Site icon Vistara News

ಪ್ರಧಾನಿ ಮೋದಿಯನ್ನು ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್‌ ಮುಖಂಡ; ಕೇಸ್‌ ದಾಖಲು

Nagpur Congress MLA

ವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ರಾಹುಲ್‌ ಗಾಂಧಿಯನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ದೇಶದ ಎಲ್ಲೆಡೆ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗೇ ಮುಂಬೈನ ಇ.ಡಿ. ಕಚೇರಿಯ ಬಳಿಯೂ ಕಾಂಗ್ರೆಸ್‌ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಅವಹೇಳನ ಮಾಡಿದ ನಾಗ್ಪುರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಶೇಖ್‌ ಹುಸೇನ್‌ (FIR against Nagpur Congress Leader) ವಿರುದ್ಧ ಗಿಟ್ಟಿಖಾಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಸೋಮವಾರ (ಜೂ.13) ಇ.ಡಿ. ಕಚೇರಿಯ ಬಳಿ ನಡೆದ ಪ್ರತಿಭಟನೆ ವೇಳೆ ಕಾಂಗ್ರೆಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಹುಸೇನ್‌, ʼಪ್ರಧಾನಿ ನರೇಂದ್ರ ಮೋದಿ ಅತ್ಯಂತ ಕೆಟ್ಟದಾಗಿ ಸಾಯುತ್ತಾರೆʼ ಎಂದು ಹೇಳಿದ್ದರು. ಈ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್‌ ಆಗಿತ್ತು. ಅದರ ಬೆನ್ನಲ್ಲೇ ಸ್ಥಳೀಯ ಬಿಜೆಪಿ ನಾಯಕರು ದೂರು ನೀಡಿದ್ದರು.

ಇದೀಗ ಪೊಲೀಸರು ಶೇಖ್‌ ಹುಸೇನ್‌ ವಿರುದ್ಧ ಸೆಕ್ಷನ್‌ ಭಾರತೀಯ ದಂಡಸಂಹಿತೆ ಸೆಕ್ಷನ್‌ 294ರಡಿ(ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳ ಪ್ರಯೋಗ ಮಾಡಿದರೆ ಶಿಕ್ಷೆ ವಿಧಿಸುವ ಸೆಕ್ಷನ್‌) ಮತ್ತು ಸೆಕ್ಷನ್‌ 504 (ಶಾಂತಿ ಭಂಗ ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಪ್ರಚೋದನೆ ಮಾಡುವುದನ್ನು ನಿರ್ಬಂಧಿಸುವ ಕಾಯ್ದೆ)ರಡಿ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಇದುವರೆಗೆ ಅವರನ್ನು ಅರೆಸ್ಟ್‌ ಮಾಡಿಲ್ಲ. ರಾಹುಲ್‌ ಗಾಂಧಿ ಇ ಡಿ ವಿಚಾರಣೆ ರಾಜಕೀಯ ಪ್ರೇರಿತ. ಈ ಮೂಲಕ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದ್ದು, ದೇಶದೆಲ್ಲೆಡೆ ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಕಾಂಗ್ರೆಸ್‌ ಪ್ರತಿಭಟನೆ ತಾರಕಕ್ಕೆ; ಇ ಡಿ ಕಚೇರಿ ಹೊರಗೆ ಟೈರ್‌ ಸುಟ್ಟ ಕಾರ್ಯಕರ್ತರು

Exit mobile version