ಚೆನ್ನೈ: ತಮಿಳುನಾಡಿಗೆ ಬಿಹಾರದಿಂದ ಆಗಮಿಸಿದ್ದ ಹಿಂದಿ ಮಾತನಾಡುವ ವಲಸಿಗರ (Bihar migrant workers) ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ, 12 ವಲಸಿಗರನ್ನು ಈಗಾಗಲೇ ನೇಣು ಬಿಗಿದು ಕೊಲ್ಲಲಾಗಿದೆ ಎಂಬಂಥ ಟ್ವೀಟ್ ಮಾಡಿಕೊಂಡು, ಕೆಲವು ವಿಡಿಯೊಗಳನ್ನು ಶೇರ್ ಮಾಡಿಕೊಂಡಿದ್ದ ಬಿಜೆಪಿ ವಕ್ತಾರ ಪ್ರಶಾಂತ್ ಪಟೇಲ್ ಉಮ್ರಾವ್ ಮತ್ತು ಮೊಹಮ್ಮದ್ ತನ್ವೀರ್ ಎಂಬ ಪತ್ರಕರ್ತನ ವಿರುದ್ಧ ತಮಿಳುನಾಡು ಪೊಲೀಸರು ಇಂದು ಎಫ್ಐಆರ್ ದಾಖಲಿಸಿದ್ದಾರೆ. ಇದು ಅಕ್ಷರಶಃ ತಪ್ಪು ಮಾಹಿತಿ. ಯಾವುದೇ ವಲಸಿಗರನ್ನೂ ಇಲ್ಲಿ ಕೊಂದಿಲ್ಲ, ಹಲ್ಲೆಯನ್ನೂ ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ತಮಿಳುನಾಡು ಡಿಜಿಪಿ ಸಿ.ಶೈಲೇಂದ್ರ ಬಾಬು ಅವರು ‘ರಾಜ್ಯದಲ್ಲಿ ಇರುವ ಹಿಂದಿ ಮಾತನಾಡುವ ವಲಸಿಗರನ್ನು ಟಾರ್ಗೆಟ್ ಮಾಡಿ ಯಾವುದೇ ದಾಳಿ ನಡೆಸಲಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳು, ವಲಸಿಗರ ಮೇಲಿನ ಹಲ್ಲೆಯ ವಿಡಿಯೊಗಳು ಅಲ್ಲ. ತಪ್ಪು ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ. ಹಾಗೇ, ಬಿಹಾರ ಪೊಲೀಸರೂ ಕೂಡ ಪ್ರತಿಕ್ರಿಯೆ ನೀಡಿ, ‘ತಮಿಳುನಾಡಿನಲ್ಲಿ ಹಿಂದಿ ಭಾಷಿಕ ವಲಸಿಗರ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಿದೆ ಎಂದು ತಪ್ಪಾದ ವಿಡಿಯೊಗಳನ್ನು ವೈರಲ್ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ. ಈಗ ಬಿಜೆಪಿ ವಕ್ತಾರ ಮತ್ತು ಪತ್ರಕರ್ತ ಇಬ್ಬರೂ ಮಾಡಿದ್ದ ಟ್ವೀಟ್ಗಳು ಡಿಲೀಟ್ ಆಗಿವೆ, ತಪ್ಪು ಮಾಹಿತಿ ಹರಡುವ ಮೂಲಕ, ದ್ವೇಷ-ಅಪರಾಧಗಳಿಗೆ ಪ್ರಚೋದನೆ ನೀಡಿದ್ದ ಆರೋಪದಡಿ ಇಬ್ಬರ ಮೇಲೆಯೂ ಐಪಿಸಿ ಸೆಕ್ಷನ್ನ ವಿವಿಧ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿದ್ದ ತಮಿಳುನಾಡು ಮೂಲದ ವ್ಯಕ್ತಿಯನ್ನು ಶೂಟ್ ಮಾಡಿ ಕೊಂದ ಪೊಲೀಸ್; ಕಳವಳಕಾರಿ ಎಂದ ರಾಯಭಾರಿ ಕಚೇರಿ
ತಮಿಳುನಾಡಿನಲ್ಲಿ ಬಿಹಾರದ ವಲಸಿಗರ ಮೇಲೆ ಹಲ್ಲೆ ನಡೆದಿದೆ, 12 ಜನರನ್ನು ಕೊಲ್ಲಲಾಗಿದೆ ಎಂಬರ್ಥದ ವಿಡಿಯೊಗಳು ವೈರಲ್ ಆಗುತ್ತಿದ್ದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದರು. ಇದೀಗ ಆ ವಿಡಿಯೊಗಳು ತಪ್ಪು ಮಾಹಿತಿ ಬಿತ್ತರಿಸುತ್ತಿವೆ. ಯಾವುದೇ ವಲಸಿಗರ ಮೇಲೆಯೂ ಹಲ್ಲೆ ನಡೆದಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ನಿತೀಶ್ ಕುಮಾರ್ ‘ನಮ್ಮ ರಾಜ್ಯ ಸರ್ಕಾರದ ವತಿಯಿಂದ ನಾಲ್ವರನ್ನು ತಮಿಳುನಾಡಿಗೆ ಕಳಿಸಿ, ಅಗತ್ಯ ಮಾಹಿತಿ ಪಡೆಯಲಾಗುವುದು’ ಎಂದಿದ್ದಾರೆ.