ಹೈದರಾಬಾದ್: ಚಲನಚಿತ್ರ ನಿರ್ದೇಶಕ, ನಿರ್ಮಾಪಕ ರಾಮ್‌ಗೋಪಾಲ್ ವರ್ಮ (Filmmaker Ram Gopal Varma) ವಿರುದ್ಧ ಹೈದರಾಬಾದ್‌ನ ಮಿಯಾಪುರ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ರಾಮ್ ಗೋಪಾಲ್ ವರ್ಮಾ ತನ್ನಿಂದ 56 ಲಕ್ಷ ರೂಪಾಯಿ ಪಡೆದು, ಅದನ್ನು ವಾಪಸ್ ಕೊಡಲಿಲ್ಲ ಎಂದು ಶೇಖರ ಆರ್ಟ್ ಕ್ರಿಯೇಶನ್ಸ್ ಎಂಬ ಪ್ರೊಡಕ್ಷನ್ ಹೌಸ್‌ನ ಮಾಲೀಕ ಕೊಪ್ಪದ ಶೇಖರ್ ರಾಜು ಅವರು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
2020ರಲ್ಲಿ ರಾಮ್‌ಗೋಪಾಲ್ ವರ್ಮಾ ಅವರು ದಿಶಾ ಎಂಬ ತೆಲುಗು ಸಿನಿಮಾ ಮಾಡುತ್ತೇನೆ ಎಂದು ಹೇಳಿ ನನ್ನಿಂದ 56 ಲಕ್ಷ ರೂಪಾಯಿ ಪಡೆದಿದ್ದಾರೆ. ನನಗೆ 2019ರಿಂದಲೂ ವರ್ಮಾ ಪರಿಚಯ. ನಮ್ಮಿಬ್ಬರಿಗೂ ಸ್ನೇಹಿತರಾಗಿದ್ದ ಒಬ್ಬರ ಮೂಲಕ ನನಗೂ ರಾಮ್‌ಗೋಪಾಲ್ ವರ್ಮಾ ಸ್ನೇಹ ಬೆಳೆಯಿತು. ದಿಶಾ ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಿ ನನಗೆ ಕರೆ ಮಾಡಿದ ವರ್ಮಾ, 20 ಲಕ್ಷ ರೂಪಾಯಿ ನೀಡುವಂತೆ ಕೇಳಿದರು. ಆರೇ ತಿಂಗಳಲ್ಲಿ ವಾಪಸ್ ಕೊಡುವುದಾಗಿ ಭರವಸೆಯನ್ನೂ ಕೊಟ್ಟರು. ಅದರಂತೆ ನಾನು 2020ರ ಜನವರಿ 22ರಂದು ಚೆಕ್ ಮೂಲಕ ಹಣ ವರ್ಗಾವಣೆ ಮಾಡಿದೆ. ಅದಾದ ಸ್ವಲ್ಪ ದಿನಗಳಲ್ಲಿ, ಅಂದರೆ 2020ರ ಫೆಬ್ರವರಿ ಎರಡನೇ ವಾರದಲ್ಲಿ ಮತ್ತೆ ತನಗೆ ಹಣಕಾಸಿನ ಅಗತ್ಯವಿದೆ ಎಂದು ನನಗೆ ಹೇಳಿದ್ದಲ್ಲದೆ, 28 ಲಕ್ಷ ರೂಪಾಯಿ ಕೊಡುವಂತೆ ಮನವಿ ಮಾಡಿದರು. ನಾನೂ ಅವರನ್ನು ನಂಬಿ ಹಣಕೊಟ್ಟೆ. ಅಲ್ಲಿಗೆ ನಾನು ವರ್ಮಾಗೆ ಕೊಟ್ಟಿದ್ದು 56 ಲಕ್ಷ ರೂಪಾಯಿ ಆಯಿತು. ಆದರೆ ಎರಡು ವರ್ಷಗಳೇ ಕಳೆದರೂ ಹಣ ವಾಪಸ್ ಕೊಡಲಿಲ್ಲ ಎಂದು ಶೇಖರ್ ರಾಜು ದೂರು ನೀಡಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ ರೇಪ್ ಕೇಸ್ ಎನ್‌ಕೌಂಟರ್ ಉದ್ದೇಶ ಪೂರ್ವಕ ಎಂದ ಸುಪ್ರೀಂಕೋರ್ಟ್ ರಚಿತ ಆಯೋಗ
ಅಷ್ಟೇ ಅಲ್ಲ, ಈ ದಿಶಾ ಸಿನಿಮಾವನ್ನು ನಿರ್ಮಾಣ ಮಾಡಿದ್ದಾಗಲೀ, ನಿರ್ದೇಶನ ಮಾಡಿದ್ದಾಗಲಿ ರಾಮ್ ಗೋಪಾಲ್ ವರ್ಮಾ ಅಲ್ಲ ಎಂದು ನನಗೆ ಗೊತ್ತಾಗಿದ್ದೇ 2021ರ ಜನವರಿಯಲ್ಲಿ. ನನ್ನ ಬಳಿ ಸುಳ್ಳು ಹೇಳಿ ಹಣ ಪಡೆದಿದ್ದಲ್ಲದೆ, ಅದನ್ನು ವಾಪಸ್ ಕೂಡ ಕೊಟ್ಟಿಲ್ಲ ಎಂದೂ ರಾಜು ಹೇಳಿದ್ದಾರೆ. ಈ ಬಗ್ಗೆ ರಾಮ್ ಗೋಪಾಲ್ ವರ್ಮಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ದಿಶಾ ಎನ್ನುವ ಸಿನಿಮಾ 2022ರ ಜನವರಿ 1ರಂದು ಬಿಡುಗಡೆಯಾಗಿದೆ. 2019ರ ಜನವರಿಯಲ್ಲಿ ಹೈದರಾಬಾದ್‌ನಲ್ಲಿ ನಡೆದ ಪಶುವೈದ್ಯೆ ಅತ್ಯಾಚಾರ, ಆರೋಪಿಗಳ ಎನ್‌ಕೌಂಟರ್ ಆಧಾರಿತ ಚಿತ್ರವಾಗಿದ್ದು, ಅನುರಾಗ್ ಕಾಂಚರ್ಲಾ ನಿರ್ಮಾಣ ಮಾಡಿದ್ದಾರೆ. ಆನಂದ್ ಚಂದ್ರ ಅವರ ಚಿತ್ರಕತೆ-ನಿರ್ದೇಶನವಿದೆ.
ಇದನ್ನೂ ಓದಿ: Mother’s Day : ಅಮ್ಮನ ಅಕ್ಕರೆ ತೋರುವ ಎಂಟು ಸಿನಿಮಾಗಳು