ದಕ್ಷಿಣ ರೈಲ್ವೆ ವಲಯದ ಸೂಪರ್ ಪಾಸ್ಟ್ ಎಕ್ಸ್ಪ್ರೆಸ್ ಟ್ರೇನ್ ಆಗಿರುವ ಫಲಕ್ನುಮಾ ಎಕ್ಸ್ಪ್ರೆಸ್ ರೈಲಿನ ಮೂರು ಕೋಚ್ಗಳಲ್ಲಿ ಇಂದು ಬೆಂಕಿ (Fire in Train) ಕಾಣಿಸಿಕೊಂಡಿದೆ. ಹೈದರಾಬಾದ್ನ ಸಿಕಂದರಾಬಾದ್-ಹೌರಾ ಮಧ್ಯೆ ಸಂಚರಿಸುವ ಈ ರೈಲು ಇಂದು ಬೊಮ್ಮಾಯ್ಪಲ್ಲಿ-ಪಗಾಡಿಪಲ್ಲಿ ಮಾರ್ಗದಲ್ಲಿ ಸಂಚರಿಸುವ ವೇಳೆ ಈ ಬೆಂಕಿ ಅವಘಡ (Falaknuma Express Catches Fire) ಆಗಿದೆ. ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲ. ಇದು ಮೂರೂ ಕೋಚ್ನಲ್ಲಿ ಇದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೈದರಾಬಾದ್ಗೆ ವಾಪಸ್ ಕರೆದುಕೊಂಡು ಬರಲಾಗಿದೆ. ಹಾಗೇ, ಬೆಂಕಿ ಬೀಳಲು ಕಾರಣವೇನು ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ರೈಲಿನ ಎಸ್3, ಎಸ್4 ಮತ್ತು ಎಸ್5 ಕೋಚ್ಗಳಲ್ಲಿ ಕಡುಗಪ್ಪು ಹೊಗೆ ಬರಲು ಶುರುವಾಯಿತು. ಬೊಮ್ಮಾಯ್ಪಲ್ಲಿ ಹಳ್ಳಿಯ ಬಳಿಯೇ ರೈಲು ನಿಲ್ಲಿಸಲಾಯಿತು. ಪ್ರಯಾಣಿಕರೇ ಮುನ್ನೆಚ್ಚರಿಕೆ ವಹಿಸಿದರು. ಕೂಡಲೇ ತಮ್ಮ ಕೋಚ್ಗಳಿಂದ ಕೆಳಗೆ ಹಾರಿ, ಓಡಿ ಹೋದರು. ಬೆಂಕಿಯ ಕೆನ್ನಾಲಿಗೆ ಚಾಚುವ ಒಳಗೆ ಪ್ರಯಾಣಿಕರು ಪಾರಾಗಿದ್ದರು. ಹಾಗೇ, ವಿಷಯ ತಿಳಿಯುತ್ತಿದ್ದಂತೆ ಸ್ಟೇಶನ್ ಮಾಸ್ಟರ್, ಡ್ಯೂಟಿಯಲ್ಲಿದ್ದ ಅಧಿಕಾರಿಗಳೆಲ್ಲ ಕೂಡಲೇ ಅಲ್ಲಿಗೆ ತೆರಳಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿಯೂ ತೆರಳಿ ಬೆಂಕಿ ನಂದಿಸಿದ್ದಾರೆ.
ಇದನ್ನೂ ಓದಿ: Odisha Train Accident: ಒಡಿಶಾ ರೈಲು ದುರಂತಕ್ಕೆ ಮಾನವ ಪ್ರಮಾದವೇ ಕಾರಣ ಎಂದ ತನಿಖೆ, ಯಾರು ಆ ವ್ಯಕ್ತಿ?
ಇಡೀ ರೈಲಿಗೆ ಬೆಂಕಿ ಹರಡುವುದನ್ನು ತಪ್ಪಿಸಲು ಕೂಡಲೇ ಕ್ರಮ ಕೈಗೊಳ್ಳಲಾಯಿತು. ಬೆಂಕಿ ಬಿದ್ದಿದ್ದ ಕೋಚ್ಗಳನ್ನು ರೈಲಿನಿಂದ ಬೇರ್ಪಡಿಸಲಾಯಿತು. ಅಂದಹಾಗೇ, ಈ ರೈಲಿನ ಕೋಚ್ಗಳಿಗೆ ಬೆಂಕಿ ಬೀಳಲು ಕಾರಣವಾಗಿದ್ದು ಕಿಡಿಗೇಡಿಗಳ ಕೃತ್ಯ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಅಂದು ಕರ್ತವ್ಯದಲ್ಲಿದ್ದ ಸ್ಟೇಶನ್ ಮಾಸ್ಟರ್ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ವಿಧಿವಿಜ್ಞಾನ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.