ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯರಲ್ಲದವರಿಗೂ (Non Locals) ಮತದಾನದ ಹಕ್ಕು ನೀಡುವ ಕುರಿತು ಇತ್ತೀಚೆಗೆ ಹೊರಡಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಪಕ್ಷಗಳ ಆಕ್ರೋಶ ಹೆಚ್ಚಾಗಿದೆ. ಬೇರೆ ರಾಜ್ಯಗಳಿಂದ ಬಂದು, ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರೂ ಚುನಾವಣೆಗಳಲ್ಲಿ ಮತದಾನ ಮಾಡಬಹುದು ಎಂದು ಆದೇಶ ಹೊರಡಿಸಿದ್ದು, ಇದನ್ನು ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ಸೇರಿ ಹಲವು ಪಕ್ಷಗಳು ಖಂಡಿಸಿವೆ. ಹಾಗೆಯೇ, ನ್ಯಾಷನಲ್ ಕಾನ್ಫರೆನ್ಸ್ ವರಿಷ್ಠ ಫಾರೂಕ್ ಅಬ್ದುಲ್ಲಾ (Farooq Abdullah) ಅವರು ಸೋಮವಾರ (ಆಗಸ್ಟ್ ೨೨) ಇದರ ಬಗ್ಗೆ ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆದಿದ್ದಾರೆ.
ಫಾರೂಕ್ ಅಬ್ದುಲ್ಲಾ ಅವರು ಐದು ಪಕ್ಷಗಳು ಕೂಡಿ ರಚಿಸಿರುವ ಗುಪ್ಕರ್ ಕೂಟದ (PAGD-Gupkar alliance) ಅಧ್ಯಕ್ಷರೂ ಆಗಿದ್ದಾರೆ. “ಸ್ಥಳೀಯರಲ್ಲದವರ ಹೆಸರನ್ನೂ ಮತದಾರರ ಪಟ್ಟಿಗೆ ಸೇರಿಸುವ ಕುರಿತು ಇತ್ತೀಚೆಗೆ ಜಮ್ಮು-ಕಾಶ್ಮೀರ ಸರಕಾರ ಮಾಡಿದ ಘೋಷಣೆಯನ್ನು ಫಾರೂಕ್ ಅಬ್ದುಲ್ಲಾ ಅವರು ಖಂಡಿಸಿದ್ದಾರೆ. ಹಾಗಾಗಿ, ಅವರು ಸೋಮವಾರ ತಮ್ಮ ಮನೆಯಲ್ಲಿಯೇ ಸರ್ವಪಕ್ಷಗಳ ಸಭೆ ನಡೆಸಲು ತೀರ್ಮಾನಿಸಿದ್ದು, ಎಲ್ಲ ಪಕ್ಷಗಳಿಗೂ ವೈಯಕ್ತಿಕವಾಗಿ ಮನವಿ ಮಾಡಿದ್ದಾರೆ” ಎಂದು ನ್ಯಾಷನಲ್ ಕಾನ್ಫರೆನ್ಸ್ ವಕ್ತಾರ ಇಮ್ರಾನ್ ನಬಿ ತಿಳಿಸಿದ್ದಾರೆ.
ಏನಿದು ಪ್ರಕರಣ?
ಜಮ್ಮು-ಕಾಶ್ಮೀರದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಕಳೆದ ತಿಂಗಳು ಚುನಾವಣೆ ಆಯೋಗವು ಕಣಿವೆಯಲ್ಲಿ ಮತದಾರರ ಪಟ್ಟಿಗೆ ಹೊಸಬರ ಹೆಸರುಗಳನ್ನು ಸೇರಿಸಿದೆ. ಕಾಶ್ಮೀರದ ನಿವಾಸಿಗಳು ಅಲ್ಲದಿದ್ದರೂ, ಇಲ್ಲಿ ಕೆಲಸ ಮಾಡುವವರು ಕೂಡ ಚುನಾವಣೆಯಲ್ಲಿ ಮತದಾನ ಮಾಡಬಹುದು ಎಂದು ಸರಕಾರ ಘೋಷಿಸಿದೆ. ಹಾಗಾಗಿ, ಕಣಿವೆಯ ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.
ಇದನ್ನೂ ಓದಿ | Non Locals | ಕಾಶ್ಮೀರದಲ್ಲಿ ಸ್ಥಳೀಯರಲ್ಲದವರಿಗೆ ವೋಟರ್ ಐಡಿ? ಪ್ರತಿಪಕ್ಷಗಳ ಆರೋಪವೇನು?