ನವ ದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಜೀವವನ್ನು ಹಿಂಡುವಷ್ಟು (Delhi Cold Wave) ಚಳಿ ಬೀಳುತ್ತಿದೆ. ಶನಿವಾರ ಕನಿಷ್ಠ ತಾಪಮಾನ 1.5ಡಿಗ್ರಿ ಸೆಲ್ಸಿಯಸ್ಗೆ ಇಳಿದಿತ್ತು. ಇಂದು ಕೂಡ ಇದೇ ಪರಿಸ್ಥಿತಿ ಮುಂದುವರಿದಿದ್ದು ಕನಿಷ್ಠ 1.9ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಎಲ್ಲಿ ನೋಡಿದರೂ ದಟ್ಟವಾದ ಮಂಜು ಕವಿದಿದ್ದು, ಜನರು ಮನೆಯಿಂದ ಹೊರಬೀಳದ ಪರಿಸ್ಥಿತಿ ಉಂಟಾಗಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ್ ಮತ್ತು ಜಮ್ಮು-ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಬೀಳುತ್ತಿರುವ ಚಳಿಗಿಂತಲೂ ಹೆಚ್ಚು ಚಳಿ ಸದ್ಯ ದೆಹಲಿಯಲ್ಲಿ ಬೀಳುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹಾಗೇ, ದೆಹಲಿ ಮತ್ತು ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ತುರ್ತು ಕೆಲಸ ಇಲ್ಲದ ಹೊರತು ಮನೆಯಿಂದ ಹೊರಬೀಳಬೇಡಿ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ದೆಹಲಿಯಲ್ಲಿನ ಮಂಜು ಕವಿದ ವಾತಾವರಣದ ಕಾರಣದಿಂದ ಹಲವು ವಿಮಾನಗಳ ಸಂಚಾರ ವಿಳಂಬವಾಗಿದೆ. ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಮತ್ತು ಇಲ್ಲಿಗೆ ತಲುಪಬೇಕಿದ್ದ ಸುಮಾರು 20 ವಿಮಾನಗಳನ್ನು ತಡೆಹಿಡಿಯಲಾಗಿದೆ. ವಾತಾವರಣದಲ್ಲಿ ಮಂಜು ತೆರವಾಗಿ, ಸ್ಪಷ್ಟ ಬೆಳಕು ಮೂಡುವವರೆಗೂ ವಿಮಾನ ಸಂಚಾರ ಸಾಧ್ಯವಿಲ್ಲ ಎಂದು ಏರ್ಪೋರ್ಟ್ ಆಡಳಿತ ತಿಳಿಸಿದೆ. ಹಾಗೇ, ಸುಮಾರು 36 ರೈಲುಗಳ ಸಂಚಾರವೂ ವಿಳಂಬವಾಗಿದೆ.
ಮನೆಗಳೇ ಇಲ್ಲದ ಜನರ ಪಾಡಂತೂ ತೀರ ಸಂಕಷ್ಟಕ್ಕೀಡಾಗಿದೆ. ಕೂಲಿ ಕಾರ್ಮಿಕರು, ಇನ್ನಿತರ ಆಶ್ರಯವಿಲ್ಲದ ಜನರು ಫೂಟ್ಪಾತ್ ಮೇಲೆ ಬೆಂಕಿ ಹಾಕಿಕೊಂಡು ಚಳಿಯಿಂದ ಪಾರಾಗುವ ಪ್ರಯತ್ನ ಮಾಡುತ್ತಿದ್ದಾರೆ. ಬೀಡಾಡಿ ಹಸು, ನಾಯಿ ಮತ್ತಿತರ ಪ್ರಾಣಿಗಳೂ ಚಳಿಗೆ ತತ್ತರಿಸಿವೆ. ಇನ್ನೂ ಮೂರ್ನಾಲ್ಕು ದಿನ ದೆಹಲಿಯಲ್ಲಿ ಇದೇ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ: Winter food | ಚಳಿಗಾಲದಲ್ಲಿ ಈ ಹಲ್ವಾಗಳ ಟೇಸ್ಟ್ ನೋಡದಿದ್ದರೆ ಬದುಕು ವೇಸ್ಟ್ !