ದೇವಘಡ: ಏರ್ಪೋರ್ಟ್ ನಿಯಮ ಉಲ್ಲಂಘನೆ ಮಾಡಿದ ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ ಮತ್ತು ಮನೋಜ್ ತಿವಾರಿ ಸೇರಿ ಒಟ್ಟು ಏಳು ಜನರ ವಿರುದ್ಧ ಜಾರ್ಖಂಡ್ನ ದೇವಘಡ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಚಾರ್ಟರ್ ವಿಮಾನ ರಾತ್ರಿ ಹೊತ್ತಲ್ಲಿ ಈ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಲು ಅನುಮತಿ ಕೊಡಬೇಕು ಎಂದು ಒತ್ತಾಯಿಸುತ್ತ ಇವರೆಲ್ಲ ಏರ್ಪೋರ್ಟ್ನ ಎಟಿಸಿ (ಏರ್ ಟ್ರಾಫಿಕ್ ಕಂಟ್ರೋಲ್-ವಾಯು ಸಂಚಾರ ನಿಯಂತ್ರಣಾಲಯ)ಗೆ ನುಗ್ಗಿದ್ದರು. ಏರ್ ಟ್ರಾಫಿಕ್ ಕಂಟ್ರೋಲ್ ರೂಂ ಒಂದು ಸೂಕ್ಷ್ಮ ವಲಯವಾಗಿದ್ದು, ಹೈ ಸೆಕ್ಯೂರಿಟಿ ಇರುತ್ತದೆ. ಅಲ್ಲಿ ಹೊರಗಿನವರು ಕಾಲಿಡುವಂತಿಲ್ಲ. ಆದರೆ ಬಿಜೆಪಿ ಸಂಸದರು ಆ ರೂಮಿಗೇ ನುಗ್ಗಿ, ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂಬ ಆರೋಪದಡಿ ಎಫ್ಐಆರ್ ದಾಖಲಾಗಿದೆ.
ಜಾರ್ಖಂಡ್ನ ದೇವಘಡ ವಿಮಾನ ನಿಲ್ದಾಣ ಇದೇ ವರ್ಷ ಜುಲೈನಲ್ಲಿ ಉದ್ಘಾಟನೆಯಾಗಿದೆ. ಇಲ್ಲಿನ್ನೂ ರಾತ್ರಿ ಹೊತ್ತಲ್ಲಿ ಯಾವುದೇ ವಿಮಾನ ಲ್ಯಾಂಡ್ ಆಗಲಾಗಲೀ, ಇಲ್ಲಿಂದ ಟೇಕ್ ಆಫ್ ಆಗಲಾಗಲೀ ಇನ್ನೂ ಅನುಮತಿ ಇಲ್ಲ. ಆದರೆ ಬಿಜೆಪಿ ಸಂಸದರು ಮತ್ತು ಅವರೊಂದಿಗೆ ಇದ್ದವರೆಲ್ಲ ಸೇರಿ ಚಾರ್ಟರ್ ವಿಮಾನದಲ್ಲಿ ಪ್ರಯಾಣ ಮಾಡಲು ನಿರ್ಧರಿಸಿದ್ದರು. ಅದು ರಾತ್ರಿ ಹೊತ್ತಲ್ಲಿ ಟೇಕ್ ಆಫ್ ಆಗಬೇಕಿತ್ತು. ಹೀಗಾಗಿ ವಿಮಾನ ನಿಲ್ದಾಣಕ್ಕೆ ಬಂದು ಒತ್ತಡ ಹೇರಿದ್ದಾರೆ.
ಅಂದಹಾಗೇ, ಸಂಸದ ನಿಶಿಕಾಂತ್ ದುಬೆ, ಅವರ ಪುತ್ರ ಖನಿಷ್ಕ್ ಕಾಂತ್ ದುಬೆ, ಮಹಿಕಾಂತ್ ದುಬೆ, ಸಂಸದ ಮನೋಜ್ ತಿವಾರಿ, ಮುಖೇಶ್ ಪಾಠಕ್, ದೇವ್ತಾ ಪಾಂಡೆ, ಪಿಂಟು ತಿವಾರಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಏರ್ಪೋರ್ಟ್ನ ಭದ್ರತಾ ಉಸ್ತುವಾರಿ ಸುಮನ್ ಅನಾನ್ ಇವರೆಲ್ಲರ ವಿರುದ್ಧ ದೂರು ನೀಡಿದ್ದರು. ಸೂರ್ಯಾಸ್ತ ಆಗುವುದಕ್ಕೂ 30 ನಿಮಿಷ ಮೊದಲೇ ಈ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆ ಸ್ಥಗಿತಗೊಳ್ಳುತ್ತದೆ. ಆದರೆ ಬಿಜೆಪಿಯ ಇಬ್ಬರು ಸಂಸದರು, ಅವರ ಜತೆಗಿರುವವರೆಲ್ಲ ಸೇರಿ ಏರ್ಪೋರ್ಟ್ ಆಡಳಿತದ ಮೇಲೆ ಒತ್ತಡ ಹೇರಿ, ಸುರ್ಯಾಸ್ತದ ನಂತರವೂ ತಮ್ಮ ವಿಮಾನವನ್ನು ಟೇಕ್ ಆಫ್ ಮಾಡಿಸಿದ್ದಾರೆ ಎಂದು ಹೇಳಲಾಗಿದೆ. ಈ ಕ್ರಮವನ್ನು ದೇವಘಡ ಜಿಲ್ಲಾಧಿಕಾರಿ ಮಂಜುನಾಥ್ ಭಜಂತ್ರಿ ಖಂಡಿಸಿದ್ದಾರೆ.
ಇದನ್ನೂ ಓದಿ: Hemant Soren | ಜಾರ್ಖಂಡ್ ಸಿಎಂ ರಾಜೀನಾಮೆ ನೀಡುತ್ತಿಲ್ಲ, ಆದರೆ ಮುಂದಿನ ನಡೆಯೇನು?