ನವ ದೆಹಲಿ: ಜುಲೈ 24 (ನಾಳೆ) ರಾಮನಾಥ ಕೋವಿಂದ್ ಅವರ ರಾಷ್ಟ್ರಪತಿ ಹುದ್ದೆ ಅವಧಿ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಅವರಿಗೆ ಇಂದು ಸಂಸತ್ತಿನಲ್ಲಿ ಬೀಳ್ಕೊಡುಗೆ ನೀಡಲಾಯಿತು. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂಬಿರ್ಲಾ ಸೇರಿ ಎಲ್ಲ ಬಹುತೇಕ ಎಲ್ಲ ಸಂಸದರೂ ಪಾಲ್ಗೊಂಡಿದ್ದರು. ಸಮಾರಂಭದ ವಿಡಿಯೋವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ನಾಳೆ ನಿರ್ಗಮಿಸುತ್ತಿರುವ ರಾಮನಾಥ ಕೋವಿಂದ್‌ಗಾಗಿ ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಔತಣಕೂಟ ಏರ್ಪಡಿಸಿದ್ದರು. ಇದರಲ್ಲಿ ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸಂಸದರು ಪಾಲ್ಗೊಂಡಿದ್ದರು. ಅಷ್ಟೇ ಅಲ್ಲ, ಈ ಔತಣಕೂಟ ತುಂಬ ವಿಶೇಷವಾಗಿತ್ತು. ಕೇವಲ ದೆಹಲಿಯ ಪ್ರಮುಖರಷ್ಟೇ ಅಲ್ಲ, ದೇಶಾದ್ಯಂತ ವಿವಿಧ ರಾಜ್ಯಗಳ ಬುಡಕಟ್ಟು ಜನಾಂಗದ ಪ್ರಮುಖರು, ಪದ್ಮ ಪ್ರಶಸ್ತಿ ಪುರಸ್ಕೃತರೂ ಪಾಲ್ಗೊಂಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. ಹಾಗೇ, ಮುಂದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಭಾಗಿಯಾಗಿದ್ದರು. ಇವರು ಸೋಮವಾರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಇದನ್ನೂ ಓದಿ: ಬುಡಕಟ್ಟು ಕಟ್ಟಿಕೊಟ್ಟ ಬಲ; ದ್ರೌಪದಿ ಮುರ್ಮುಗೆ ಪ್ರತಿಪಕ್ಷಗಳಿಂದ ಬಿದ್ದ ಅಡ್ಡಮತ 143 !