ಚೆನ್ನೈ: ತಮಿಳುನಾಡಿನ ಪುಡುಕೊಟ್ಟೈ ಜಿಲ್ಲೆಯ ಇರಯೂರ್ ಎಂಬ ಗ್ರಾಮದಲ್ಲಿ ಒಂದು ಅಸಹ್ಯಕರ ಘಟನೆ ನಡೆದಿದೆ. ಈ ಹಳ್ಳಿಯಲ್ಲಿ ದಲಿತರಿಗಾಗಿ (ಪರಿಶಿಷ್ಟ ಜಾತಿ) ಮೀಸಲಿಟ್ಟಿದ್ದ ಕುಡಿಯುವ ನೀರಿನ ತೊಟ್ಟಿಯಲ್ಲಿ ಮಾನವ ಮಲ ಬಿದ್ದಿದ್ದು ಪತ್ತೆಯಾಗಿದೆ. ಈ ಹಳ್ಳಿಯಲ್ಲಿ ದಲಿತ ಸಮುದಾಯದ ಸುಮಾರು 100 ಜನರು ಇದ್ದು, ಅವರದ್ದೇ ಒಂದು ಕೇರಿಯಿದೆ. ಹಾಗೇ, ಅವರಿಗಾಗಿಯೇ 10 ಸಾವಿರ ಲೀಟರ್ ಸಾಮರ್ಥ್ಯದ ಪ್ರತ್ಯೇಕ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಲಾಗಿದೆ. ಆದರೆ ಈಗ ದುಷ್ಕರ್ಮಿಗಳು ಆ ನೀರಿನ ತೊಟ್ಟಿಯಲ್ಲಿ ಮಲ ಸುರಿದು ವಿಕೃತಿ ಮೆರೆದಿದ್ದಾರೆ.
ದಲಿತರನ್ನು ಅಸ್ಪೃಶ್ಯರೆಂಬಂತೆ ಪರಿಗಣಿಸುವ ಆಚರಣೆ ಮೊದಲಿನಿಂದಲೂ ಇದ್ದೇಇದೆ. ಈಗೀಗ ಕೆಲವು ಪ್ರದೇಶಗಳಲ್ಲಿ ದಲಿತರನ್ನು ಶೋಷಣೆ ಮಾಡದೆ ಇದ್ದರೂ, ಹಲವು ಪ್ರದೇಶಗಳು, ಅದರಲ್ಲೂ ಹಳ್ಳಿಗಳಲ್ಲಿ ತಾರತಮ್ಯ ಮುಂದುವರಿದಿದೆ. ಅದರಲ್ಲಿ ಈ ಇರಯೂರ್ ಗ್ರಾಮವೂ ಒಂದು.
ಇರಯೂರ್ ಗ್ರಾಮದಲ್ಲಿ ಇತ್ತೀಚೆಗೆ ಹಲವು ಮಕ್ಕಳು ಅಸ್ವಸ್ಥರಾಗಿದ್ದರು. ಅವರ ಆರೋಗ್ಯ ಕೆಡುತ್ತಿತ್ತು. ಹೀಗೆ ಅನಾರೋಗ್ಯಕ್ಕೀಡಾದ ಮಕ್ಕಳನ್ನು ಪರಿಶೀಲನೆ ನಡೆಸಿದ ವೈದ್ಯರು ‘ಕುಡಿಯುವ ನೀರು ಕಲುಷಿತಗೊಂಡಂತೆ ಕಾಣುತ್ತಿದೆ, ಒಮ್ಮೆ ಪರೀಕ್ಷಿಸಿ’ ಎಂದು ಹೇಳಿದ್ದರು. ಅದರಂತೆ ದಲಿತ ಸಮುದಾಯದ ಕೆಲವು ಯುವಕರು ನೀರಿನ ಟ್ಯಾಂಕ್ನ್ನು ಹತ್ತಿ ನೋಡಿದಾಗ ಅದರಲ್ಲಿ ಮಾನವ ಮಲ ಇದ್ದಿದ್ದು ಕಂಡುಬಂದಿದೆ.
ಘಟನೆಯ ಬೆನ್ನಲ್ಲೇ ಪುಡುಕೊಟ್ಟೈ ಜಿಲ್ಲಾಧಿಕಾರಿ ಕವಿತಾ ರಾಮು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂದಿತಾ ಪಾಂಡೆ ಅವರು ಇರಯೂರ್ ಗ್ರಾಮಕ್ಕೆ ಭೇಟಿ ಕೊಟ್ಟು ಅಲ್ಲಿನ ಸ್ಥಿತಿ ಪರಿಶೀಲನೆ ಮಾಡಿದ್ದಾರೆ. ಹಾಗೇ, ಜಿಲ್ಲಾಡಳಿತದ ತಂಡವೊಂದು ಆ ಹಳ್ಳಿಯಲ್ಲಿ ದಲಿತ ಸಮುದಾಯದವರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ವಿಚಾರಣೆ ನಡೆಸಿದೆ. ಈ ಹಳ್ಳಿಯಲ್ಲಿ ದಲಿತ ಅಸ್ಪೃಶ್ಯತೆ ಮಿತಿಮೀರಿದೆ. ಚಹಾ ಅಂಗಡಿಗಳಲ್ಲಿ ದಲಿತರಿಗೆಂದೇ ಪ್ರತ್ಯೇಕ ಗ್ಲಾಸ್ ಇಡಲಾಗಿದೆ. ಯಾವುದೇ ದೇವಸ್ಥಾನಗಳ ಆವರಣಕ್ಕೂ ಅವರಿಗೆ ಪ್ರವೇಶ ಇಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ. ಇನ್ನು ದಲಿತರಿಗೆ ನಿರ್ಬಂಧ ಹೇರಿದ ಕೆಲವರ ವಿರುದ್ಧ ಪ್ರಕರಣವೂ ದಾಖಲಾಗಿದೆ. ಆದರೆ ನಿರ್ದಿಷ್ಟವಾಗಿ ಈ ಕೃತ್ಯ ಎಸಗಿದ್ದು ಯಾರು ಎಂಬುದು ಗೊತ್ತಾಗಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಈ ಹಳ್ಳಿಯ ರಾಜಕೀಯ ಮುಖಂಡರಾದ ಮೋಕ್ಷಾ ಮೋಕ್ಷ ಗುಣವಲಗನ್ ಅವರು ಘಟನೆ ಬಗ್ಗೆ ಮಾತನಾಡಿ, ‘ನೀರಿನ ಟ್ಯಾಂಕ್ ಒಳಗೆ ಮತ್ತು ಟ್ಯಾಂಕ್ ಸಮೀಪ ಅಪಾರ ಪ್ರಮಾಣದಲ್ಲಿ ಮಲ ಪತ್ತೆಯಾಗಿದೆ. ನೀರೆಲ್ಲ ಹಳದಿ ಬಣ್ಣಕ್ಕೆ ತಿರುಗಿದೆ. ಟ್ಯಾಂಕ್ ಸುತ್ತಲಿನ ಬೇಲಿಯೆಲ್ಲ ಮುರಿದುಬಿದ್ದಿದೆ. ಅದೇ ನೀರನ್ನೇ ಇಲ್ಲಿನ ದಲಿತ ಸಮುದಾಯದವರು ಕುಡಿಯುತ್ತಿದ್ದಾರೆ. ಎಷ್ಟು ದಿನದಿಂದ ಹೀಗಾಗಿದೆ ಗೊತ್ತಿಲ್ಲ. ಈಗ ಮಕ್ಕಳು ಅನಾರೋಗ್ಯಕ್ಕೀಡಾದಾಗಲೇ ವಿಷಯ ಗೊತ್ತಾಗಿದ್ದು’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Shimoga News | ಬಿಜೆಪಿ ದಲಿತರ ದಾರಿ ತಪ್ಪಿಸುತ್ತಿದೆ, ಚಿತ್ರದುರ್ಗದಲ್ಲಿ ಕಾಂಗ್ರೆಸ್‌ನಿಂದ ಸಮಾವೇಶ: ಧರ್ಮಸೇನ