Site icon Vistara News

Fact-Check | ಚೀತಾ ತಂದ ವಿಮಾನಕ್ಕೆ ವಿಶೇಷವಾಗಿ ಈಗೇನು ಹುಲಿಯ ಚಿತ್ರ ಪೇಂಟ್‌ ಮಾಡಿರಲಿಲ್ಲ!

Fact-Check

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹುಟ್ಟು ಹಬ್ಬದಂದು ಎಂಟು ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. ಈ ಚೀತಾಗಳನ್ನು ನಮೀಬಿಯಾದಿಂದ ಭಾರತಕ್ಕೆ ತಂದ ವಿಮಾನ ಯಾವುದು? ಅದನ್ನು ವಿಶೇಷವಾಗಿ ಸಿದ್ಧಪಡಿಸಲಾಗಿತ್ತೇ? ಹುಲಿ ಮುಖದ ವಿಮಾನವನ್ನು ಅದಕ್ಕಾಗಿ ಸಿದ್ಧಪಡಿಸಲಾಗಿತ್ತೇ? ಈ ಪ್ರಶ್ನೆಗಳು ಈಗ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿವೆ.

ನಮೀಬಿಯಾದಿಂದ ಮೂರು ಗಂಡು ಮತ್ತು ಐದು ಹೆಣ್ಣು ಸೇರಿ ಒಟ್ಟು ಎಂಟು ಚೀತಾಗಳನ್ನು ಸರಕು ವಿಮಾನದಲ್ಲಿ ಕರೆತರಲಾಗಿದೆ. ಈ ವಿಮಾನದ ಮುಂಭಾಗವನ್ನು ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಯ ಮುಖದ ಚಿತ್ರವನ್ನು ಚಿತ್ರಿಸಲಾಗಿದೆ ಎಂದು ವರದಿಯಾಗಿತ್ತು. ನಮೀಬಿಯಾದಲ್ಲಿರುವ ಭಾರತದ ಹೈಕಮಿಷನ್‌ ಹುಲಿಯ ಮುಖದ ಚಿತ್ರ ಇರುವ ವಿಮಾನವೊಂದರ ಫೋಟೊ ಟ್ವೀಟ್‌ ಮಾಡಿದ್ದು, ಇದನ್ನು ಎಲ್ಲ ಮಾಧ್ಯಮಗಳೂ ವರದಿ ಮಾಡಿದ್ದವು. ಆದರೆ ಚೀತಾಗಳನ್ನು ತಂದ ವಿಮಾನ ವಿಶೇಷ ವಿಮಾನವಾದರೂ ಅದರ ಮುಖವನ್ನು ಹುಲಿಯ ಮುಖದಿಂದ ಚಿತ್ರಿಸಿದ್ದು, ಈಗೇನೂ ಅಲ್ಲ!

ಹೌದು, 2015ರಲ್ಲಿಯೇ ಮಾಸ್ಕೊದ ಟ್ರಾನ್ಸೆರೊ ಏರ್ ಲೈನ್ಸ್ ಕಂಪನಿ ಹುಲಿ, ಚಿರತೆ ಮತ್ತಿತತರ ಪ್ರಾಣಿಗಳ ಮುಖಚಿತ್ರವನ್ನು ವಿಮಾನದ ಮುಂಭಾಗದಲ್ಲಿ ಚಿತ್ರಿಸಿದ ವಿಮಾನಗಳ ಹಾರಾಟವನ್ನು ಆರಂಭಿಸಿತ್ತು. ಈಗ ಅದರಲ್ಲಿ ಹುಲಿಯ ಮುಖಚಿತ್ರವಿರುವ ವಿಮಾನವನ್ನು ಚೀತಾಗಳ ಸಾಗಾಟಕ್ಕೆ ಬಳಸಲಾಗಿತ್ತು. ಆದರೆ ಭಾರತಕ್ಕೆ ಚೀತಾವನ್ನು ತರಲೆಂದೇ ಅದನ್ನು ವಿಶೇಷವಾಗಿ ಪೇಂಟ್‌ ಮಾಡಿರಲಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ.

ಶನಿವಾರ ಮುಂಜಾನೆ 7.45ರ ಹೊತ್ತಿಗೆ ನಮೀಬಿಯಾದಿಂದ ಹೊರಟಿದ್ದ ವಿಮಾನ (special Boeing 747) ಮಾಸ್ಕೊದ ಟ್ರಾನ್ಸೆರೊ ಏರ್ ಲೈನ್ಸ್ ಗ್ವಾಲಿಯರ್​​ನಲ್ಲಿ ಲ್ಯಾಂಡ್ ಆಗಿತ್ತು. ಅಲ್ಲಿಂದ ಏರ್​ಫೋರ್ಸ್​​ನ ಹೆಲಿಕಾಪ್ಟರ್ ಮೂಲಕ ಕುನೋ ನ್ಯಾಷನಲ್​ ಪಾರ್ಕ್​​ಗೆ ಈ ಚೀತಾಗಳನ್ನು ಕರೆದೊಯ್ಯಲಾಗಿತ್ತು.

ನಮೀಬಿಯಾದಿಂದ ಚೀತಾವನ್ನು ಕರೆತಂದ ವಿಮಾನ ಭಾರತಕ್ಕೆ ಸೇರಿದ್ದಲ್ಲ. ಇದನ್ನು ವಿಶೇಷವಾಗಿ ಚಿತ್ರಿಸಿರಲೂ ಇಲ್ಲ. ಹಾಗೆ ವಿಶೇಷವಾಗಿ ಚಿತ್ರಿಸುವುದಾಗಿದ್ದರೆ ಹುಲಿಯ ಮುಖದ ಬದಲು ಚೀತಾದ ಚಿತ್ರವನ್ನೇ ಪೇಂಟ್‌ ಮಾಡಲಾಗುತ್ತಿತ್ತು. ಸದ್ಯ ಈ ವಿಮಾನ ಅಕ್ಯುಲೈನ್‌ ಇಂಟರ್‌ನ್ಯಾಷನಲ್‌ ಎಂಬ ವಿಮಾನಯಾನ ಸಂಸ್ಥೆಗೆ ಸೇರಿದ್ದು, ಅದನ್ನು ಈ ಸಾಗಾಟಕ್ಕೆ ಬಳಸಲಾಗಿದೆ ಎಂದು ಈ ಯೋಜನೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ | ವಿಸ್ತಾರ ವಿಶೇಷ: ʼಮೂಕ ಪ್ರಾಣಿಗಳ ಮೇಲೆ ಅವನಿಗೆ ಅಪಾರ ಪ್ರೀತಿʼ: ʼಚೀತಾʼ ತಂಡದ ಕನ್ನಡಿಗ ಸನತ್‌ಕೃಷ್ಣ ತಾಯಿಯ ಅಭಿಮಾನದ ಮಾತು

Exit mobile version