಳು ಸುದ್ದಿಗಳು ಹರಡುತ್ತಿದ್ದು, ಅದನ್ನು ನಂಬುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.

ಪಾರ್ಕಿಂಗ್​ ಏರಿಯಾದಲ್ಲಿ ನಡೆದ ಸ್ಫೋಟಕ್ಕೆ ಕಾರಣವೇನು ಎಂಬುದು ಈಗಲೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಗ್ಯಾಸ್​ಪೈಪ್​ಲೈನ್​​ ಬ್ಲಾಸ್ಟ್ ಆಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ವಿಧಿವಿಜ್ಞಾನ ತಂಡಗಳು ಕೂಡ ಅಲ್ಲಿಗೆ ಭೇಟಿ ನೀಡಿ, ಸಮಗ್ರ ಪರಿಶೀಲನೆ ನಡೆಸಿದ್ದು ಶೀಘ್ರದಲ್ಲೇ ಕಾರಣ ಗೊತ್ತಾಗಲಿದೆ. ಸ್ಫೋಟ ನಡೆದ ಜಾಗದ ಸಮೀಪವೇ ಇದ್ದ ರೆಸ್ಟೋರೆಂಟ್ ಮತ್ತು ಇತರ ಕೆಲವು ಕಟ್ಟಡಗಳ ಕಿಟಕಿಗಳಿಗೆ ಹಾನಿಯಾಗಿದೆ. ಅದೃಷ್ಟಕ್ಕೆ ಯಾರದ್ದೂ ಜೀವ ಹೋಗಲಿಲ್ಲ ಎಂದು ವರದಿಯಾಗಿದೆ. ಆದರೂ ಸದ್ಯ ಪಂಜಾಬ್​​ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಖಲಿಸ್ತಾನಿಗಳ ಪುಂಡಾಟ ಹೆಚ್ಚಿದೆ. ಈಗಾಗಲೇ ಅಲ್ಲಿನ ಗುಪ್ತಚರ ಇಲಾಖೆ ಪ್ರಧಾನ ಕಚೇರಿ, ಪೊಲೀಸ್ ಇಲಾಖೆ ಮೇಲೆಲ್ಲ ದಾಳಿಗಳಾಗಿದ್ದವು. ಹೀಗಾಗಿ ಈ ಸ್ಫೋಟವನ್ನೂ ಸರಳವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ.

ಇದನ್ನೂ ಓದಿ: Cylinder blast: ಸಿಲಿಂಡರ್ ಸ್ಫೋಟ, ಅಂಗಡಿ ಧ್ವಂಸ, ಒಬ್ಬನಿಗೆ ಗಾಯ

Exit mobile version