ಈಗಂತೂ ಎಲ್ಲೆಲ್ಲೂ ಟೊಮ್ಯಾಟೊದೇ ಸುದ್ದಿ. ಬೆಲೆ ಏರಿಸಿಕೊಂಡು (Tomato Price) ಬೀಗುತ್ತಿರುವ ಟೊಮ್ಯಾಟೊ ತನ್ನ ಬೆಳೆಗಾರರ ಕೈ ಹಿಡಿದು ನಡೆಸುತ್ತಿದೆ. ನೀವೊಮ್ಮೆ ಇಂಟರ್ನೆಟ್ ತೆರೆದು ನೋಡಿದರೆ ಅಲ್ಲಂತೂ ಟೊಮ್ಯಾಟೊಕ್ಕೆ ಸಂಬಂಧಪಟ್ಟ ಮೀಮ್ಸ್ಗಳು, ಪೋಸ್ಟರ್ಗಳು, ಜೋಕ್ಗಳು, ವಿಡಿಯೊಗಳ ರಾಶಿಯೇ ತುಂಬಿದೆ. ಇಷ್ಟರ ಮಧ್ಯೆ ಇಲ್ಲೊಂದು ಭರ್ಜರಿ ಸುದ್ದಿಯೇ ಇದೆ ನೋಡಿ. ಮಹಾರಾಷ್ಟ್ರದ ಪುಣೆಯ ರೈತ ತುಕಾರಾಂ ಭಾಗೋಜಿ ಗಾಯಕರ್ ಎಂಬುವರು ಈಗ ಟೊಮ್ಯಾಟೊದಿಂದ ಕೋಟ್ಯಧಿಪತಿಯಾಗಿದ್ದಾರೆ. ತುಕಾರಾಂ ಮತ್ತು ಅವರ ಮನೆಯ ಇತರ ಸದಸ್ಯರು ಸೇರಿ ಹೊಲದಲ್ಲಿ ಟೊಮ್ಯಾಟೊ ಬೆಳೆದಿದ್ದರು. ಒಂದು ತಿಂಗಳಲ್ಲಿ 13 ಸಾವಿರ ಪೆಟ್ಟಿಗೆಗಳಷ್ಟು ಟೊಮ್ಯಾಟೊ ಮಾರಾಟ ಮಾಡಿ ಇದೀಗ 1.5 ಕೋಟಿ ರೂಪಾಯಿ ಸಂಪಾದಿಸಿದ್ದಾರೆ. ಒಂದು ಪೆಟ್ಟಿಗೆಯಲ್ಲಿ ಸಾಮಾನ್ಯವಾಗಿ 20 ಕೆಜಿಗಳಷ್ಟು ಟೊಮ್ಯಾಟೊ ಇರಬಹುದು.
ತುಕಾರಾಂ ಅವರಿಗೆ ಒಟ್ಟು 18 ಎಕರೆ ಕೃಷಿಭೂಮಿಯಿದೆ. ಅದರಲ್ಲಿ 12 ಎಕರೆಗಳಲ್ಲಿ ಟೊಮ್ಯಾಟೊ ಬೆಳೆದಿದ್ದರು. ತುಕಾರಾಂ ಜತೆ ಅವರ ಮಗ ಈಶ್ವರ್ ಗಾಯಕರ್, ಸೊಸೆ ಸೋನಾಲಿ ಕೂಡ ಟೊಮ್ಯಾಟೊ ಕೃಷಿಯಲ್ಲಿ ತೊಡಗಿಕೊಂಡಿದ್ದರು. ನಾವು ಬೆಳೆದಿದ್ದು ಅತ್ಯುತ್ತಮ ತಳಿಯ ಟೊಮ್ಯಾಟೊ. ಕಾಲಕ್ಕೆ ಸರಿಯಾಗಿ ಗೊಬ್ಬರ, ಕೀಟನಾಶಕಗಳನ್ನು ಸಿಂಪಡಿಸಿದ್ದೆವು. ಹೀಗಾಗಿ ಟೊಮ್ಯಾಟೊಕ್ಕೆ ಹುಳ ಬಿದ್ದಿಲ್ಲ. ಬೆಳೆ ಚೆನ್ನಾಗಿ ಇತ್ತು. ಒಳ್ಳೆ ರೀತಿಯಲ್ಲಿ ಕೈ ಸೇರಿತು ಎಂದು ತುಕಾರಾಂ ಕುಟುಂಬ ಹೇಳಿದೆ.
ತುಕಾರಾಂ ಒಂದೇ ಬಾರಿಗೆ ಅಷ್ಟೂ ಟೊಮ್ಯಾಟೊವನ್ನು ಮಾರಲಿಲ್ಲ. ನಾರಾಯಣಗಂಜ್ನಲ್ಲಿರುವ ಜುನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆಯಲ್ಲಿ ಮೊದಲು ಟೊಮ್ಯಾಟೊ ಮಾರಿ ದಿನಕ್ಕೆ 2100 ರೂಪಾಯಿ ಗಳಿಸಿದರು. ಅದಾದ ಮೇಲೆ ಶುಕ್ರವಾರ ಒಂದೇ ದಿನ 900 ಪೆಟ್ಟಿಗೆಗಳಷ್ಟು ಟೊಮ್ಯಾಟೊ ಮಾರಿ, ಒಂದೇ ದಿನದಲ್ಲಿ 18 ಲಕ್ಷ ರೂಪಾಯಿ ಸಂಪಾದಿಸಿ, ಲಕ್ಷಾಧೀಶರಾದರು. ಹಂತಹಂತವಾಗಿ ಹೀಗೆ ಮಾರಾಟ ಮಾಡಿ, ಕೋಟಿ ಸಂಪಾದಿಸಿದ್ದಾರೆ. ಹೀಗೆ ಟೊಮ್ಯಾಟೊ ಬೆಳೆಯಿಂದ ಕೋಟಿಕೋಟಿ ರೂಪಾಯಿ ಬಂದಿದ್ದಕ್ಕೆ ತುಕಾರಾಂ ಮತ್ತು ಕುಟುಂಬಕ್ಕೆ ಖುಷಿಯಿದೆ.
ಇದನ್ನೂ ಓದಿ: Tomato Price in Delhi: ದಿಲ್ಲಿಯಲ್ಲಿ ಕೆಜಿ ಟೊಮೆಟೋಗೆ 90 ರೂ.! ಸರ್ಕಾರದಿಂದಲೇ ರಿಯಾಯ್ತಿ ದರದಲ್ಲಿ ಮಾರಾಟ
ತುಕಾರಾಂ ಕುಟುಂಬದವರು ಟೊಮ್ಯಾಟೊ ಕೃಷಿ ಮಾಡುವಾಗ ಕೆಲಸವನ್ನು ಹಂಚಿಕೊಂಡಿದ್ದರು. ತುಕಾರಾಂ ನಿರ್ದೇಶನದಂತೆ ಸೊಸೆ ಸೊನಾಲಿ ಅವರು ಟೊಮ್ಯಾಟೊ ನಾಟಿ, ಕೊಯ್ಲು, ಪ್ಯಾಕೇಜಿಂಗ್ ಕೆಲಸಗಳನ್ನು ಮಾಡಿದರೆ, ಅವರ ಪುತ್ರ ಈಶ್ವರ್ ಅವರು ಮಾರಾಟ, ನಿರ್ವಹಣೆ, ಹಣಕಾಸಿನ ಉಸ್ತುವಾರಿ ನೋಡಿಕೊಂಡರು. ಮೂರ್ನಾಲ್ಕು ತಿಂಗಳ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.