ಮುಂಬೈ: ಉದ್ಯಮಿ ಅಶ್ನೀರ್ ಗ್ರೋವರ್ (Ashneer Grover), ಅವರ ಪತ್ನಿ ಮಾಧುರಿ ಜೈನ್ ಗ್ರೋವ್ ಮತ್ತು ಕುಟುಂಬದ ಸದಸ್ಯರಾದ ದೀಪಕ್ ಗುಪ್ತಾ, ಸುರೇಶ್ ಜೈನ್, ಶ್ವೇತಾಂಕ್ ಜೈನ್ ಅವರ ವಿರುದ್ಧ 81 ಕೋಟಿ ರೂ. ವಂಚನೆ ಆರೋಪ ಕೇಳಿ ಬಂದಿದ್ದು, ದೆಹಲಿ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗದಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಈ ವಂಚನೆ ಆರೋಪ ಕಳೆದ ಡಿಸೆಂಬರ್‌ನಲ್ಲೇ ಕೇಳಿಬಂದಿತ್ತು.
ಕಳೆದ ಆರು ತಿಂಗಳಿನಿಂದ, ಭಾರತ್‌ಪೇ ಸಹ-ಸಂಸ್ಥಾಪಕ ಮತ್ತು ಮಾಜಿ ಎಂಡಿ ಅಶ್ನೀರ್ ಗ್ರೋವರ್ ಹಲವಾರು ನ್ಯಾಯಾಲಯದ ವಿವಾದಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಇದನ್ನೂ ಓದಿ: Viral Video : ಮೂರನೇ ಸ್ಥಾನ ಗಳಿಸಿದವಳಿಗೆ ಚಿನ್ನದ ಪದಕ! ಅಂದದ ಮಹಿಮೆಯಿದು ಎನ್ನುತ್ತಿದ್ದಾರೆ ನೆಟ್ಟಿಗರು
ಅಶ್ನೀರ್ ಅವರು ಭಾರತ್‌ಪೇ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದರು. ಆದರೆ ಅವರು ಸಂಸ್ಥೆಯಲ್ಲಿ ಹಣಕಾಸು ಅಕ್ರಮ ಮಾಡಿದ್ದಾಗಿ ಸಂಸ್ಥೆ ದೂರಿದ್ದು 2022ರ ಮಾರ್ಚ್ ತಿಂಗಳಲ್ಲಿ ಅವರನ್ನು ವಜಾ ಮಾಡಲಾಗಿತ್ತು. ಅದಾದ ನಂತರ ಡಿಸೆಂಬರ್‌ನಲ್ಲಿ ಅಶ್ನೀರ್ ಮತ್ತು ಕುಟುಂಬದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಗೂ ಸಿವಿಲ್ ಮೊಕದ್ದಮೆಯನ್ನೂ ಹೂಡಿತ್ತು. ಹಾಗೆಯೇ ಸಂಸ್ಥೆಗೆ ಆದ ಹಾನಿ ಬರಿಸಬೇಕು, ಷೇರುಗಳನ್ನು ಹಿಂಪಡೆಯಬೇಕು ಎಂದು ಕೋರಲಾಗಿತ್ತು. ಸ್ಥಾಪಕ ಎನ್ನುವ ಶೀರ್ಷಿಕೆಯನ್ನು ಅಶ್ನೀರ್ ಬಳಸಬಾರದು ಎಂದು ನಿರ್ಬಂಧ ಹಾಕಿತ್ತು.
ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು ಇದೀಗ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿಯಾಗಿರುವ ಅಶ್ನೀರ್ ಮತ್ತು ಕುಟುಂಬ ಸೆಕ್ಷನ್ 406/408/409/420/467/468/471/120B IPC (ಭಾರತೀಯ ದಂಡ ಸಂಹಿತೆ) ಅಡಿಯಲ್ಲಿ ಶಿಕ್ಷಾರ್ಹವಾದ ಪ್ರಾಥಮಿಕ ಅಪರಾಧಗಳನ್ನು ಮಾಡಿದ್ದಾರೆ ಎಂದು ಎಫ್‌ಐಆರ್ ಪ್ರತಿಯಲ್ಲಿ ಹೇಳಲಾಗಿದೆ. 409 (ಸಾರ್ವಜನಿಕ ಸೇವಕ, ಬ್ಯಾಂಕರ್, ವ್ಯಾಪಾರಿ ಅಥವಾ ಏಜೆಂಟರಿಂದ ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ), 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿಯ ವಿತರಣೆಯನ್ನು ಪ್ರೇರೇಪಿಸುವುದು), 467 (ಮೌಲ್ಯಯುತ ಭದ್ರತೆಯ ಖೋಟಾ, ಉಯಿಲು) ಮತ್ತು 120B (ಕ್ರಿಮಿನಲ್ ಪಿತೂರಿ) ಸೇರಿದಂತೆ ಗಂಭೀರವಾದ ಕ್ರಿಮಿನಲ್ ಅಪರಾಧಗಳ ಎಂಟು ವಿಭಾಗಗಳ ಅಡಿಯಲ್ಲಿ ಅವರ ಮೇಲೆ ಆರೋಪ ಹೊರಿಸಲಾಗಿದೆ.