ನವ ದೆಹಲಿ: ಇಡಿ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿರುವ ಸಂಜಯ್ ರಾವತ್ ವಿರುದ್ಧ ಮುಂಬೈನ ವಕೋಲಾ ಪೊಲೀಸ್ ಠಾಣೆಯಲ್ಲಿ ಇನ್ನೊಂದು ಎಫ್‌ಐಆರ್ ದಾಖಲಾಗಿದೆ. ಮಹಿಳೆಯ ಘನತೆಗೆ ಧಕ್ಕೆ ತಂದಿರುವ ಆರೋಪದಡಿ ಈ ಕೇಸ್ ದಾಖಲಾಗಿದ್ದು, ದೂರು ಕೊಟ್ಟವರು ಸ್ವಪ್ನಾ ಪಾಟ್ಕರ್ ಎಂಬುವರು. ಸಂಜಯ್ ರಾವತ್ ಮತ್ತು ಅವರ ಪತ್ನಿ ಭಾಗಿಯಾಗಿದ್ದಾರೆ ಎನ್ನಲಾದ ಭೂಹಗರಣದಲ್ಲಿನ ಅಕ್ರಮ ಹಣ ವರ್ಗಾವಣೆ ಕೇಸ್‌ನ ತನಿಖೆಯನ್ನು ಇಡಿ ನಡೆಸುತ್ತಿದೆ. ಅದರಲ್ಲಿ ಸ್ವಪ್ನಾ ಪಾಟ್ಕರ್ ಒಬ್ಬ ಪ್ರಮುಖ ಸಾಕ್ಷಿ. ಆದರೆ ತನಗೆ ಸಂಜಯ್ ರಾವತ್‌ರಿಂದ ಬೆದರಿಕೆ ಬಂದಿದೆ, ನಾನು ಸಾಕ್ಷಿ ಹೇಳದಂತೆ ಒತ್ತಡ ತಂದಿದ್ದಾರೆ ಎಂದು ಸ್ವಪ್ನಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜುಲೈ 15ರಂದು ನನಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಯನ್ನೊಳಗೊಂಡ ಪತ್ರ ಬಂದಿದೆ. ನಮ್ಮ ಮನೆಗೆ ಬಂದ ನ್ಯೂಸ್‌ಪೇಪರ್‌ನಲ್ಲಿ ಈ ಬೆದರಿಕೆ ಪತ್ರ ಇಟ್ಟು ಕಳಿಸಲಾಗಿತ್ತು. ಅದಾದ ಮೇಲೆ ಒಂದು ಆಡಿಯೋ ಕ್ಲಿಪ್ ಕೂಡ ಬಂತು. ಅದರಲ್ಲೂ ಒಬ್ಬ ವ್ಯಕ್ತಿ ಅಶ್ಲೀಲ ಭಾಷೆಯಲ್ಲಿ ನನಗೆ ಬೆದರಿಕೆ ಹಾಕಿದ್ದಾನೆ ಎಂದು ಸ್ವಪ್ನಾ ಹೇಳಿಕೊಂಡಿದ್ದಾರೆ. ಈ ಆಡಿಯೋ ಕ್ಲಿಪ್‌ನ್ನು ಆಕೆ ಪೊಲೀಸರಿಗೆ ನೀಡಿದ್ದಾರೆ. ಹಾಗೇ, ಆಕೆಯ ಮನವಿ ಮೇರೆಗೆ ಸ್ವಪ್ನಾರಿಗೆ ಸೆಕ್ಯೂರಿಟಿ ಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
1034 ಕೋಟಿ ರೂಪಾಯಿ ಪಾತ್ರಾ ಚಾಲ್ ಭೂಹಗರಣದಲ್ಲಿ ಶಿವಸೇನೆ ಸಂಸದ ಸಂಜಯ್ ರಾವತ್ ಇಡಿಯಿಂದ ಬಂಧಿತರಾಗಿದ್ದಾರೆ. ಜುಲೈ 1ರಂದು ಇಡಿ ಕಚೇರಿಗೆ ಹೋಗಿದ್ದ ಅವರಿಗೆ ಜುಲೈ 20ಕ್ಕೆ ಮತ್ತೆ ಬರುವಂತೆ ಹೇಳಲಾಗಿತ್ತು. ಆದರೆ ಅಧಿವೇಶನದ ನೆಪ ಹೇಳಿ ತಪ್ಪಿಸಿಕೊಂಡಿದ್ದರು. ಆಗಲಿ ಎಂದು ಜುಲೈ 27ಕ್ಕೆ ಹಾಜರಾಗಿ ಎಂದು ಇಡಿ ಹೇಳಿತ್ತು. ಆಗಲೂ ರಾವತ್ ಹೋಗಲಿಲ್ಲ. ಹೀಗಾಗಿ ಇಡಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಜುಲೈ 31ರಂದು ಅವರ ಮನೆಯನ್ನು ಶೋಧಿಸಿದ ಇಡಿ 11.50 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದೆ.
ಇದನ್ನೂ ಓದಿ: ಸಂಜಯ್ ರಾವತ್ ಬಂಧನ ವಿರೋಧಿಸಿ ದೊಡ್ಡಮಟ್ಟದ ಪ್ರತಿಭಟನೆ ನಡೆಸಲು ಶಿವಸೇನೆ ಸಿದ್ಧತೆ